
ಮಳೆ ಕೊರತೆ: ಹಿಂಗಾರು ಬಿತ್ತನೆಗೆ ಹಿನ್ನಡೆ
ಧಾರವಾಡ: ಮುಂಗಾರಿನಲ್ಲಿ ಕೈಕೊಟ್ಟ ಮಳೆಯು ಹಿಂಗಾರಿನಲ್ಲೂ ಕೈಕೊಡುವ ಲಕ್ಷಣಗಳು ದಟ್ಟವಾಗಿವೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ಅಂತ್ಯಕ್ಕೆ ಹಿಂಗಾರು ಬಿತ್ತನೆ ಮುಗಿಯಬೇಕಿತ್ತು. ಈ ವರ್ಷ ಈವರೆಗೆ 76 ಸಾವಿರ ಹೆಕ್ಟೇರ್ (ಶೇ 32) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಹಿಂಗಾರು ಹಂಗಾಮಿನಲ್ಲಿ ಅ.1ರಿಂದ 31ರವರೆಗೆ ವಾಡಿಕೆಯಂತೆ 105.6 ಮಿ.ಮೀ ಮಳೆಯಾಗಬೇಕಿತ್ತು. ಈ ವರ್ಷ ಈ ಅವಧಿಯಲ್ಲಿ 52.5 ಮಿ.ಮೀ ಮಳೆಯಾಗಿದ್ದು, ಅರ್ಧದಷ್ಟು ಕೊರತೆಯಾಗಿದೆ. ಬಿತ್ತನೆಗೆ ಹಿನ್ನಡೆಯಾಗಿದೆ.
ಬಿತ್ತನೆ ಅವಧಿ ಮುಕ್ತಾಯ ಹಂತಕ್ಕೆ ತಲುಪಿದೆ. ಭೂಮಿಯಲ್ಲಿ ತೇವಾಂಶ ಇಲ್ಲದೆ ಬಿತ್ತನೆಯಾಗಿಲ್ಲ. ಕೃಷಿ ಚಟುವಟಿಕೆಗಳು ತೀವ್ರ ಮಂದಗತಿಯಲ್ಲಿ ಸಾಗಿವೆ. ಈ ಭಾಗದ ಪ್ರಮುಖ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಹಾಗೂ ಗೋಧಿ ಬಿತ್ತನೆ ಇಷ್ಟರೊಳಗೆ ಆಗಬೇಕಿತ್ತು.
ನವಲಗುಂದ, ಕುಂದಗೋಳ, ಅಣ್ಣಿಗೇರಿ ಭಾಗದಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಬಿತ್ತನೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮಳೆ ಇಲ್ಲದೆ ರೈತರು ಸುಮ್ಮನಿದ್ದಾರೆ.
ಧಾರವಾಡ ಭಾಗದಲ್ಲಿ ಕೆಲವಡೆ ಈಚೆಗೆ ಸುರಿದ ಮಳೆ ನಂಬಿ ಕೆಲವರು ಬಿತ್ತನೆ ಮಾಡಿದ್ದಾರೆ. ಈಗ ಮಳೆ ಸುಳಿವೇ ಇಲ್ಲ. ತೇವಾಂಶದ ತೀವ್ರ ಕೊರತೆಯಾಗಿದೆ. ಬೀಜಗಳು ಮೊಳಕೆಯೊಡೆದಿಲ್ಲ. ಕೆಲವೆಡೆ ಮೊಳಕೆಯೊಡೆದ ಪೈರು ಬಿರು ಬಿಸಿಲಿಗೆ ಕಮರುತ್ತಿವೆ. ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
‘ಕಡಲೆ ಬಿತ್ತನೆಗೆ ಬೀಜ ಹಾಗೂ ಗೊಬ್ಬರಕ್ಕಾಗಿ ₹10 ಸಾವಿರದಿಂದ ₹12 ಸಾವಿರವರೆಗೆ ಖರ್ಚು ಮಾಡಿದ್ದೇವೆ. ಕಣ್ಣೆದುರೇ ಬೆಳೆ ಒಣಗುತ್ತಿದೆ. ಸರ್ಕಾರರೈತರಿಉಗೆ ನೆರವಾಗಬೇಕು’ ಎಂದು ಕೋಟೂರಿನ ರೈತ ಅಳಲು ತೋಡಿಕೊಂಡರು.
25,544 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ
‘ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ 28,486 ಕ್ವಿಂಟಲ್ ದಾಸ್ತಾನು ಮಾಡಲಾಗಿತ್ತು ಈ ಪೈಕಿ 25,544 ಕ್ವಿಂಟಲ್ (ಶೇ 89 )ವಿತರಣೆಯಾಗಿದೆ. 2,887 ಕ್ವಿಂಟಲ್ ಉಳಿದಿದೆ. ಕಡಲೆ ಬಿತ್ತನೆ ಬೀಜ 28,038 ಕ್ವಿಂಟಲ್ ದಾಸ್ತಾನಿನಲ್ಲಿ 25,383 ಕ್ವಿಂಟಲ್ ವಿತರಿಸಲಾಗಿದೆ. 2,600 ಕ್ವಿಂಟಲ್ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಹಿಂಗಾರು ಬಿತ್ತನೆ ಪ್ರಮಾಣ (ವಿಸ್ತೀರ್ಣ ಹೆಕ್ಟೇರ್‌ನಲ್ಲಿ)
ತಾಲ್ಲೂಕು;ಗುರಿ;ಸಾಧನೆ;ಶೇಕುಂದಗೋಳ;34,809;13950;40.08ಧಾರವಾಡ;47576;17610;37.01ಹುಬ್ಬಳ್ಳಿ;28734;9643;33.56ನವಲಗುಂದ;56821;17880;31.47ಹುಬ್ಬಳ್ಳಿ ನಗರ;6636;1990;29.99ಅಣ್ಣಿಗೇರಿ;30227;8022;26.54ಕಲಘಟಗಿ;28470;6938;24.37ಅಳ್ನಾವರ;500;––;––;––