
ಕಾರ್ಕಳ: ಮುಂಡ್ಕೂರು ಗ್ರಾಮದಲ್ಲಿ ಕಿರಿದಾದ ರಸ್ತೆಯಿಂದ ಸಂಚಾರಕ್ಕೆ ತೊಡಕು
ಕಾರ್ಕಳ: ತಾಲ್ಲೂಕಿನ ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆ ಅಲ್ಲಲ್ಲಿ ರಸ್ತೆ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಮುಂಡ್ಕೂರು ಗ್ರಾಮ ಪಂಚಾಯಿತಿಯು ಸಂಕಲಕರಿಯ, ಪೋಸ್ರಾಲ್, ಸಚ್ಚರಿಪೇಟೆ, ಮುಂಡ್ಕೂರು 1, ಮುಂಡ್ಕೂರು 2, ಮುಲ್ಲಡ್ಕ ವಾರ್ಡ್‌ಗಳನ್ನು ಹೊಂದಿದ್ದು, ಗ್ರಾಮ ವ್ಯಾಪ್ತಿಯಲ್ಲಿ 2018ರಿಂದ 2023ರ ಅವಧಿಯಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಮುಖ್ಯರಸ್ತೆ, ಗ್ರಾಮ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಯಾದರೂ ಪ್ರಧಾನ ಎರಡು ರಸ್ತೆಗಳು ಅಭಿವೃದ್ಧಿ ವಂಚಿತವಾಗಿ ರಸ್ತೆ ಪ್ರಯಾಣ ದುಸ್ತರವೆನಿಸಿವೆ.
ಮುಂಡ್ಕೂರು ಜೈನ ಪೇಟೆಯ ನಾಗಬನದಿಂದ ಆರಂಭಿಸಿ ಪಡಿತಾರು ತನಕದ ರಸ್ತೆ, ಮುಲ್ಲಡ್ಕ ಗರಡಿ ಬಳಿಯಿಂದ ರಾಜಶ್ರೀ ರೈಸ್ ಮಿಲ್‌ವರೆಗಿನ ರಸ್ತೆ ತುಂಬಾ ಕೆಟ್ಟು ಹೋಗಿವೆ.
ರಸ್ತೆ ತೀರಾ ಕಿರಿದಾಗಿದ್ದು, ಘನ ವಾಹನಗಳು ಸಂಚರಿಸುವಾಗ ಸಣ್ಣ ವಾಹನಗಳು ಒಂದು ಕಡೆ ನಿಲ್ಲಬೇಕಾಗುತ್ತದೆ. ವ್ಯವಸ್ಥಿತ ಚರಂಡಿಗಳಿಲ್ಲದ ಕಾರಣ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಕೆಸರು ಪಾದಚಾರಿಗಳ ಮೈಮೇಲೆ ಎರಚಲ್ಪಡುತ್ತದೆ. ಹೀಗಾಗಿ ವ್ಯವಸ್ಥಿತ ಚರಂಡಿ ಕಾಮಗಾರಿಯೂ ನಡೆಯಬೇಕಿದೆ ಎಂದು ಜನರು ತಿಳಿಸಿದ್ದಾರೆ.
ಮುಂಡ್ಕೂರಿನಿಂದ ಉಳಿಪಾಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆಯ ನಿರ್ಮಾಣವೂ ಆಗಬೇಕಾಗಿದೆ ತುರ್ತಾಗಿ ಆಗಬೇಕಿಗೆ ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡದ ಉಳೆಪಾಡಿ ಮತ್ತು ಉಡುಪಿ ಜಿಲ್ಲೆಯ ಮುಂಡ್ಕೂರು ಮಧ್ಯೆ ಶಾಂಭವಿ ನದಿ ಹರಿಯುತ್ತಿದ್ದು ಇಲ್ಲಿ ಸು. 70 ಮೀ. ಅಗಲದ ಸೇತುವೆ ಹಾಗೂ 3 ಕಿ.ಮೀ ಉದ್ದದ ಸಂಪರ್ಕ ರಸ್ತೆಯ ಅಗತ್ಯವಿದೆ ಎಂದಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಜನ ವಸತಿ ಪ್ರದೇಶದಲ್ಲಿ ಹೊಸ ಬಡಾವಣೆಗಳಾಗಿವೆ. ಗ್ರಾಮದ ರಾಜಂಗುಳಿಯಿಂದ ದಡ್ಡು ಕಜೆ - ಪಿಲಿಕಲ್ ರಸ್ತೆಯು ಪ್ರಯಾಣಕ್ಕೆ ಸಂಕಟಮಯವಾಗಿದೆ.
ಇಲ್ಲಿ ರಸ್ತೆಯನ್ನು ವಿಸ್ತರಿಸಬೇಕಾಗಿದೆ. ಗ್ರಾಮದ ನುಡಿಗುತ್ತು ಬಳಿ ಹೊಸ ಜನ ವಸತಿ ಪ್ರದೇಶ ನಿರ್ಮಾಣವಾಗಿದ್ದು ಅಲ್ಲಿ ರಸ್ತೆ ನಿರ್ಮಾಣವಾಗಬೇಕಾಗಿದೆ. ಗ್ರಾಮದ ಸಚ್ಚರಿಪೇಟೆ– ಆಳಗುಂಡಿ ಜನವಸತಿ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ನಿವೇಶನಗಳು ಹಂಚಿಕೆಯಾಗಿದ್ದು, ಅಲ್ಲಿಗೆ ಸಾಗುವ ದಾರಿ ಕೆಸರುಮಯವಾಗಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಈ ಪ್ರದೇಶದ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ತೀರಾ ಅಗತ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-28-216001206