ಚಿಕ್ಕಮಗಳೂರು: ಗಾಳಿಕೆರೆಗೆ ದುರ್ಗಮ ಹಾದಿ; ಪ್ರವಾಸಿಗರ ಪರದಾಟ

ಚಿಕ್ಕಮಗಳೂರು: ಗಾಳಿಕೆರೆಗೆ ದುರ್ಗಮ ಹಾದಿ; ಪ್ರವಾಸಿಗರ ಪರದಾಟ

ಚಿಕ್ಕಮಗಳೂರು: ಗಾಳಿಕೆರೆಗೆ ದುರ್ಗಮ ಹಾದಿ; ಪ್ರವಾಸಿಗರ ಪರದಾಟ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯು ಗಿರಿ ಕಂದರಗಳು ಹಚ್ಚ ಹಸಿರಿನಿಂದ ಕೂಡಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಬಂದವರು ಗಾಳಿಕೆರೆಗೂ ಭೇಟಿ ಅಲ್ಲಿನ ಪ್ರಕೃತಿಯ ಬೆರಗನ್ನು ಕಣ್ಣುಂಬಿಕೊಳ್ಳುತ್ತಾರೆ. ಇಲ್ಲಿರುವ ಗಾಳಿಕೆರೆ ಕೆಂಚರಾಯ ಗುಡಿ ಹಲವರಿಗೆ ಆರಾಧನೆಯ ಕೇಂದ್ರ. ಆದರೆ, ಇಲ್ಲಿಗೆ ಸಾಗುವ ರಸ್ತೆ ಕೊರಕಲು ಬಿದ್ದಿದ್ದು, ನಡೆದುಕೊಂಡೇ ಸಾಗಬೇಕಾದ ಅನಿವಾರ್ಯ ಇದೆ.

ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಇಡೀ ಪರ್ವತ ಶ್ರೇಣಿ ಹಸಿರು ಹೊದ್ದಿದೆ. ಪ್ರವಾಸಿಗರಿಗೆ ಹಿತಕರ ವಾತಾವರಣ ನಿರ್ಮಿಸಿದೆ. ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ, ಮಾಣಿಕ್ಯಧಾರಾ ಜಲಪಾತ ತನಕ ಹೋಗುವ ಪ್ರವಾಸಿಗರು ಅಲ್ಲಿಂದ ಮುಂದಕ್ಕೆ ಮೂರು ಕಿಲೋ ಮೀಟರ್ ದೂರದಲ್ಲಿರುವ ಗಾಳಿಕೆರೆಗೆ ಭೇಟಿ ನೀಡುವುದು ಸಾಮಾನ್ಯ. ಪರ್ವತ ಶ್ರೇಣಿಯ ಸೆರಗಿನಲ್ಲೇ ಇರುವ ರಸ್ತೆಯಲ್ಲಿ ಗಾಳಿಕೆರೆಗೆ ಸಾಗುವುದು ಪ್ರವಾಸಿಗರಿಗೆ ಹಿತ ಎನಿಸುತ್ತದೆ.

ಗಾಳಿಕೆರೆಯ ದಡದಲ್ಲಿ ಕೆಂಚರಾಯಸ್ವಾಮಿ ದೇಗುಲ ಕೂಡ ಇದ್ದು, ಅಲ್ಲಿಗೆ ಭಕ್ತರು ಬಂದು ಹರಕೆ ತೀರಿಸುವುದು ಸಂಪ್ರದಾಯ. ಕೆಂಚರಾಯನಿಗೆ ದೂರದ ಊರುಗಳಿಂದಲೂ ಭಕ್ತರಿದ್ದು, ರಾಜ್ಯ–ಹೊರ ರಾಜ್ಯಗಳಿಂದ ಬಂದು ಹೋಗುತ್ತಾರೆ. ಊಟಿಯಲ್ಲಿ ನೆಲೆಸಿರುವ ಹಲವು ಕನ್ನಡಿಗ ಕುಟುಂಬಗಳು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಯೇ ಅಡುಗೆ ಸಿದ್ಧಪಡಿಸಿ ದೇವರಿಗೆ ಎಡೆ ಇರಿಸಿ ನಂತರ ಊಟ ಮಾಡಿ ಹೋಗುವುದು ಪದ್ಧತಿ. ಅಡುಗೆ ತಯಾರಿಸಲು ಒಂದು ಶೆಡ್‌ ನಿರ್ಮಿಸಲಾಗಿದೆ.

ಆದರೆ, ಇಲ್ಲಿಗೆ ಒಂದು ಕಿಲೋ ಮೀಟರ್ ಹಿಂದೆಯೇ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಬೇಕು. ಸದಾ ತಂಪಾದ ವಾತಾವರಣ ಇರುವುದರಿಂದ ನಡೆದು ಹೋಗಲು ಪ್ರವಾಸಿಗರು ಖುಷಿಪಡುತ್ತಾರೆ. ಆದರೆ, ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿಕೊಂಡು ಹೋಗಲು ಬರುವ ಭಕ್ತರು, ದಿನಸಿ ಪದಾರ್ಥ, ಗ್ಯಾಸ್ ಸಿಲಿಂಡರ್ ಸೇರಿ ಎಲ್ಲವನ್ನು ಹೊತ್ತು ತರುವುದು ಕಷ್ಟದ ಕೆಲಸ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಇದ್ದ ರಸ್ತೆಯೂ ಕೊರಕಲಾಗಿದ್ದು, ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿದೆ.

ಈಗ ಒಂದೆಡೆ ವಾಹನ ನಿಲ್ಲಿಸಿ ನಡೆದು ಹೋಗುತ್ತಿದ್ದು, ಅಲ್ಲಿ ಕಾರುಗಳನ್ನು ಹಿಂದಕ್ಕೆ ತಿರುಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಕೊಂಚ ಆಯತಪ್ಪಿದರೆ ವಾಹನಗಳು ಪ್ರಪಾತಕ್ಕೆ ಬೀಳುತ್ತವೆ. ಆದ್ದರಿಂದ ರಸ್ತೆ ಸರಿಪಡಿಸಿ ಪ್ರವಾಸಿಗರು ಮತ್ತು ಗಾಳಿಕೆರೆ ಕೆಂಚರಾಯನ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ಗುಡಿಯ ಸುತ್ತ ಅನೈರ್ಮಲ್ಯ

ಗಾಳಿಕೆರೆ ಕೆಂಚರಾಯನ ಗುಡಿ ಮತ್ತು ಸುತ್ತಮುತ್ತ ತ್ಯಾಜ್ಯದ ಗುಂಡಿಯಾಗಿ ಮಾರ್ಪಟ್ಟಿದ್ದು, ಮೂಗು ಮುಚ್ಚಿ ತಿರುಗಬೇಕಾದ ಸ್ಥಿತಿಯಿದೆ.

ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುವ ಭಕ್ತರು, ಪ್ಲಾಸ್ಟಿಕ್ ತಟ್ಟೆಗಳು, ಲೋಟಗಳು, ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಗುಡಿಯ ಸುತ್ತಮುತ್ತ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. ಕೆರೆಯ ಸುತ್ತ ಇರುವ ತಂತಿಬೇಲಿಯ ಮೇಲೆ ಅಲ್ಲಲ್ಲಿ ಹಳೇ ಬಟ್ಟೆಗಳನ್ನು ಬಿಸಲಾಡಿದ್ದು, ಇದು ಕೂಡ ವಾತಾವರಣ ಕೆಡಿಸಿದೆ.

ಗುಡಿಯ ಹಿಂಭಾಗ ಮಾಂಸ ಕತ್ತರಿಸಲು ಕೊಠಡಿಯೊಂದನ್ನು ನಿರ್ಮಿಸಿದ್ದು, ಅಲ್ಲಿಗೆ ಕಾಲಿಡುವ ಸ್ಥಿತಿಯೂ ಇಲ್ಲ. ಗಿರಿಯ ಮೇಲ್ಭಾಗದ ಆಹ್ಲಾದಕರ ವಾತವರಣದ ನಡುವೆ ಅನೈರ್ಮಲ್ಯ ಉಂಟಾಗಿರುವುದು ಪ್ರವಾಸಿಗರಲ್ಲಿ ಬೇಸರ ತರಿಸಿದೆ. ಗಾಳಿಕೆರೆ ಕೆಂಚರಾಯ ದೇಗುಲದ ಬಳಿ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯ.

ಗುಡಿಯ ಸುತ್ತಮುತ್ತ ಮತ್ತು ಕೆರೆಗೆ ಸುತ್ತಲು ಹಾಕಿರುವ ತಂತಿ ಬೇಲಿಗೆ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆ ತೊಟ್ಟೆಗಳೆಲ್ಲವೂ ಖಾಲಿ ಇದ್ದು, ಕಸ ಮಾತ್ರ ಪರಿಸರದಲ್ಲಿ ಹರಿದಾಡುತ್ತಿದೆ. ತ್ಯಾಜ್ಯ ಸುರಿಯುವುದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗ ಚೇತನ್ ಮನವಿ ಮಾಡಿದರು.

261002-126-1106661825

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