
ನರಿಕೊಂಬು- ಶಂಭೂರು ರಸ್ತೆ ಕಾಮಗಾರಿ ಅವ್ಯವಸ್ಥೆಗೆ ರಮಾನಾಥ ರೈ ಗರಂ
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಸತ್ಯಶ್ರೀ ಗುಡಿ ಎದುರಿನ ಸರ್ವಿಸ್ ರಸ್ತೆಯಿಂದ ನರಿಕೊಂಬು- ಶಂಭೂರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯರು ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ದೂರಿದರು.
ಪಾಣೆಮಂಗಳೂರಿನಿಂದ ನರಿಕೊಂಬು-ಶಂಭೂರು ಗ್ರಾಮ ಸಂಪರ್ಕಿಸುವ ರಸ್ತೆಯನ್ನು ಏಕಾಏಕಿ ಮುಚ್ಚಿ ಜೆಸಿಬಿ ಮೂಲಕ ರಸ್ತೆ ಅಗೆದು ಹಾಕಿದ್ದಾರೆ. ಈ ಇಳಿಜಾರು ರಸ್ತೆ ತೀರಾ ಕಿರಿದಾಗಿದ್ದು, ರಸ್ತೆಯ ಎತ್ತರ ಕಡಿಮೆಗೊಳಿಸಿ ವಿಸ್ತರಣೆ ಮಾಡಬೇಕು. ಪ್ರತಿದಿನ ನೂರಾರು ವಾಹನ ಓಡಾಡುತ್ತಿದ್ದು, ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೆಡಿಪಿ ಮಾಜಿ ಸದಸ್ಯ ಉಮೇಶ ಬೋಳಂತೂರು ಆಗ್ರಹಿಸಿದರು.
ವಾಹನ ಸವಾರರು ಉಪಯೋಗಿಸುತ್ತಿರುವ ಪರ್ಯಾಯ ರಸ್ತೆ ಜೈನ ಬಸದಿಯಿಂದ ಅಂಡರ್ ಪಾಸ್ ಮೂಲಕ ನರಿಕೊಂಬು ಸರ್ಕಾರಿ ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ವಾಹನಗಳಿಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಮಾನಾಥ ರೈ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹೇಳಿದರು.
ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ. ಮಂಜುನಾಥ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಅವರಿಗೆ ಈ ಕಾಮಗಾರಿ ಬಗ್ಗೆ ನಿಗಾ ವಹಿಸಿ, ಮೇಲುಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಆಲ್ಬಟ್ರ್ ಮಿನೇಜಸ್, ಕೃಷ್ಣಪ್ಪ ಪೂಜಾರಿ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ನಿತ್ಯಾನಂದ ಕುರ್ಚಿಪಲ್ಲ, ಉಮೇಶ್ ನೆಲ್ಲಿಗುಡ್ಡೆ, ನರ್ಸಪ್ಪ ಅಮೀನ್, ಶೈಲೇಶ್ ಪೂಜಾರಿ, ಲೋಕೇಶ್, ಮೋನಪ್ಪ ನಿನ್ನಿಪಡ್ಪು, ಸತೀಶ್ ಶೇಡಿಗುರಿ ಮತ್ತಿತರರು ಇದ್ದರು.