25 ವರ್ಷ ಕಳೆದರೂ ಬಡವರಿಗೆ ಸಿಗದ ಸೂರು: ಮಾಲೂರಿನಲ್ಲಿ ಕಾರ್ಮಿಕರ ಆಕ್ರೋಶ

25 ವರ್ಷ ಕಳೆದರೂ ಬಡವರಿಗೆ ಸಿಗದ ಸೂರು: ಮಾಲೂರಿನಲ್ಲಿ ಕಾರ್ಮಿಕರ ಆಕ್ರೋಶ

25 ವರ್ಷ ಕಳೆದರೂ ಬಡವರಿಗೆ ಸಿಗದ ಸೂರು: ಮಾಲೂರಿನಲ್ಲಿ ಕಾರ್ಮಿಕರ ಆಕ್ರೋಶ

ಮಾಲೂರು: ನಗರಸಭಾ ವ್ಯಾಪ್ತಿಯಲ್ಲಿ ನಿತ್ಯ ಕೂಲಿ ಮಾಡಿ ದಿನದೂಡುವ ಕಾರ್ಮಿಕರು ಒಂದು ಸೂರು ಹೊಂದಬೇಕೆಂಬ ಕನಸಿನೊಂದಿಗೆ 25 ವರ್ಷಗಳಿಂದ ಚಾತಕ ‍ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಹಲವು ಸರ್ಕಾರಗಳು ಬದಲಾದರು ಅಷ್ಟೂ ಜನರ ಕನಸು ಈವರೆಗೆ ನನಸಾಗಿಲ್ಲ, ಈಡೇರಿಲ್ಲ. ಸುಮಾರು 1,327 ಮಂದಿ ನಗರಸಭಾ ಆಶ್ರಯ ಸಮಿತಿಗೆ ಅರ್ಜಿ ಹಾಕಿದ್ದಾರೆ. ಈ ಪೈಕಿ ಕೆಲವರು ಮೃತಪಟ್ಟಿದ್ದು, ಅವರ ಮಕ್ಕಳು ಕಾಯುತ್ತಿದ್ದಾರೆ.

2002-03ರಲ್ಲಿ ಅಂದಿನ ಶಾಸಕ ಎ.ನಾಗರಾಜು ಪುರಸಭೆ ಮೂಲಕ ಬಡವರಿಗೆ ನಿವೇಶನ ಕಲ್ಪಿಸಲು ಆಶ್ರಯ ಸಮಿತಿ ಯೋಜನೆಯನ್ನು ಜಾರಿಗೊಳಿಸಿದ್ದರು. ನಿವೇಶನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ನಿವೇಶನ ಕಲ್ಪಿಸಲು ₹ 2,500 ಮತ್ತು ಸಾಮಾನ್ಯರಿಗೆ ₹ 5ಸಾವಿರ ಡಿ.ಡಿ ನಿಗದಿಪಡಿಸಲಾಗಿತ್ತು. ಇದರಿಂದ ಸಂಗ್ರಹವಾದ ಹಣದಲ್ಲಿ ಸರ್ವೇ ಸಂಖ್ಯೆ 151ರಲ್ಲಿ 2.30 ಜಮೀನು ಖರೀದಿಸಲಾಗಿತ್ತು. 2004 ರಲ್ಲಿ ಮಾಲೂರಿಗೆ ಭೇಟಿ ನೀಡಿದ್ದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದರು.

ನಂತರ ನಡೆದ ರಾಜಕೀಯ ಬದಲಾವಣೆಗಳಿಂದಾಗಿ 2010 ರಲ್ಲಿ ಉಚಿತ ನಿವೇಶನ ಪಡೆಯಲು ಹೆಚ್ಚುವರಿಯಾಗಿ ₹ 35 ಸಾವಿರ ಪಾವತಿಸಬೇಕೆಂದು ಸೂಚಿಸಲಾಯಿತು. ಸೂರಿನ ಆಸೆಯಿಂದಾಗಿ 690 ಫಲಾನುಭವಿಗಳು ₹ 35 ಸಾವಿರ ಮೊತ್ತವನ್ನು ಡಿ.ಡಿ ಮೂಲಕ ಆಶ್ರಯ ಸಮಿತಿಗೆ ಪಾವತಿಸಿದರು. ಆದರೆ, ನಿವೇಶನ ಮಾತ್ರ ಸಿಗಲೇ ಇಲ್ಲ ಎಂದು ಹಣ ಪಾವತಿಸಿದವರು ಬೇಸರ ವ್ಯಕ್ತಪಡಿಸಿದರು.

