ಅಸ್ಸಾಂನಿಂದ ಕೋಲಾರಕ್ಕೆ ಬಿದಿರಿನ ಪಯಣ: ಟೊಮೆಟೊ ಬೆಳೆಗಾರರಿಗೆ ನೆರವು

ಅಸ್ಸಾಂನಿಂದ ಕೋಲಾರಕ್ಕೆ ಬಿದಿರಿನ ಪಯಣ: ಟೊಮೆಟೊ ಬೆಳೆಗಾರರಿಗೆ ನೆರವು

ಅಸ್ಸಾಂನಿಂದ ಕೋಲಾರಕ್ಕೆ ಬಿದಿರಿನ ಪಯಣ: ಟೊಮೆಟೊ ಬೆಳೆಗಾರರಿಗೆ ನೆರವು

ಟೊಮೆಟೊ ತೋಟದಲ್ಲಿ ರೈತ ನಾರಾಯಣಸ್ವಾಮಿ ಬಳ್ಳಿಗಳಿಗೆ ಬಿದಿರಿನ ಕೋಲುಗಳ ಆಸರೆ ಕಲ್ಪಿಸುತ್ತಿದ್ದಾರೆ. ದಾರದ ನೆರವಿನಿಂದ ಹಸಿರು ಬಳ್ಳಿಗಳನ್ನು ಇವುಗಳಿಗೆ ಕಟ್ಟುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಇದೇ ತೋಟದಲ್ಲಿ ನೀಲಗಿರಿ ಕೋಲುಗಳು ಸಾಲಾಗಿ ನಿಲ್ಲುತ್ತಿದ್ದವು. ಈಗ ಅವುಗಳ ಜಾಗವನ್ನು ಬಿದಿರಿನ ಕೋಲುಗಳು ಆಕ್ರಮಿಸಿವೆ. ಈ ಬದಲಾವಣೆಗೆ ಕಾರಣ, ಬಿದಿರಿನ ದೀರ್ಘಕಾಲದ ಬಾಳಿಕೆ ಮತ್ತು ಮರುಬಳಕೆಯಿಂದ ಆಗುವ ಉಳಿತಾಯ.

ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು ಕ್ರಮೇಣ ನೀಲಗಿರಿ ಕೋಲುಗಳನ್ನು ಬಿಟ್ಟು ಬಿದಿರಿನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಕೃಷಿಯ ಆಸರೆ ವೆಚ್ಚ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲ, ರೈತರ ಬೇಡಿಕೆಗೆ ಅನುಗುಣವಾಗಿ ಬಿದಿರು ಪೂರೈಸುವ, ಕತ್ತರಿಸಿ ಮಾರಾಟ ಮಾಡುವ ಸಣ್ಣ ಉದ್ಯಮಗಳೂ ಈ ಭಾಗದಲ್ಲಿ ಬೆಳೆಯುತ್ತಿವೆ.

ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ತಿಪ್ಪೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬದಲಾವಣೆ ಕಾಣಬಹುದು. ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಮಾಲೂರು ಭಾಗದ ರೈತರು ಟೊಮೆಟೊ ಮತ್ತು ಕ್ಯಾಪ್ಸಿಕಂ ಬೆಳೆಗಳಿಗೆ ಬಿದಿರಿನ ಕೋಲುಗಳನ್ನು ಬಳಸುತ್ತಿದ್ದಾರೆ.

ಟೊಮೆಟೊ ಗಿಡಗಳು ನೆಲಕ್ಕೆ ಬಾಗದಂತೆ ಕೋಲುಗಳನ್ನು ನೆಟ್ಟು, ದಾರದಿಂದ ಬಳ್ಳಿಗಳನ್ನು ಕಟ್ಟಲಾಗುತ್ತದೆ. ಇದರಿಂದ ಕಾಯಿಗಳು ಮಣ್ಣಿಗೆ ತಾಗಿ ಕೊಳೆಯುವುದು ತಪ್ಪುತ್ತದೆ. ಗಿಡಗಳ ನಡುವೆ ಗಾಳಿಯ ಸಂಚಾರ, ಸೂರ್ಯನ ಬೆಳಕು ಲಭಿಸಲು ಹಾಗೂ ಕೀಟನಾಶಕ ಸಿಂಪಡಣೆ, ಕೊಯ್ಲು ಸೇರಿದಂತೆ ಕೃಷಿ ಚಟುವಟಿಕೆಗೂ ಇದರಿಂದ ಸುಲಭವಾಗುತ್ತಿದೆ.

