
ಏಕದಿನ ವಿಶ್ವಕಪ್ ಆಡುವ ಆಸೆಗೆ ಪ್ರೇರಣೆ: ಅಂಧರ ಕ್ರಿಕೆಟ್ ತಂಡದ ಆಟಗಾರ ಲೋಕೇಶ್
ಕೊಪ್ಪಳ: ‘ಹಿಂದಿನ ಒಂದು ದಶಕದಲ್ಲಿ ಅನೇಕ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದೇನೆ. ಏಷ್ಯಾಕಪ್‌ನಲ್ಲಿ ಆಡುವ ಕನಸು ಕೂಡ ನನಸು ಮಾಡಿಕೊಂಡಿದ್ದೇನೆ. ಈಗ ನನ್ನ ಮುಂದಿರುವ ಗುರಿ ಅದೊಂದೇ, ಅದು ಏಕದಿನ ವಿಶ್ವಕಪ್. ಏಷ್ಯಾಕಪ್ ತಂಡದಲ್ಲಿ ಈಗ ಸ್ಥಾನ ಗಳಿಸಿದ್ದು ಪ್ರಮುಖ ಗುರಿ ಈಡೇರಿಸಿಕೊಳ್ಳಲು ಪ್ರೇರಣೆ ನೀಡಲಿದೆ’
ಇದು ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್ ಸಮೀಪದಲ್ಲಿರುವ ಯಡಹಳ್ಳಿ ಗ್ರಾಮದ ಲೋಕೇಶ್ ಅವರ ಮಾತುಗಳು.
ಭಾರತ ಅಂಧರ ತಂಡ ಬಾಂಗ್ಲಾದೇಶದಲ್ಲಿ ಆಯೋಜನೆಯಾಗಿರುವ ಏಷ್ಯಾಕಪ್‌ನಲ್ಲಿ ಆಡಲು ತೆರಳಿದ್ದು ಈ ತಂಡದಲ್ಲಿ ಲೋಕೇಶ್ ಅರ್ಹತೆ ಪಡೆದುಕೊಂಡಿದ್ದಾರೆ. ನ. 15ರಂದು (ಇಂದು) ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಆಡಲಿದೆ. ಉಳಿದ ಲೀಗ್ ಪಂದ್ಯಗಳಲ್ಲಿ ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ಎದುರು ಲೀಗ್ ಪಂದ್ಯಗಳನ್ನು ಆಡಲಿದೆ.
ದಶಕಕ್ಕೂ ಹಿಂದಿನಿಂದ ಭಾರತ ಅಂಧರ ತಂಡದಲ್ಲಿ ಛಾಪು ಮೂಡಿಸುತ್ತಿರುವ ಜಿಲ್ಲೆಯ ಪ್ರತಿಭೆ ಲೋಕೇಶ್ 2016ರ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಮಾದರಿಗೆ ಪದಾರ್ಪಣೆ ಮಾಡಿದ್ದರು. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. 2019ರ ಡಿಸೆಂಬರ್‌ನಲ್ಲಿ ನೇಪಾಳ ವಿರುದ್ಧ ಆಡಿದ್ದರು. 2019–20ನೇ ಸಾಲಿನಲ್ಲಿ ನಡೆದಿದ್ದ ‘ನಾಗೇಶ್ ಟ್ರೋಫಿ’ಯ ‘ಬಿ2’ ವಿಭಾಗದಲ್ಲಿ ಒಟ್ಟು ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದರು.
ಮೂರು ತಿಂಗಳು ಮಗುವಾಗಿದ್ದಾಗ ಬಲಭಾಗದ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಲೋಕೇಶ್ ನಾಲ್ಕು ವರ್ಷಗಳ ಹಿಂದೆ ಅಂಧರ ತಂಡದಲ್ಲಿ ಟಿ–20 ವಿಶ್ವಕಪ್‌ನಲ್ಲಿ ಆಡಿದ್ದರು. ಆಗ ಭಾರತ ಚಾಂಪಿಯನ್ ಆಗಿದ್ದು ಈಗ ಇತಿಹಾಸ. ಬಲಗೈ ಬ್ಯಾಟ್ಸ್‌ಮನ್, ಬಲಗೈ ಮಧ್ಯಮವೇಗದ ಬೌಲರ್ ಆಗಿದ್ದಾರೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಭಾರತ ಅಂಧರ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದ ಬಳಿಕ ಲೋಕೇಶ್ ಕ್ರಿಕೆಟ್ ವೃತ್ತಿಬದುಕಿಗೆ ಹೊಸ ದಿಕ್ಕು ಲಭಿಸಿತು. ಆಗ ಭಾರತ ಚಾಂಪಿಯನ್ ಆಗಿದ್ದು ಒಂದೆಡೆಯಾದರೆ, ಲೋಕೇಶ್ ಉತ್ತಮ ಪ್ರದರ್ಶನ ತೋರಿದ್ದರಿಂದ ನಿರಂತರ ಅವಕಾಶಗಳು ಲಭಿಸುತ್ತಲೇ ಹೋದವು. ಕಳೆದ ವರ್ಷ ಭಾರತ–ಬಾಂಗ್ಲಾದೇಶ, ಭಾರತ–ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು. 2021ರಲ್ಲಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಡೆದ ತ್ರಿಕೋನ ಸರಣಿಯಲ್ಲಿ ತಂಡದ ಸದಸ್ಯರಾಗಿದ್ದರು.
ದೈಹಿಕವಾಗಿ ಅಂಗವಿಕಲತೆಯಿದ್ದರೂ ತಮ್ಮ ಸಾಮರ್ಥ್ಯ, ಏನನ್ನಾದರೂ ಸಾಧಿಸಬೇಕು ಎನ್ನುವ ಗುರಿಯೊಂದಿಗೆ ಹಂತಹಂತವಾಗಿ ಕ್ರೀಡಾ ವೃತ್ತಿಬದುಕಿನಲ್ಲಿ ಲೋಕೇಶ್ ಮೇಲಕ್ಕೆ ಏರುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ವಾಲ್ ಕ್ಲೈಂಬಿಂಗ್, ಓಟದ ಸ್ಪರ್ಧೆಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಪ್ಯಾರಾ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದರು.
ಅನೇಕ ಸಾಧನೆಗಳನ್ನು ಮಾಡಿ ಛಾಪು ಮೂಡಿಸಿರುವ 31 ವರ್ಷದ ಲೋಕೇಶ್‌ಗೆ ಅಂಧರ ಏಕದಿನ ವಿಶ್ವಕಪ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕು ಎನ್ನುವ ಹೆಗ್ಗುರಿಯಿದೆ. ಆ ಟೂರ್ನಿಗಾಗಿ ಟ್ರಯಲ್ಸ್ ಹಾಗೂ ವಿವಿಧ ಟೂರ್ನಿಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಬೇಕಿದೆ. ಅದಕ್ಕೂ ಮೊದಲು ಈಗಿರುವ ಏಷ್ಯಾಕಪ್‌ನಲ್ಲಿ ಆಡಲು ಸಿಕ್ಕಿರುವ ಅವಕಾಶ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.