ಆಶ್ರಯ ಜಮೀನು ಸರ್ಕಾರಿ ಕಾಲೇಜಿಗೆ ಬಳಕೆ: ಸರ್ವೇ ಸಂಖ್ಯೆ 151 ರಲ್ಲಿ ಆಶ್ರಯ ಸಮಿತಿ ಖರೀದಿಸಿದ್ದ 2.30 ಎಕರೆ ಜಮೀನಿನನ್ನು ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಬಳಸಲಾಯಿತು.ಇದರಿಂದ ವಸತಿ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಯೋಜನೆ ಮೂಲೆ ಸೇರುವಂತಾಯಿತು.

2002 ರಲ್ಲಿ ಆಶ್ರಯ ಸಮಿತಿಯ ನಿವೇಶನಕ್ಕಾಗಿ ಬಡ ಹೆಣ್ಣು ಮಕ್ಕಳು ತಮ್ಮ ಕಿವಿ ಓಲೆ, ಮೂಗುಬಟ್ಟುಗಳನ್ನು ಅಡಮಾನ ಇಟ್ಟು ಹಣ ಪಾವತಿಸಿದ್ದರು.

ಬಡವರ ಹಣದಿಂದ ಖರೀದಿ ಮಾಡಿದ್ದ ಜಮೀನನ್ನು ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಮಂಜೂರು ಮಾಡುವುದು ಎಷ್ಟು ಸರಿ ಎಂದು ಕನ್ನಡ ಸಂಘಟನೆಯ ದಿನೇಶ್‌ ಗೌಡ ಪ್ರಶ್ನಿಸಿದ್ದಾರೆ.

ಪ್ರಸ್ತುತ ನಗರಸಭೆಯ ಆಡಳಿತ ಮೂಲ ಹಣ ಕಟ್ಟಿರುವ ಬಡವರಲ್ಲಿ ಕೆಲವರ ದಾಖಲೆಗಳು ಸರಿ ಇಲ್ಲ ಎಂದು ಕೈಬಿಡುತ್ತಿರುವುದು ಬಡವರಿಗೆ ಮಾಡಿದ ಮಹಾ ದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.

ಸೂರು ಪಡೆಯುವ ಆಸೆಯಲ್ಲಿರುವ ವಸತಿ ರಹಿತರಿಗೆ 2023-24 ರಲ್ಲಿ ಹಾಲಿ ಶಾಸಕ ಕೆ.ವೈ.ನಂಜೇಗೌಡರು ಬರವಸೆ ಮೂಡಿಸಿದ್ದರು. ಆಶ್ರಯ ಸಮಿತಿಗೆ ಉಚಿತ ನಿವೇಶನಕ್ಕಾಗಿ 780 ಮಂದಿ ಫಲಾನುಭವಿಗಳು ಕಟ್ಟಿದ್ದ ₹ 35 ಸಾವಿರ ಹಣವನ್ನು ಬಡ್ಡಿ ಸೇರಿಸಿ ₹ 44 ಸಾವಿರವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅಧಿಕಾರಿಗಳ ಮೂಲಕ ಹಿಂದಿರುಗಿಸುವ ಕೆಲಸ ಮಾಡಿದ್ದರು.

ಅದರಲ್ಲಿ 59 ಮಂದಿ ಮರಣ ಹೊಂದಿದ್ದು, ಅವರ ವಾರಸುದಾರರಿಗೆ ಹಣ ನೀಡಲಾಯಿತು. ನಂತರ ಜಿಲ್ಲಾಡಳಿತದಿಂದ ತಾಲ್ಲೂಕಿನ ಕಡತೂರು ಗ್ರಾಮದ ಬಳಿ 7 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿದರು. ನಗರಸಬೆ ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹಾಕಿ ಕಡತೂರು ಬಳಿ ಬಡಾವಣೆ ನಿರ್ಮಾಣಕ್ಕೆ ₹ 40ಲಕ್ಷ ಮೂಂಜೂರು ಸಹ ಮಾಡಿಸಿದರು. 25 ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ವಸತಿ ರಹಿತರಿಗೆ ಸೂರು ಪಡೆಯುವ ಭರವಸೆ ಮೂಡಿತು.

