
ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ
ರೋಣ: ಮುಂಗಾರು ಮಳೆ ಕೊರತೆಯಿಂದ ಕಂಗಾಲಾಗಿರುವ ತಾಲ್ಲೂಕಿನ ರೈತರನ್ನು ಹಿಂಗಾರು ಮಳೆಯ ಕೊರತೆಯು ಮತ್ತಷ್ಟು ಆತಂಕಕ್ಕೆ ದೂಡಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.
ಪ್ರಮುಖವಾಗಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಉಳಿಸಿಕೊಳ್ಳಲು ಹಲವು ರೈತರು, ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಇದರಿಂದಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ.
ಪಟ್ಟಣದ ರೈತ ಎಸ್.ಎಂ.ಮುಲ್ಲಾ ಅವರು ತಮ್ಮ ಮೂರು ಎಕರೆ ಹೊಲದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಯನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಹೊಲದಲ್ಲಿರುವ ಬೆಳೆಗೆ ನೀರು ಹಾಯಿಸಿದ್ದು, 50 ಟ್ಯಾಂಕರ್‌ಗಳಲ್ಲಿನ ನೀರನ್ನು ಹೊಲಕ್ಕೆ ಹಾಯಿಸಿದ್ದಾರೆ.
‘ಪ್ರತಿ ಟ್ಯಾಂಕರ್ ನೀರಿಗೆ ₹300 ಖರ್ಚಾಗಿದೆ. ಒಂದು ಬಾರಿ ಸಂಪೂರ್ಣ ಹೊಲಕ್ಕೆ ನೀರು ಹಾಯಿಸಲು ಅಂದಾಜು ₹30 ಸಾವಿರ ಬೇಕಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಉತ್ತಮ ಬೆಲೆ ಇರುವುದರಿಂದ ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳಬೇಕಿದೆ’ ಎಂದು ರೈತ ಎಸ್.ಎಂ. ಮುಲ್ಲಾ ತಿಳಿಸಿದರು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಬಾರಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಹಾನಿಯಾಗಿದೆ. ಬೆಳೆದು ನಿಂತಿರುವ ಬೆಳೆಗಳು ತೇವಾಂಶ ಕೊರತೆ ಎದುರಿಸುತ್ತಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.