ಮಳೆಗಾಗಿ ಗೋಕರ್ಣದಲ್ಲಿ ದಾದುಮ್ಮನ ಮದುವೆ ಆಚರಣೆ

ಮಳೆಗಾಗಿ ಗೋಕರ್ಣದಲ್ಲಿ ದಾದುಮ್ಮನ ಮದುವೆ ಆಚರಣೆ

ಮಳೆಗಾಗಿ ಗೋಕರ್ಣದಲ್ಲಿ ದಾದುಮ್ಮನ ಮದುವೆ ಆಚರಣೆ

ಗೋಕರ್ಣ: ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸುವ ದಾದುಮ್ಮನ ಮದುವೆ ಇಲ್ಲಿನ ಹುಳಸೆಕೇರಿಯಲ್ಲಿ ಬುಧವಾರ ಆಷಾಢ ಅಮವಾಸ್ಯೆಯ ದಿನದಂದು ಗೋದುಳಿ ಮುಹೂರ್ತದಲ್ಲಿ ಆಚರಿಸಲಾಯಿತು.

ಲಕ್ಷ್ಮೀ ತುಳುಸು ಗೌಡ ವರನಾಗಿ, ಲಕ್ಷ್ಮೀ ಹುಲಿಯಪ್ಪ ಗೌಡ ವಧುವಾಗಿ ವಿವಾಹ ಪರಂಪರೆಯನ್ನು ಆಚರಿಸಿದರು. ನೂರಾರು ಮಹಿಳೆಯರು ಈ ಮದುವೆಗೆ ಸಾಕ್ಷಿಯಾದರು.

ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸುವ, ಮಹಿಳೆ ಮಹಿಳೆಯ ನಡುವೆ ನಡೆಯುವ ಮದುವೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಮದುವೆಯ ಉಡುಗರೆಯಾಗಿ ಗುಟ್ಕಾ ಪೊಟ್ಟಣದ ಮಾಲೆ, ತಿಂಡಿಯ ಪೊಟ್ಟಣ, ಹರಿದ ನೋಟಿನ ಮಾಲೆ, ಸೊಪ್ಪು ಸಸಿ ಮುಂತಾದ ವಸ್ತುವನ್ನು ವಿಡಂಬನೆಗಾಗಿ ಕೊಡಲಾಗುತ್ತದೆ. ವಧು ವರರೂ ಅಷ್ಟೇ ತಮಾಷೆಯಿಂದ ಉಡುಗೊರೆ ಸ್ವೀಕರಿಸುತ್ತಾರೆ.

‘ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಆಷಾಢ ಬಹುಳ ಏಕಾದಶಿಯಂದು ನಡೆದು ಯಾರು ವಧು ವರರು ಎಂಬ ತೀರ್ಮಾನವನ್ನು ಮಹಿಳೆಯರೇ ನಿಶ್ಚಯಿಸುತ್ತಾರೆ. ಈ ವಿವಾಹ ವಿಧಾನದಲ್ಲಿ ಪುರುಷರ ಪಾತ್ರ ನಗಣ್ಯ. ಸಂಪೂರ್ಣವಾಗಿ ಮಹಿಳೆಯರು ಮಾತ್ರ ಭಾಗವಹಿಸಿ ಮದುವೆಯ ಕಾರ್ಯಗಳನ್ನು ಪೂರ್ಣಗೊಳಿಸುವುದು ಕೂಡ ವಿಶಿಷ್ಟವಾಗಿದೆ. ಹುಳಸೇಕೇರಿ ಹಾಲಕ್ಕಿ ಸಮುದಾಯದ ಪ್ರತಿ ಮನೆಯ ಮಹಿಳೆಯರು ಸಂಪ್ರದಾಯದಲ್ಲಿ ಪಾಲ್ಗೊಳ್ಳುತ್ತಾರೆ’ ಎಂಬುದಾಗಿ ಗ್ರಾಮಸ್ಥರು ತಿಳಿಸಿದರು.

‘ತಾರಮಕ್ಕಿಯ ಕೇದಿಗೆ ಗಣಪತಿ ಮತ್ತು ಕರಿದೇವರ ಸನ್ನಿಧಿಯಲ್ಲಿ ವಿವಾಹ ಆಚರಣೆ ನಡೆಯುತ್ತದೆ. ಈ ವೇಳೆ ಎರಡೂ ಕಡೆಯವರು ಜಾನಪದ ಹಾಡಿನ ಮೂಲಕ ಹೊಣೆಗಾರಿಕೆ ಪ್ರದರ್ಶಿಸುತ್ತಾರೆ. ವಿವಾಹ ವಿಧಿಯಲ್ಲಿನ ಮಂತ್ರ ತಂತ್ರಗಳ ಬದಲಾಗಿ ಜಾನಪದ ಹಾಡುಗಳನ್ನು ಹಾಡಲಾಗುತ್ತದೆ. ಹಿರಿಯ ಸುಮಂಗಲಿಯರು ಜಾನಪದ ಹಾಡನ್ನು ಹಾಡುತ್ತ ವಿವಾಹದಲ್ಲಿ ಆಚರಿಸಲಾಗುವ ಎಲ್ಲಾ ವಿಧಿ ವಿಧಾನಗಳನ್ನು ನಡೆಸಿಕೊಡುವುದು ವಿಶೇಷ’ ಎಂದು ಹೇಳಿದರು.

‘ವಿವಾಹ ಪ್ರಕ್ರಿಯೆ ಮುಗಿದ ಮೇಲೆ ಹುಳಸೇಕೇರಿ ಗೌಡರ ಮನೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ, ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆದು ವಧು ವರರಿಗೆ ಉಡುಗೂರೆ ಕೊಡಲಾಗುತ್ತದೆ. ಸಿಹಿ ಹಂಚಿಕೆ ಮತ್ತು ಪಾನೀಯ ವಿತರಣೆಯೊಂದಿಗೆ ದಾದುಮ್ಮನ ಮದುವೆ ಸಂಪನ್ನವಾಗುತ್ತದೆ’ ಎಂದು ವಿವರಿಸಿದರು.

‘ಪೂರ್ವಜರು ದೇವೇಂದ್ರನಿಗೆ ದಾದುಮ್ಮ ಎಂದು ಕರೆಯುತ್ತಿದ್ದರು. ದೇವೇಂದ್ರನ ಕೃಪೆಗೆ ಪಾತ್ರರಾಗಲು ನಡೆಸುವ ಈ ಮದುವೆಗೆ ದಾದುಮ್ಮನ ಮದುವೆ ಎಂದು ಅನಾದಿ ಕಾಲದಿಂದಲೂ ಕರೆಯುತ್ತಾ ಬರಲಾಗಿದೆ. ಮಳೆ, ಬೆಳೆ ಸರಿಯಾಗಿ ಆಗಲಿ ಎಂದು ಈ ಸಂಪ್ರದಾಯ ಪದ್ಧತಿ ಇಂದಿಗೂ ಆಚರಿಸುತ್ತಾ ಬಂದಿದ್ದೇವೆ’ ಎಂದು ಗ್ರಾಮದ ಪ್ರಮುಖ ಮಾಣೇಶ್ವರ ಬೀರಪ್ಪ ಗೌಡ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-20-304077977

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