
ಕೆರೆಗಳಿಗೆ ಜೀವಕಳೆ ತುಂಬಿದ ‘ಕೃಷ್ಣಾಭಾಗ್ಯ’
ಕುಷ್ಟಗಿ: ಈ ಭಾಗದಲ್ಲಿ ನಿರೀಕ್ಷೆಯಷ್ಟು ಮಳೆಯಿಲ್ಲ, ಬರ ಆವರಿಸಿದೆ. ಆದರೂ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ವರುಣನ ಅವಕೃಪೆಯ ಮಧ್ಯೆಯೂ ಪ್ರವಾಹದಂತೆ ಹಳ್ಳಗಳಲ್ಲಿ ಜುಳು ಜುಳು ಜಲನಿನಾದ. ಆದರೇನು ಹಳ್ಳದ ತಟದಲ್ಲಿನ ಹೊಲಗದ್ದೆಗಳಲ್ಲಿನ ಬೆಳೆಗಳೆಲ್ಲ ಕಮರಿಹೋಗಿವೆ. ಹಸಿರು ಹೊದ್ದು ನಿಲ್ಲಬೇಕಿದ್ದ ಬದುಗಳಲ್ಲಿ ಹುಲ್ಲು ಇಲ್ಲ. ಹೀಗಿರುವಾಗ ಕೆರೆಕಟ್ಟೆ ಹಳ್ಳಗಳೆಲ್ಲ ತುಂಬಿ ಹರಿಯುತ್ತಿವೆ ಎಂದರೆ ಅಚ್ಚರಿ ಸಂಗತಿ.
ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನೀರು ಹರಿಸಿ, ಕೆರೆ ತುಂಬಿಸುವ ಯೋಜನೆಯಲ್ಲಿ ಈ ಭಾಗದ ಕೆರೆಗಳಿಗೆ ನೀರುಣಿಸುವ ಪ್ರಯತ್ನದಿಂದ ಸಾಧ್ಯವಾಗಿದೆ. ಕೆಲ ದಿನಗಳ ಹಿಂದಷ್ಟೇ ಒಣಗಿ ನಿಂತಿದ್ದ ಸುಮಾರು 15 ಕೆರೆಗಳಲ್ಲಿ ಸಾಕಷ್ಟು ನೀರು ಬಂದು ಕೋಡಿ ಹರಿದು, ಮತ್ತೊಂದು ಕೆರೆ ತಲುಪುತ್ತಿದೆ. ಹಿಂಗಾರು ಮಳೆ ಅವಧಿ ಬಂದರೂ ಹನಿ ನೀರು ಕಾಣದ ಹಳ್ಳಗಳಲ್ಲೀಗ ಜನಜಾನುವಾರುಗಳು ಕೊಚ್ಚಿಹೋಗುವಷ್ಟರ ಮಟ್ಟಿಗೆ ಪ್ರವಾಹವಿದೆ.
ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದ ಕೆರೆ ತುಂಬಿಸುವ ಯೋಜನೆ ಈ ಭಾಗದ ಜನರಿಗೆ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಎರಡು ವಾರದ ಹಿಂದಿನಿಂದಲೂ ಆಲಮಟ್ಟಿ ಜಲಾಶಯ ದಲ್ಲಿ ಸಾಕಷ್ಟು ನೀರು ಇತ್ತಾದರೂ ಹೆಚ್ಚುವರಿ ನೀರನ್ನು ಕೆರೆ ತುಂಬಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿರಲಿಲ್ಲ. ಇದರಿಂದ ಇಲ್ಲಿಯ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನರ ಒತ್ತಡಕ್ಕೆ ಮಣಿದ ಕೆಬಿಜೆಎನ್‌ಎಲ್ ಕೆರೆಗಳಿಗೆ ನೀರು ಹರಿಸುತ್ತಿರುವುದು ಕಂಡುಬಂದಿದೆ.
ಹೀಗಾಗಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಇದು ಒಂದು ರೀತಿಯ ಸಂಭ್ರಮಕ್ಕೆ ಕಾರಣವಾಗಿದೆ. ಕೆರೆ, ಹಳ್ಳಕೊಳ್ಳಗಳಿಗೆ ಬಂದು ಜನ ಜಲ ಸಮೃದ್ಧಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊಳವೆಗಳ ಮೂಲಕ ನೀರು ಧುಮ್ಮಿಕ್ಕುವುದನ್ನು ಕಂಡು ಪುಳಕಗೊಳ್ಳುತ್ತಿದ್ದಾರೆ. ಯುವಕರು, ಮಕ್ಕಳು ಜಲಕ್ರೀಡೆಗೆ ಇಳಿದಿದ್ದರೆ. ಕುರಿ ಮೇಕೆ ಜಾನುವಾರಿಗೆ ಬರ ಪರಿಸ್ಥಿತಿಯಲ್ಲೂ ನೀರಿನ ಸಮೃದ್ಧ ಆಸರೆ ದೊರೆತಿದೆ. ಇತ್ತೀಚೆಗಂತೂ ಬಹುತೇಕ ಹಳ್ಳಿಗಳಲ್ಲಿ ನೀರಿನದೇ ಸುದ್ದಿ. ಅಷ್ಟೇ ಏಕೆ ಬಹುತೇಕ ಜನರ ಮೊಬೈಲ್ ಸ್ಟೇಟಸ್‌ಗಳಲ್ಲಿ ಕೆರೆ, ಹಳ್ಳಗಳ ವಿಡಿಯೊಗಳು ಹರಿದಾಡುತ್ತಿವೆ.
ಒಂದೆರಡು ತಿಂಗಳವರೆಗಾದರೂ ಈ ರೀತಿ ನೀರು ಕೆರೆಗಳಿಗೆ ಹರಿಯಬೇಕು, ಈ ವಿಷಯದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎನ್ನುತ್ತಾರೆ ಶಾಖಾಪುರ ರೈತ ಕಾಳಪ್ಪ ಬಡಿಗೇರ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-35-842411726