ಇಷ್ಟು ವರ್ಷ ರೈತರು ಈ ಕೆಲಸಕ್ಕೆ ನೀಲಗಿರಿ ಕೋಲುಗಳನ್ನು ಬಳಸುತ್ತಿದ್ದರು. ಆದರೆ, ಮಣ್ಣಿನಲ್ಲಿ ಹೂತ ಕೋಲಿನ ಭಾಗ ಕೊಳೆತು ಹೋಗುವುದರಿಂದ ಅವು ಹೆಚ್ಚು ಕಾಲ ಬಾಳಿಕೆ ಬರುತ್ತಿರಲಿಲ್ಲ. ಮೂರನೇ ಬೆಳೆಗೆ ಹೊಸ ಕೋಲುಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಇತ್ತು.

ತಿಪ್ಪೇನಹಳ್ಳಿಯ ಶ್ರೀನಿವಾಸ್ ಹತ್ತು ವರ್ಷಗಳಿಂದ ಟೊಮೆಟೊ ಕೃಷಿಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಅವರು ಬಿದಿರಿನ ಕೋಲುಗಳನ್ನು ಖರೀದಿಸಿ ತೋಟದಲ್ಲಿ ಬಳಸಲು ಆರಂಭಿಸಿದರು.

‘ಮೊದಲೆಲ್ಲ ಒಂದು ನೀಲಗಿರಿ ಕೋಲಿಗೆ ₹18ರಿಂದ ₹22 ಕೊಡುತ್ತಿದ್ದೆವು. ಮಳೆ ಬಂದಾಗ ಮಣ್ಣಿನಲ್ಲಿ ಹೂತ ಭಾಗ ಕೊಳೆತು, ಗೆದ್ದಲು ಹಿಡಿದು ಮುರಿದು ಬೀಳುತ್ತಿದ್ದವು. ವರ್ಷದಲ್ಲಿ ಎರಡು ಬೆಳೆಗೆ ಮಾತ್ರ ಬಾಳಿಕೆ ಬರುತ್ತಿದ್ದವು. ಮೂರನೇ ಬೆಳೆಗೆ ಮತ್ತೆ ಹೊಸ ಕೋಲುಗಳನ್ನು ತರಬೇಕಿತ್ತು. ವರ್ಷಕ್ಕೆ ಸುಮಾರು ₹40 ಸಾವಿರ ಕೋಲುಗಳಿಗೇ ಖರ್ಚಾಗುತ್ತಿತ್ತು’ ಎಂದು ಹಿಂದಿನ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.

ಕಳೆದ ವರ್ಷ ತಲಾ ₹20ರಂತೆ 2,000 ಬಿದಿರಿನ ಕೋಲುಗಳನ್ನು ಖರೀದಿಸಿದ ಅವರು, ಈಗ ಮೂರನೇ ಬೆಳೆಯಲ್ಲೂ ಅವುಗಳನ್ನು ಬಳಸುತ್ತಿದ್ದಾರೆ.

‘ಮೊದಲಿಗೆ ದುಬಾರಿ ಅನಿಸಿತು. ಆದರೆ, ಮರುಬಳಕೆ ಮಾಡುತ್ತಿರುವುದರಿಂದ ಈಗ ಅದರ ಲಾಭ ಗೊತ್ತಾಗಿದೆ. ಐದು ವರ್ಷಗಳವರೆಗೂ ಇವು ಬಾಳಿಕೆ ಬರುತ್ತವೆ ಎಂಬ ನಿರೀಕ್ಷೆಯಿದೆ’ ಎನ್ನುತ್ತಾರೆ ಶ್ರೀನಿವಾಸ್.

ಒಂದು ಎಕರೆಗೆ ಸುಮಾರು 2 ಸಾವಿರ ಕೋಲುಗಳನ್ನು ಬಳಸಿದರೆ, ತಲಾ ₹20ರಂತೆ ಬಿದಿರಿನ ಕೋಲುಗಳ ಖರೀದಿಗೆ ₹40 ಸಾವಿರ ಬೇಕಾಗುತ್ತದೆ. ಈ ಕೋಲುಗಳನ್ನು ಐದು ವರ್ಷ ಬಳಸಲು ಸಾಧ್ಯವಾದರೆ, ಇದೇ ಅವಧಿಯಲ್ಲಿ ನೀಲಗಿರಿ ಕೋಲುಗಳನ್ನು ಬದಲಾಯಿಸಲು ತಗಲುವ ವೆಚ್ಚಕ್ಕೆ ಹೋಲಿಸಿದರೆ ಗಮನಾರ್ಹ ಉಳಿತಾಯವಾಗುತ್ತದೆ.

