
ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ: ಜಗದೀಶ್
ಹಿರಿಯೂರು: ‘ಹಿರಿಯೂರು ಕ್ಷೇತ್ರದ ಉಪಚುನಾವಣಾ ದಿನಾಂಕ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಹಾಗಾಗಿ ಕಾಂಗ್ರೆಸ್ ಸರ್ಕಾರ ಆಯಾ ಸಮುದಾಯದ ಮತ ಸೆಳೆಯಲು ಅದೇ ಸಮುದಾಯದ ಶಾಸಕರು, ಸಚಿವರಿಗೆ ಜವಾಬ್ದಾರಿ ನೀಡಿ ಪ್ರಚಾರಕ್ಕೆ ಕಳಿಸುತ್ತಿದೆ’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಜಗದೀಶ್ ಹೇಳಿದರು.
‘ಈಗ ಇರುವ ಸಚಿವರಾಗಲಿ, ಶಾಸಕರಾಗಲಿ ತಮ್ಮ ಸಮುದಾಯಗಳಿಗೆ ಮಾಡಿರುವುದಾದರೂ ಏನು? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಸರಿಯಾದ ರಸ್ತೆಗಳಿಲ್ಲ. ಉಪ ಚುನಾವಣೆ ಎದುರಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿನ ಜನರ ಮೇಲೆ ಎಲ್ಲಿಲ್ಲದ ಅನುಕಂಪ, ಪ್ರೀತಿ ಹುಟ್ಟಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
‘ಆಡಳಿತ ನಡೆಸುವವರಿಗೆ ಕೊಂಚವಾದರೂ ನೈತಿಕತೆ ಇದ್ದರೆ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಸಾಗುವಳಿ ಪತ್ರ ಕೊಡಲಿ. ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಲಿ. ಸರ್ಕಾರಿ ಶಾಲೆಗಳ ಜೀರ್ಣೋದ್ಧಾರಕ್ಕೆ ಮುಂದಾಗಲಿ. ಹಣ ಕೊಟ್ಟು ಮತ ಪಡೆಯುತ್ತೇವೆ ಎಂಬ ಅಹಂನಲ್ಲಿದ್ದರೆ, ಈ ಬಾರಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಕಿಡಿಕಾರಿದರು.