ಮುಂಬೈ : ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು 92ನೇ ವಯಸ್ಸಿನಲ್ಲಿ ಮುಂಬೈನ Breach Candy Hospital ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಅವರು ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಆಶಾ ಭೋಂಸ್ಲೆಯವರ ಪಾರ್ಥಿವ ಶರೀರವನ್ನು ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ನಂತರ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಆಸ್ಪತ್ರೆಯ ವೈದ್ಯರಾದ ಡಾ. ಪ್ರತೀತ್ ಸಮದಾನಿ ಅವರ ಪ್ರಕಾರ, ಹೃದಯಾಘಾತದ ನಂತರ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಆಶಾ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಲತಾ ಮಂಗೇಶ್ಕರ್ ಅವರ ಸಹೋದರಿಯಾಗಿದ್ದ ಆಶಾ ಭೋಂಸ್ಲೆ ಭಾರತೀಯ ಸಂಗೀತ ಲೋಕದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ವಿಶಿಷ್ಟ ಧ್ವನಿಯಿಂದ 14ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದರು.
ಚಿತ್ರಗೀತೆಗಳಷ್ಟೇ ಅಲ್ಲದೆ ಪಾಪ್, ಗಜಲ್, ಭಜನೆ ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರಗಳಲ್ಲಿಯೂ ಅವರು ಅಪಾರ ಸಾಧನೆ ಮಾಡಿದ್ದಾರೆ. “ಪಿಯಾ ತು ಅಬ್ ತೋ ಆಜಾ”, “ದಮ್ ಮಾರೋ ದಮ್”, “ಚುರಾ ಲಿಯಾ ಹೈ ತುಮ್ನೆ”, “ಜುಮ್ಕಾ ಗಿರಾ ರೇ”, “ಯೇ ಮೇರಾ ದಿಲ್” ಸೇರಿದಂತೆ ಅನೇಕ ಹಿಟ್ ಹಾಡುಗಳು ಅವರ ಹೆಸರಿನಲ್ಲಿ ದಾಖಲಾಗಿವೆ.ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ ಪದ್ಮ ವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದ್ದವು.
ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ, ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿಯೇ ಉಳಿದಿದ್ದರು.ಸಂಗೀತ ಲೋಕದ ಈ ಧ್ರುವತಾರೆಯ ಅಗಲಿಕೆ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದು, ಅವರ ಅಮರ ಧ್ವನಿ ಎಂದಿಗೂ ಉಳಿಯಲಿದೆ.





source https://suddione.com/what-is-the-cause-of-death-of-famous-singer-asha-bhosle/


0 Comments
If u have any queries, Please let us know