ರೈತರ ಅನುಭವದ ಪ್ರಕಾರ, ನೀಲಗಿರಿ ಕೋಲುಗಳಿಗೆ ವರ್ಷಕ್ಕೆ ಸುಮಾರು ₹40 ಸಾವಿರ ಖರ್ಚಾಗುತ್ತದೆ. ಐದು ವರ್ಷಗಳ ಲೆಕ್ಕದಲ್ಲಿ ಈ ಮೊತ್ತ ₹2 ಲಕ್ಷವಾಗುತ್ತದೆ. ಬಿದಿರಿನ ಕೋಲುಗಳಿಗೆ ಒಮ್ಮೆ ₹40 ಸಾವಿರ ಹೂಡಿಕೆ ಮಾಡಿದರೆ, ಅವು ಬಾಳಿಕೆ ಬರುವ ಅವಧಿಯಲ್ಲಿ ಮರುಖರೀದಿಯ ವೆಚ್ಚ ತಪ್ಪುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಎಕರೆಗೆ ಸುಮಾರು ₹1.60 ಲಕ್ಷದವರೆಗೆ ಉಳಿತಾಯ ಸಾಧ್ಯ.

ಆದರೆ, ಕೋಲುಗಳ ಗುಣಮಟ್ಟ, ಬೆಲೆ, ಎತ್ತರ, ನೆಡುವ ವಿಧಾನ ಮತ್ತು ಬಳಕೆಯ ಅವಧಿಯನ್ನು ಅವಲಂಬಿಸಿ ವೆಚ್ಚದಲ್ಲಿ ವ್ಯತ್ಯಾಸವಾಗುತ್ತದೆ. ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬಿದಿರಿನ ಕೋಲುಗಳ ಬೆಲೆ ತಲಾ ₹20ರಿಂದ ₹40ರವರೆಗೆ ಇದೆ.

ಒಂಟಿ ಕೋಲನ್ನು ಬಳಸಿದರೆ ಎಕರೆಗೆ ಸುಮಾರು 1,200 ಕೋಲುಗಳು ಸಾಕಾಗಬಹುದು. ಎರಡು ಕೋಲುಗಳನ್ನು ಬಳಸುವ ವಿಧಾನದಲ್ಲಿ ಸುಮಾರು 2 ಸಾವಿರ ಕೋಲುಗಳು ಬೇಕಾಗುತ್ತವೆ. ಹೀಗಾಗಿ, ರೈತರು ತಮ್ಮ ಬೆಳೆ ಮತ್ತು ತೋಟದ ಅಗತ್ಯಕ್ಕೆ ತಕ್ಕಂತೆ ಕೋಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ರೈತರಿಗೆ ಬಿದಿರಿನ ಕೋಲುಗಳಿಂದ ಆಗುವ ಅನುಕೂಲದ ಮಾಹಿತಿ ಹರಡುತ್ತಿದ್ದಂತೆ ಬೇಡಿಕೆಯೂ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು ರೈತರು ಇವುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ತುಮಕೂರು, ಶಿರಾ, ಮೈಸೂರು ಮಾತ್ರವಲ್ಲದೆ ಆಂಧ್ರಪ್ರದೇಶದ ಗಡಿಭಾಗದ ರೈತರಿಂದಲೂ ಬೇಡಿಕೆ ಬರುತ್ತಿದೆ.

ಕೋಲಾರದಲ್ಲಿ ಬಿದಿರಿನ ಕೋಲುಗಳ ವ್ಯಾಪಾರ ಆರಂಭಿಸಿರುವ ತಿಪ್ಪೇನಹಳ್ಳಿಯ ನಾಗರಾಜು ಅವರ ಅನುಭವವೂ ಇದಕ್ಕೆ ಸಾಕ್ಷಿ.

‘ಫೇಸ್‌ಬುಕ್‌ನಲ್ಲಿ ಬಿದಿರಿನ ಕೋಲುಗಳ ಬಗ್ಗೆ ತಿಳಿದುಕೊಂಡೆ. ಅಸ್ಸಾಂನಿಂದ ತರಿಸಿ ನನ್ನ ತೋಟದಲ್ಲಿ ಬಳಸುತ್ತಿದ್ದೆ. ಅವು ಹೆಚ್ಚು ಕಾಲ ಬಾಳಿಕೆ ಬರುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ರೈತರು ತಮಗೂ ತರಿಸಿಕೊಡುವಂತೆ ಕೇಳಿದರು. ಹೀಗಾಗಿ, ವ್ಯಾಪಾರ ಆರಂಭಿಸಿದೆ’ ಎನ್ನುತ್ತಾರೆ ನಾಗರಾಜು.

