
ಬೀದರ್: ಹಳೆ ವೋಟರ್ ಲಿಸ್ಟ್ ಅನ್ವಯ ಚುನಾವಣೆ ಹಾಸ್ಯಾಸ್ಪದ ಎಂದ ಗಣೇಶ್ ಕಾರ್ಣಿಕ್
ಬೀದರ್: ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಂತರ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದೆ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಹಳೆ ಮತದಾರರ ಪಟ್ಟಿ ಆಧರಿಸಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಾಗಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ’ ಎಂದು ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದರು.
ಚುನಾವಣೆ ನಡೆಸುವುದು ಚುನಾವಣಾ ಆಯೋಗದ, ಚುನಾವಣಾಧಿಕಾರಿಗಳ ಕೆಲಸ. ಆದರೆ, ಸಚಿವರು ಎಂದಿನಿಂದ ಚುನಾವಣೆ ನಡೆಸಲು ಶುರು ಮಾಡಿದ್ದಾರೆ? ನೀವೇ ಸಚಿವರನ್ನು ವಿಚಾರಿಸಿ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ಸಲಹೆ ಮಾಡಿದರು.
ಇಂತಹ ಸಾಂವಿಧಾನಿಕ ವಿಚಾರದಲ್ಲಿ ಮುಖ್ಯಮಂತ್ರಿಗೆ ಮಾತ್ರ ಅವಕಾಶ ಇರುತ್ತದೆ ಹೊರತು ಯಾವ ಮಂತ್ರಿಗಳಿಗೂ ಇಲ್ಲಿ ಅವಕಾಶ ಇರಲ್ಲ. ಈ ಪ್ರಜ್ಞೆ ಸಚಿವರಿಗಿಲ್ಲವೆ? ಮೂರ್ಖರನ್ನು ಅಧಿಕಾರದಲ್ಲಿ ಕೂರಿಸಿದರೆ ಹೀಗೆ ಹೇಳೊರು ಎಂದು ಟೀಕಿಸಿದರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ತಪ್ಪು ಮಾಹಿತಿ ಹರಡುವ ಮೂಲಕ ದೇಶದ ಯುವಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವದ ರಕ್ಷಣೆ ಹೆಸರಿನಲ್ಲಿ ಜನರಲ್ಲಿ ಗೊಂದಲ ಹಾಗೂ ಅಶಾಂತಿ ಸೃಷ್ಟಿಸುವುದು ಸರಿಯಲ್ಲ. ಜನರಲ್ಲಿ ಅರಿವು ಮೂಡಿಸುವುದಕ್ಕಾಗಿಯೇ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನ ನಡೆಸಲು ಮುಂದಾಗಿದೆ ಎಂದರು.
13 ಕೋಟಿ ಮತದಾರರ ಹೆಸರು ಅಳಿಸಲಾಗಿದೆ ಎಂಬ ಪ್ರಚಾರ ಮಾಡಲಾಗುತ್ತಿದೆ. ಯಾವ ಕಾರಣಕ್ಕಾಗಿ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ಪ್ರಕ್ರಿಯೆಗಳೇನು ಎಂಬುದನ್ನು ಜನರಿಗೆ ವಿವರಿಸುತ್ತಿಲ್ಲ. ಅರ್ಧಸತ್ಯ ಹೇಳಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಬಾಬು ವಾಲಿ, ಶಶಿಧರ ಹೊಸಳ್ಳಿ, ಕಿರಣ್ ಪಾಟೀಲ, ಸುಧೇಂದ್ರ ಕುಲಕರ್ಣಿ, ಸುನೀಲ ಗೌಳಿ, ಶ್ರೀನಿವಾಸ ಚೌದ್ರಿ ಉಪಸ್ಥಿತರಿದ್ದರು.
‘ಜಿಲ್ಲೆ ಅಷ್ಟೆ ಅಲ್ಲ ಇಡೀ ನಾಡಿನಾದ್ಯಂತ ಮಂಗಳವಾರದಿಂದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಅಭಿಯಾನವನ್ನು ಆರಂಭಿಸಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ತಿಳಿಸಿದರು.
ಮಂಗಳವಾರ ನಗರದ ಹೊರವಲಯದಲ್ಲಿರುವ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಿಂದ ಈ ಅಭಿಯಾನ ಶುರು ಮಾಡಲಾಗಿದೆ ಎಂದು ಹೇಳಿದರು.