
ಪಾಂಡವಪುರ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ; ನಾಗರಿಕರ ಅಸಮಾಧಾನ
ಪಾಂಡವಪುರ: ಸಣ್ಣ ನೀರಾವರಿ ಇಲಾಖೆಯಿಂದ ₹5.97 ಕೋಟಿ ವೆಚ್ಚದಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದ ಎದುರುಗಿರುವ ಉದ್ಯಾನದ ಆಧುನೀಕರಣ ಮತ್ತು ಸಂಗೀತ ಕಾರಂಜಿ ಅಳವಡಿಕೆ ಪೂರ್ಣವಾಗಿಲ್ಲ. ಕ್ರೀಡಾಂಗಣದ ಪಕ್ಕದ ವಿ.ಸಿ. ನಾಲೆಯ ಏರಿ ಮೇಲಿರುವ ಜಾಗದಲ್ಲಿ ಉದ್ಯಾನ ನಿರ್ಮಾಣವೂ ಪ್ರಾರಂಭವಾಗಿಲ್ಲ.
ವಿ.ಸಿ.ನಾಲೆಯ ಮತ್ತೊಂದು ಏರಿ ಮೇಲೆ ಈಗಾಗಲೇ ನಿರ್ಮಾಣಗೊಂಡಿರುವ ಉದ್ಯಾನದ ನಿರ್ವಹಣೆ ಇಲ್ಲದಿರುವುದು, ಉದ್ಯಾನದಲ್ಲಿ ವಿದ್ಯುತ್ ದೀಪದ ಬೆಳಕಿಲ್ಲದಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಣ್ಣ ನೀರಾವರಿ ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು ಅವರ 2018–19ರ ಅವಧಿಯಲ್ಲಿ ಉದ್ಯಾನ ಅಭಿವೃದ್ಧಿಗೆ ಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಹಿಂದಿನ ಉದ್ಯಾನ ಆಧುನೀಕರಣಗೊಳಿಸಿ ಅಲ್ಲಿ ಸಂಗೀತ ಕಾರಂಜಿ ನಿರ್ಮಾಣದ ಜತೆಗೆ ವಿ.ಸಿ. ನಾಲೆಯ ಎರಡು ಏರಿಯ ಮೇಲೂ ಉದ್ಯಾನ ನಿರ್ಮಾಣ ಮಾಡಲು ಕ್ರಮವಹಿಸಲಾಗಿತ್ತು.
ಕ್ರೀಡಾಂಗಣದ ಎದುರಿಗಿದ್ದ ಉದ್ಯಾನವನ್ನು ₹3ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಿ ಅಲ್ಲಿ, ಸಂಗೀತ ಕಾರಂಜಿಗಾಗಿ ಪೈಪ್ ಅಳವಡಿಕೆ ಸೇರಿದಂತೆ ಒಂದಿಷ್ಟು ಕೆಲಸ ಮಾಡಲಾಯಿತೇ ಹೊರತು, ಸಂಗೀತ ಕಾರಂಜಿಯ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಈಗ ಈ ಉದ್ಯಾನದ ನಿರ್ವಹಣೆ ಹೊಣೆಯನ್ನು ಇಲಾಖೆಗಳು ತೆಗೆದುಕೊಳ್ಳದೇ ಇರುವುದರಿಂದ ಹುಲ್ಲುಹಾಸು, ಗಿಡಮರಗಳು ನೀರಿಲ್ಲದೆ ಒಣಗಿಹೋಗುತ್ತಿವೆ.
ನಿರ್ವಹಣೆ ಇಲ್ಲದಿರುವುದರಿಂದ ಇಲ್ಲಿ ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ವಿ.ಸಿ.ನಾಲೆಯ ಮತ್ತೊಂದೆಡೆ ನಿರ್ಮಿಸಲು ಉದ್ದೇಶಿಸಿದ್ದ ಉದ್ಯಾನ ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ. ಅಧಿಕಾರಿಗಳು ಉದ್ಯಾನ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು ಎಂದು ರಾಜಲಕ್ಷ್ಮಿ, ಯಶೋಧಮ್ಮ, ಸತ್ಯವತಿ, ಅಂಬಿಕಾ, ಜಯಶ್ರೀ, ಮಂಜುಳಾ ಒತ್ತಾಯಿಸಿದರು.
ಉದ್ಯಾನ ನಿರ್ವಹಿಸಲು ಮೇಲ್ವಿಚಾರಕರು ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆ ತಾಣವಾಗಿದೆ. ನಾಗರಿಕರ ವಾಯು ವಿಹಾರಕ್ಕೆ ಹಾಗೂ ಮಕ್ಕಳು ಆಟವಾಡಲು ತೊಂದರೆಯಾಗುತ್ತಿದೆ. ಅಧಿಕಾರಿಗಳು ತುರ್ತು ಕ್ರಮವಹಿಸಬೇಕು ಎಂದು ಜೆ.ಬಿ.ಮಂಜುನಾಥ್, ಆರ್.ಪಿ.ಪುಟ್ಟರಾಜು, ಶಿವಲಿಂಗೇಗೌಡ, ಮಹೇಶ್ ಒತ್ತಾಯಿಸಿದ್ದಾರೆ.
ಗುತ್ತಿಗೆದಾರರ ಮೇಲೆ ಕ್ರಮ
ಉದ್ಯಾನ ನಿರ್ಮಾಣ ಮಾಡಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ಅವರಿಗೆ ಈಗಾಗಲೇ ಮೂರು ಪತ್ರ ಬರೆದು ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮಕೈಗೊಂಡು ಉದ್ಯಾನ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲದೇ ಉದ್ಯಾನ ನಿರ್ವಹಣೆಯನ್ನು ಸ್ಥಳೀಯ ಪುರಸಭೆಗೆ ವಹಿಸಲು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಮನೋಜ್ ತಿಳಿಸಿದರು.
ಪಾಂಡವ ಕ್ರೀಡಾಂಗಣ ಬಳಿ ಮತ್ತು ವಿ.ಸಿ.ನಾಲೆ ಏರಿ ಮೇಲಿರುವ ಉದ್ಯಾನ ನಿರ್ವಹಣೆ ಸಂಬಂಧ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ವರದಿ ಬಂದ ಮೇಲೆ ಉದ್ಯಾನ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-40-2091096563