‘ಸಾಗಣೆ ವೆಚ್ಚ ಮತ್ತು ಖರೀದಿ ದರವನ್ನು ಲೆಕ್ಕ ಹಾಕಿ, ಅದಕ್ಕಿಂತ ಸ್ವಲ್ಪ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತೇನೆ. ಒಂದು ಟ್ರಕ್‌ನಲ್ಲಿ ಸುಮಾರು 20 ಟನ್ ಬಿದಿರಿನ ಕೋಲುಗಳನ್ನು ತರಿಸಬಹುದು. ಇದಕ್ಕೆ ಸುಮಾರು ₹4 ಲಕ್ಷ ಬಂಡವಾಳ ಬೇಕಾಗುತ್ತದೆ. ಕೆಲವು ರೈತರು ಸೇರಿಕೊಂಡು ಖರೀದಿ ಮಾಡುತ್ತಾರೆ’ ಎಂದು ವಿವರಿಸುತ್ತಾರೆ.

ಪ್ರತಿ ಟ್ರಕ್‌ನ ಮಾರಾಟದಲ್ಲಿ ವ್ಯಾಪಾರಿಗಳಿಗೆ ಸುಮಾರು ₹10 ಸಾವಿರದಿಂದ ₹15 ಸಾವಿರದವರೆಗೆ ಲಾಭ ದೊರೆಯುತ್ತದೆ ಎಂಬುದು ಅವರ ಅಂದಾಜು. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಟೊಮೆಟೊ ಹಂಗಾಮಿನಲ್ಲಿ ಬೇಡಿಕೆ ಹೆಚ್ಚಿರುತ್ತದೆ.

ಸ್ಥಳೀಯವಾಗಿ ಬಿದಿರಿನ ಕೋಲುಗಳನ್ನು ಸಂಗ್ರಹಿಸುವುದರ ಜೊತೆಗೆ ಈಶಾನ್ಯ ಭಾರತದ ಅಸ್ಸಾಂನಂತಹ ರಾಜ್ಯಗಳಿಂದಲೂ ಇವುಗಳನ್ನು ತರಿಸಲಾಗುತ್ತಿದೆ. ಬಂದ ಬಿದಿರನ್ನು ಅಗತ್ಯ ಗಾತ್ರಕ್ಕೆ ಕತ್ತರಿಸಿ, ರೈತರಿಗೆ ಮಾರಾಟ ಮಾಡುವ ಕೆಲಸದಲ್ಲಿ ಕೋಲಾರ, ಶ್ರೀನಿವಾಸಪುರ ಮತ್ತು ಮುಳಬಾಗಿಲು ಭಾಗದ ಹತ್ತುಕ್ಕೂ ಹೆಚ್ಚು ಸಣ್ಣ ಘಟಕಗಳು ತೊಡಗಿಕೊಂಡಿವೆ. ಮಹಿಳಾ ಸ್ವಸಹಾಯ ಸಂಘಗಳೂ ಈ ಉದ್ಯಮವನ್ನು ಕೈಗೆತ್ತಿಕೊಂಡಿವೆ.

ಹೀಗೆ, ಟೊಮೆಟೊ ಬೆಳೆಗೆ ಆಸರೆಯಾಗುವ ಕೋಲುಗಳು ಮತ್ತೊಂದು ಉದ್ಯೋಗದ ಮೂಲವಾಗಿವೆ. ಬಿದಿರಿನ ಕೋಲುಗಳನ್ನು ಖರೀದಿಸುವ ರೈತರಿಗೆ ದೀರ್ಘಾವಧಿಯಲ್ಲಿ ವೆಚ್ಚ ಕಡಿಮೆ ಮಾಡುವ ಅವಕಾಶ ಸಿಕ್ಕರೆ, ಅವುಗಳ ಪೂರೈಕೆ ಮತ್ತು ಸಂಸ್ಕರಣೆಯಲ್ಲಿ ತೊಡಗಿರುವವರಿಗೆ ಆದಾಯದ ಹೊಸ ದಾರಿಯೊಂದು ತೆರೆದಿದೆ.

ಟೊಮೆಟೊ ಮಾರುಕಟ್ಟೆಯ ಧಾರಣೆ ರೈತರ ಕೈಯಲ್ಲಿಲ್ಲ. ಬೆಲೆ ಏರಿಳಿತ ಕೃಷಿಯ ಲಾಭದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆ ಬೆಳೆಯಲು ಅಗತ್ಯವಾದ ಆಸರೆಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದು ರೈತರ ಪಾಲಿಗೆ ಮುಖ್ಯವಾಗುತ್ತದೆ. ನೀಲಗಿರಿ ಕೋಲುಗಳ ಬದಲಿಗೆ ಬಿದಿರಿನ ಕೋಲುಗಳನ್ನು ಬಳಸುತ್ತಿರುವ ಕೋಲಾರದ ರೈತರು ಈ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಅವರ ಹೊಲಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬದಲಾವಣೆ ಈಗ ಕೃಷಿಯ ಆಚೆಗೂ ವಿಸ್ತರಿಸಿ, ಸ್ಥಳೀಯ ಉದ್ಯಮಕ್ಕೂ ಆಸರೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