ಆ.10 ರಂದು ನಗರದಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿ ಕೈಯಲ್ಲಿ ಆಶ್ರಯ ಸಮಿತಿ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಣೆ ಮಾಡಲಾಗುವುದು ಎಂದು ಶಾಸಕರು ಭರವಸೆ ಸಹ ನೀಡಿದ್ದರು.

ಆದರೆ ಬಡಾವಣೆಯ ಅಭಿವೃದ್ಧಿಯು ನಡೆದಿಲ್ಲ. ವಿತರಣೆ ಕಾರ್ಯಕ್ರಮ ಸಹ ನಡೆದಿಲ್ಲ. ಇದರಿಂದ ನಿರಾಸೆಗೊಂಡ ಆಶ್ರಯ ಸಮಿತಿ ಫಲಾನುಭವಿಗಳು ಮತ್ತೆ ಭರವಸೆ ಕಳೆದುಕೊಂಡಿದ್ದಾರೆ.

ಮತ್ತೆ ನನೆಗುದಿಗೆ ಬಿದ್ದ ಯೋಜನೆ: ನಗರದ ಹೊರವಲಯದ ಕಡತೂರು ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಬಡಾವಣೆ ಅಭಿವೃದ್ಧಿ ಕಾಣದೆ ಸ್ಥಗಿತಗೊಂಡಿದೆ. ಕಲ್ಲು, ಬಂಡೆಗಳು, ಹಳ್ಳಕೊಳ್ಳಗಳನ್ನು ಮುಚ್ಚುವ ಕೆಲಸ ಸಹ ನಡೆದಿಲ್ಲ. ಆಶ್ರಯ ಸಮಿತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಡಾವಣೆ ಅಭಿವೃದ್ಧಿ ಕುಂಠಿತಗೊಂಡಿದೆ. ಅಲ್ಲದೆ 2003 ರಲ್ಲಿ ಉಚಿತ ಆಶ್ರಯ ನಿವೇಶನ ಪಡೆಯಲು ತಲಾ ₹ 2.500 ಹಾಗೂ ₹ 5 ಸಾವಿರ ಸುಮಾರು 1,327 ಮಂದಿ ಕಟ್ಟಿದ್ದರು. ಆದರೇ ಈಗ ಕೇವಲ 721 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಇದರಿಂದ ಬೇಸತ್ತ ಕೆಲವು ಫಲಾನುಭವಿಗಳು ನ್ಯಾಯಾಲಯ ಮೆಟ್ಟಿಲೇರಿದ್ದು, ನಿವೇಶನ ಹಂಚಿಕೆ ಕಾರ್ಯಕ್ಕೆ ಮತ್ತೆ ಗ್ರಹಣ ಹಿಡಿದಿದೆ.

ನಿವೇಶನ ಪಡೆಯುವ ಆಸೆಯಲ್ಲಿದ್ದ ಫಲಾನುಭವಿಗಳಲ್ಲಿ ಮತ್ತೆ ನಿರಾಸೆ ಉಂಟಾಗಿದ್ದು, ಭರವಸೆ ಕಳೆದುಕೊಂಡ ಫಲಾನುಭವಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ಆಶ್ರಯ ಸಮಿತಿಯಿಂದ 721ಮಂದಿ ಆರ್ಹ ಫಲಾನುಭವಿಗಳಿಗೆ ಉಚಿತ ನೀಡಲು ಸಿದ್ಧಗೊಳಿಸಲಾಗಿತ್ತು. 2002–03ರಲ್ಲಿ ಅರ್ಜಿ ಹಾಕಿದ್ದ ಎಲ್ಲಾ ಅರ್ಹ ವಸತಿ ರಹಿತರಿಗೂ ನಿವೇಶನ ನೀಡಬೇಕು ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸರ್ಕಾರಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ

-ಮಂಜುನಾಥ್, ನಗರಸಭೆಯ ಆಶ್ರಯ ಸಮಿತಿ ಅಧಿಕಾರಿ

ಸ್ವಂತ ಮನೆ ಆಸೆ ಈಡೇರಿಲ್ಲ

ಸೊಸೆಯಾಗಿ ಮಾಲೂರಿಗೆ ಬಂದ ಹೊಸದರಲ್ಲಿ ಮನೆ ಇಲ್ಲದೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದೆ, ಪುರಸಭೆಯ ಆಶ್ರಯ ಸಮಿತಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. 25 ವರ್ಷ ಕಳೆಯಿತು. ಇಲ್ಲಿಯವರೆಗೆ ನಿವೇಶನ ಕೊಡಲಿಲ್ಲ. ಸ್ವಂತ ಮನೆಯೂ ಇಲ್ಲ. ಬಾಡಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದೇವೆ. ಮಕ್ಕಳಿಗೆ ಮದುವೆ ಮಾಡಬೇಕು. ಸ್ವಂತ ಮನೆ ಆಸೆ ಈಡೇರಿಲ್ಲ

-ನಾರಾಯಣಮ್ಮ, ಬೀದಿ ಬದಿ ವ್ಯಾಪಾರಿ‌

ಅರ್ಜಿ ಸಲ್ಲಿಸಿ 25 ವರ್ಷ ಆಯಿತು

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆಶ್ರಯ ಸಮಿತಿಗೆ ನಿವೇಶನಕ್ಕಾಗಿ ಅರ್ಜಿ ಹಾಕಿ 25 ವರ್ಷ ಆಗಿದೆ. ಇವತ್ತು, ನಾಳೆ ಕೊಡುವುದಾಗಿ ಹೇಳುತ್ತಲೇ ಇದ್ದಾರೆ. ಅವರು ಕೊಟ್ಟಿಲ್ಲ. ನಾನು ಮನೆ ಕಟ್ಟಿಲ್ಲ. ನನಗೂ ವಯಸ್ಸಾಯಿತು. ಮನೆ ಕಟ್ಟುತ್ತಿನೋ ಇಲ್ಲವೋ? ಮುಂದೆ ಸಿಕ್ಕಿದರೆ ಮಕ್ಕಳು ಕಟ್ಟಬೇಕು ಅಷ್ಟೆ

-ರಿಜ್ವಾನ್‌, ರಾಜೀವ್‌ ನಗರ ನಿವಾಸಿ, ಮಾಲೂರು

ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಬೇಕು

ವಸತಿ ರಹಿತರಿಗೆ ಉಚಿತ ನಿವೇಶನ ನೀಡುವಂತೆ ಒತ್ತಾಯಿಸಿ ಪುರಸಭೆ ಮುಂಭಾಗದಲ್ಲಿ ಆಗಲೇ ಅಹೋರಾತ್ರಿ ಧರಣಿ ನಡೆಸಿದ್ದೆವು. ಅಂದಿನ ಜಿಲ್ಲಾಧಿಕಾರಿ ಸತ್ಯವತಿ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ನೀಡುವ ಭರವಸೆ ನೀಡಿದ್ದರು. ನಿವೇಶನ ನೀಡುವುದು ಮತ್ತೆ ನನೆಗುದಿಗೆ ಬಿದ್ದಿದ್ದು, ಸಂಘಟನೆಯಿಂದ ಆಶ್ರಯ ಸಮಿತಿ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುತ್ತೇವೆ. 2003ರಲ್ಲಿ ಆಶ್ರಯ ಸಮಿತಿಯ ನಿವೇಶನಕ್ಕಾಗಿ ಹಣ ಪಾವತಿಸಿ ಅರ್ಜಿ ಹಾಕಿದ್ದ ಎಲ್ಲರಿಗೂ ನಿವೇಶನ ನೀಡಬೇಕು.

-ಕೆ.ದಿನೇಶ್ ಗೌಡ, ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ

ಸುಮಾರು 25 ವರ್ಷಗಳಿಂದ ನಿವೇಶನ ರಹಿತರಿಗೆ ನೀವೇಶನ ನೀಡದೆ ಆಶ್ರಯ ಸಮಿತಿಯವರು ವಂಚಿಸುತ್ತಿದ್ದಾರೆ. ಅರ್ಹರಿಗೆ ಅತೀ ಶೀಘ್ರವಾಗಿ ನಿವೇಶನ ನೀಡಬೇಕು. ಇಲ್ಲವಾದಲ್ಲಿ ನಗರಸಭೆ ಆಶ್ರಯ ಸಮಿತಿ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತೇವೆ

-ಶ್ರೀನಿವಾಸ್, ಕರವೇ ಜಿಲ್ಲಾ ಅಧ್ಯಕ್ಷ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-18-593776360

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