
ಚಿತ್ರದುರ್ಗ: ಜಿಲ್ಲಾ ಸರ್ಜನ್ ಬಳಿ ₹ 8 ಕೋಟಿ ಮೌಲ್ಯದ 5 ಮನೆ
ಚಿತ್ರದುರ್ಗ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಬುಧವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಪಿ. ರವೀಂದ್ರ ಅವರ ಬಳಿ ₹ 10 ಕೋಟಿ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಇನ್‌ಸ್ಪೆಕ್ಟರ್ ವೆಂಕಟೇಶಪ್ಪ ಅವರ ಬಳಿ ₹ 2.2 ಕೋಟಿಗೂ ಅಧಿಕ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ಡಾ. ಎಸ್.ಪಿ.ರವೀಂದ್ರ ಅವರ ನಿವಾಸ, ಖಾಸಗಿಯಾಗಿ ನಡೆಸುವ ಗ್ಲೋಬಲ್ ನರ್ಸಿಂಗ್ ಹೋಮ್, ಅವರ ಮಾವನ ಮನೆ, ಕಚೇರಿ ಸೇರಿ 5 ಕಡೆ ದಾಳಿ ನಡೆಸಿ ಪರಿಶೀಲಿಸಿದ ಲೋಕಾಯುಕ್ತ ಸಿಬ್ಬಂದಿ, ಚಳ್ಳಕೆರೆ ರಸ್ತೆಯಲ್ಲಿ ಅರಮನೆಯಂತಹ 5 ಅಂತಸ್ತಿನ ಭಾರಿ ಮನೆ ಕಂಡು ಆಶ್ಚರ್ಯಚಕಿತರಾದರು.
₹ 8 ಕೋಟಿ ಮೌಲ್ಯದ 5 ಮನೆಗಳು, ₹ 40 ಲಕ್ಷ ಮೌಲ್ಯದ 4 ನಿವೇಶನಗಳು, ₹ 30 ಲಕ್ಷ ಮೌಲ್ಯದ ಕೃಷಿ ಭೂಮಿ, ₹ 30.73 ಲಕ್ಷ ಮೌಲ್ಯದ ಒಡವೆಗಳು, ₹ 1.50 ಕೋಟಿ ಮೌಲ್ಯದ ವಾಹನಗಳು, ₹ 1.86 ಲಕ್ಷ ಮೌಲ್ಯದ ಇತರ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಆದಾಯ ಮೀರಿ ಶೇ 267ರಷ್ಟು ಹೆಚ್ಚು ಆಸ್ತಿ ಪತ್ತೆಯಾಗಿವೆ ಎಂದು ಲೋಕಾಯುಕ್ತ ಸಿಬ್ಬಂದಿ ತಿಳಿಸಿದರು.
ತೂಕ ಮತ್ತು ಅಳತೆ ಇಲಾಖೆಯ ವೆಂಕಟೇಶಪ್ಪ ಅವರ ಮನೆ, ಕಚೇರಿ ಸೇರಿ 4 ಕಡೆ ಪರಿಶೀಲಿಸಲಾಯಿತು. ₹ 21 ಲಕ್ಷ ನಗದು ಪತ್ತೆಯಾಗಿದ್ದು ಅದನ್ನು ಪುತ್ರಿಯ ವಿವಾಹಕ್ಕೆ ಸಂಗ್ರಹಿಸಿರುವುದಾಗಿ ವೆಂಕಟೇಶಪ್ಪವರು ತಿಳಿಸಿದ್ದಾಗಿ ಲೋಕಾಯುಕ್ತ ಸಿಬ್ಬಂದಿ ವಿವರಿಸಿದರು.
₹ 1.1 ಕೋಟಿ ಮೌಲ್ಯದ ಮನೆ, ₹ 48 ಲಕ್ಷ ಮೌಲ್ಯದ ಚಿನ್ನಾಭರಣ, ₹ 10 ಲಕ್ಷ ಮೌಲ್ಯದ ನಿವೇಶನ, ₹ 5 ಲಕ್ಷ ಮೌಲ್ಯದ ಕೃಷಿ ಭೂಮಿ, ₹ 37 ಲಕ್ಷದ ಇತರ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಆದಾಯ ಮೀರಿ ಶೇ 247ರಷ್ಟು ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.