
ವಯಸ್ಸು ಹೆಚ್ಚಾದಂತೆ ಕಣ್ಣಿನ ಪೊರೆ ಸಮಸ್ಯೆ ಸಾಮಾನ್ಯ
ಹಳಿಯಾಳ: ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಆರ್‌ಸೆಟಿ), ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಟಿ. ಭವಾನಿ ಚಾರಿಟೀಸ್ ಹಾಗೂ ತಾಲ್ಲೂಕು ಆಸ್ಪತ್ರೆ ಹಳಿಯಾಳ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ತಾಲ್ಲೂಕು ಆಸ್ಪತ್ರೆಯ ನೇತ್ರ ತಜ್ಞ ಡಾ. ಸಲೀಂ ಕಿತ್ತೂರು ಶಿಬಿರ ಉದ್ಘಾಟಿಸಿ ಮಾತನಾಡಿ, ಕಣ್ಣಿನ ಆರೋಗ್ಯದ ಮಹತ್ವವನ್ನು ವಿವರಿಸಿದರು. ವಯಸ್ಸಾದಂತೆ ಕಣ್ಣಿನ ಪೊರೆ ಸಮಸ್ಯೆ ಸಾಮಾನ್ಯವಾಗಿದ್ದು, ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇಂತಹ ಉಚಿತ ಶಿಬಿರಗಳು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ ಎಂದರು.
ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿ.ಜೆ. ಕಟ್ಟಿ ಮಾತನಾಡಿ, ಶಿಬಿರದಲ್ಲಿ ತಪಾಸಣೆಗೊಳಗಾಗುವ ಫಲಾನುಭವಿಗಳಿಗೆ ದೊರೆಯುವ ಚಿಕಿತ್ಸಾ ಸೌಲಭ್ಯಗಳು ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ನಿರ್ದೇಶಕ ಕಿರಣಕುಮಾರ ಬಗಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಆಶಯದೊಂದಿಗೆ ವಿವಿಧ ಆಸ್ಪತ್ರೆಗಳು ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಇಂತಹ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ರಜತ್ ಪದ್ಮರಾಮ, ದಾಂಡೇಲಿ ಜನರಲ್ ಆಸ್ಪತ್ರೆಯ ನೇತ್ರ ತಂತ್ರಜ್ಞ ತಾಜುದ್ದೀನ್ ಬಲ್ಲಾರಿ ಹಾಗೂ ಹಳಿಯಾಳ ತಾಲ್ಲೂಕು ಆಸ್ಪತ್ರೆಯ ನೇತ್ರ ತಂತ್ರಜ್ಞೆ ಸವಿತಾ ಸಿ. ಕಮ್ಮಾರ ಅವರು ಫಲಾನುಭವಿಗಳ ಕಣ್ಣಿನ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಸಂಯೋಜಕರಾದ ವಿನಾಯಕ ಎ. ಚವ್ಹಾಣ, ಕ್ಷೇತ್ರ ಮೇಲ್ವಿಚಾರಕರಾದ ಉಳವಯ್ಯ ಬೆಂಡಿಗೇರಿ, ವಿಷ್ಣು ಮಡಿವಾಳ ಮತ್ತಿತರರು ಪಾಲ್ಗೊಂಡಿದ್ದರು.