
ಸ್ಪೇನ್ ಆಟಗಾರರ ಜೊತೆ ಕಿತ್ತಾಡಿದ ಅರ್ಜೆಂಟೀನಾದ ಪಾರೆಡೆಝ್‌ಗೆ 10 ಪಂದ್ಯ ನಿಷೇಧ
ಪ್ಯಾರಿಸ್ (ಎಎಫ್‌ಪಿ): ಜುಲೈ 19ರಂದು ನ್ಯೂಜರ್ಸಿಯಲ್ಲಿ ವಿಶ್ವಕಪ್ ಫುಟ್‌ಬಾಲ್ ಫೈನಲ್ ಮುಗಿದ ಸ್ಪೇನ್ ಆಟಗಾರರ ಜೊತೆ ಕಿತ್ತಾಡಿದ ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪಾರೆಡೆಝ್ ಮತ್ತು ಕೆಲವು ಆಟಗಾರರಿಗೆ ನಿಷೇಧ ಮತ್ತು ದಂಡ ವಿಧಿಸಲಾಗಿದೆ ಎಂದು ಫಿಫಾ ಶುಕ್ರವಾರ ತಿಳಿಸಿದೆ.
ಕಠಿಣ ಕ್ರಮವಾಗಿ ಫಿಫಾ, ಪಾರೆಡೆಝ್ ಅವರಿಗೆ 10 ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಮಾನತು ಮಾಡಿದೆ. ಸುಮಾರು ₹86 ಲಕ್ಷ ದಂಡವನ್ನೂ ವಿಧಿಸಿದೆ. ಸ್ಪೇನ್ 1–0 ಗೋಲಿನಿಂದ ಫೈನಲ್ ಪಂದ್ಯವನ್ನು ಜಯಿಸಿತ್ತು.
ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಫೈನಲ್ ಮುಗಿದ ಕೆಲವೇ ನಿಮಿಷಗಳ ಬಳಿಕ, ಪಾರೆಡೆಝ್ ಅವರು ಸ್ಪೇನ್‌ನ ಎರಿಕ್ ಗಾರ್ಸಿಯಾ ಅವರ ಕತ್ತುಹಿಡಿದು ದೂಡಿದ್ದರು. ಸ್ಪೇನ್‌ನ ಗಾವಿ ಅವರನ್ನು ನೆಲಕ್ಕೆ ತಳ್ಳಿದ್ದರು. ಇದು ಆಟಗಾರರ ನಡುವೆ ಗಲಾಟೆಗೆ ಕಾರಣವಾಯಿತು.
ಅರ್ಜೆಂಟೀನಾದ ಇನ್ನೊಬ್ಬ ಆಟಗಾರ ನೊಹುಯೆಲ್ ಮೊಲಿನಾ ಅವರಿಗೆ ಏಳು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ಅವರಿಗೂ ₹86 ಲಕ್ಷ ದಂಡದ ಬಿಸಿ ತಗುಲಿದೆ. ಥಿಯಾಗೊ ಅಲ್ಮೇಡಾ ಅವರನ್ನು ಒಂದು ಪಂದ್ಯಕ್ಕೆ ಅಮಾನತು ಮಾಡಿ ಸುಮಾರು ₹29 ಲಕ್ಷ ದಂಡ ವಿಧಿಸಲಾಗಿದೆ.
ಈ ಘರ್ಷಣೆಯಲ್ಲಿ ಪಾತ್ರ ವಹಿಸಿದ್ದಕ್ಕೆ, ಸ್ಪೇನ್‌ನ ಗಾವಿ ಅವರನ್ನು ಒಂದು ಪಂದ್ಯಕ್ಕೆ ನಿರ್ಬಂಧಿಸಿದ್ದು, ₹29 ಲಕ್ಷ ದಂಡ ವಿಧಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-51-1592075740