ತಮಿಳುನಾಡಿಗೆ 3.5 ಟಿಎಂಸಿ ಅಡಿ ನೀರು ಹರಿಸಲಾಗಿದೆ - ಸಚಿವ ರಾಮಲಿಂಗಾರೆಡ್ಡಿ

ತಮಿಳುನಾಡಿಗೆ 3.5 ಟಿಎಂಸಿ ಅಡಿ ನೀರು ಹರಿಸಲಾಗಿದೆ - ಸಚಿವ ರಾಮಲಿಂಗಾರೆಡ್ಡಿ

ತಮಿಳುನಾಡಿಗೆ 3.5 ಟಿಎಂಸಿ ಅಡಿ ನೀರು ಹರಿಸಲಾಗಿದೆ - ಸಚಿವ ರಾಮಲಿಂಗಾರೆಡ್ಡಿ

ಕೋಲಾರ: ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ಮೇ ಹಾಗೂ ಜುಲೈ ಅವಧಿಯಲ್ಲಿ 3.5 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಇದು ಸಹಜವಾಗಿ ಹರಿಯುವಂತಹದ್ದು. ಕಬಿನಿ ಜಲಾಶಯ ತುಂಬಿದ ಕಾರಣ ಅನಿವಾರ್ಯವಾಗಿ ನದಿಗೆ ನೀರು ಬಿಡಲಾಯಿತು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆ ಆಗುತ್ತಿದೆ. ತಮಿಳುನಾಡಿಗೆ ಹಿಂಗಾರು ಮಳೆ ಬರುತ್ತದೆ. ಅವರಿಗೆ ಇನ್ನೂ ಅವಕಾಶವಿದೆ’ ಎಂದರು.

ಕಾವೇರಿ ನದಿ ನೀರು ಹರಿಸುವ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯಲಿದ್ದು, ಏನಾಗುತ್ತದೆ ನೋಡೋಣ. ರಾಜ್ಯದ ಹಿರಿಯ ಅಧಿಕಾರಿಗಳು, ವಕೀಲರು ಹಾಗೂ ತಜ್ಞರು ದೆಹಲಿಯಲ್ಲಿದ್ದು, ಈ ವಿಚಾರ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರು ಕಾವೇರಿ ನೀರಿನ ವಿಚಾರವಾಗಿ ರಾಜ್ಯದೊಂದಿಗೆ ಮಾತನಾಡಲು ಸಿದ್ಧರಿರುವುದಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಹಿಂದೆಯೇ ಅವರು ಮಾತುಕತೆಗೆ ಬರಬೇಕಿತ್ತು. ‌ರಾಜ್ಯದಲ್ಲಿ ಕೆಲವರ ವಿರೋಧ ಇದ್ದ ಕಾರಣ ಮುಂದೂಡಲಾಗಿತ್ತು. ಈ ವಿಚಾರವಾಗಿ ಮಾತನಾಡಿ ಬಗೆಹರಿಸಿಕೊಂಡರೆ ಬಹಳ ಒಳ್ಳೆಯದು. ಬರೀ ಕಾವೇರಿ, ಮೇಕೆದಾಟು ವಿಚಾರವಲ್ಲ; ಕೃಷ್ಣಾ, ಮಹದಾಯಿ ಸೇರಿದಂತೆ ಅನೇಕ ನದಿಗಳ ವಿಚಾರದಲ್ಲಿ ಸಮಸ್ಯೆ ಇದೆ. ಅಕ್ಕಪಕ್ಕದ ರಾಜ್ಯಗಳು ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನ್ಯಾಯಾಲಯಕ್ಕೆ ಹೋದರೆ ದಶಕಗಳೇ ಹಿಡಿಯುತ್ತದೆ’ ಎಂದರು.

ಆ. 13ಕ್ಕೆ ಕೆಲ ಸಂಘಟನೆಗಳು ಹಮ್ಮಿಕೊಂಡಿರುವ ರಾಜ್ಯ ಬಂದ್‌ಗೆ ಪ್ರತಿಕ್ರಿಯಿಸಿ, ‘ಯಾರೂ ಬಂದ್‌ ಅಥವಾ ಪ್ರತಿಭಟನೆ ಮಾಡಲ್ಲ ಅಂದುಕೊಂಡಿದ್ದೇವೆ’ ಎಂದು ನುಡಿದರು.

ಆದೇಶ ಆತಂಕ ತರಿಸಿದೆ: ಡಿಸಿಎಂ

ತುಮಕೂರು: ‘ಕಾವೇರಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ ಮುಂದಿನ 15 ದಿನ ಪ್ರತಿನಿತ್ಯ 12 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಆದೇಶಿಸಿರುವುದು ಆತಂಕ ಸೃಷ್ಟಿಸಿದೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

‘ಈ ಹಿಂದೆ 15 ದಿನ ಪ್ರತಿನಿತ್ಯ 3,500 ಕ್ಯುಸೆಕ್‌ ನೀರು ಹರಿಸುವಂತೆ ಆದೇಶ ಮಾಡಿತ್ತು. ಅದರಂತೆ, ರಾಜ್ಯ ಸರ್ಕಾರ ನೀರು ಹರಿಸಿದೆ. ಈ ಮಧ್ಯೆ ತಮಿಳುನಾಡಿನವರು ಇನ್ನೂ ಹೆಚ್ಚಿನ ನೀರಿಗೆ ಒತ್ತಾಯಿಸಿ ಸಮಿತಿ ಮುಂದೆ ಹೋಗಿದ್ದರು. ಸಿಡಬ್ಲ್ಯುಆರ್‌ಸಿ ಆದೇಶ ನಿಜಕ್ಕೂ ಆತಂಕ ತರಿಸಿದೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿನ ಅಣೆಕಟ್ಟುಗಳಿಗೆ ಒಳಹರಿವು ಕಡಿಮೆ ಆಗಿದೆ. ಈಗಿನ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸೆಕ್‌ ನೀರು ಹರಿಸಲು, ಅದಕ್ಕಿಂತ ಎರಡು ಪಟ್ಟು ಹೆಚ್ಚು ಒಳಹರಿವು ಇರಬೇಕಿತ್ತು. ಆದರೆ, ಕೆಆರ್‌ಎಸ್‌, ಕಬಿನಿ, ಹಾರಂಗಿ ಸೇರಿದಂತೆ ಎಲ್ಲ ಕಡೆ ನೀರು ಕಡಿಮೆ ಇದೆ’ ಎಂದರು.

ಒತ್ತಡಕ್ಕೆ ಮಣಿಯದೇ ರೈತರ ಹಿತ ಕಾಪಾಡಿ: ಟಿ.ಎ.ನಾರಾಯಣ ಗೌಡ

ಬೆಂಗಳೂರು: ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿಯದೇ, ರೈತರ ಹಿತ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದರು.

ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ನ ಮುಂದೆ ಸಮರ್ಥವಾಗಿ ಮಂಡಿಸಿ, ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾಗದಂತೆ ಅಗತ್ಯವಿರುವ ನ್ಯಾಯಾಂಗ ಪರಿಹಾರವನ್ನು ಪಡೆಯಬೇಕು. ಸರ್ವಪಕ್ಷ ಸಭೆ ಕರೆದು ಕಾವೇರಿ ವಿಚಾರದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಕಾವೇರಿ ಕೊಳ್ಳದ ರೈತರ ಪ್ರತಿನಿಧಿಗಳು, ನೀರಾವರಿ ತಜ್ಞರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಯಾವುದೇ ಖಾತೆ ಕೇಳಿಲ್ಲ. ಯಾವುದೇ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ಈವರೆಗೆ 10 ಖಾತೆಯಲ್ಲಿ ಕೆಲಸ ಮಾಡಿದ್ದೇನೆ. ಅಧಿವೇಶನದೊಳಗೆ ಖಾತೆ ಹಂಚಿಕೆ ಆಗಲಿದೆ ರಾಮಲಿಂಗಾರೆಡ್ಡಿ, ಜಲಸಂಪನ್ಮೂಲ ಸಚಿವ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-51-219174671

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