ಬರದ ನಡುವೆಯೂ ಬಳ್ಳಾರಿಯಲ್ಲಿ ಹಬ್ಬದ ಕಳೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಬರದ ನಡುವೆಯೂ ಬಳ್ಳಾರಿಯಲ್ಲಿ ಹಬ್ಬದ ಕಳೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಬರದ ನಡುವೆಯೂ ಬಳ್ಳಾರಿಯಲ್ಲಿ ಹಬ್ಬದ ಕಳೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಬಳ್ಳಾರಿ:ಬರ ನಡುವೆಯೂ ದಸರಾಕ್ಕೆ ಚ್ಯುತಿ ಬಾರದಂತೆ ಜಿಲ್ಲೆಯಾದ್ಯಂತ ಸಂಭ್ರಮ ಮನೆಮಾಡಿದೆ. ದಸರಾ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿ, ಬಟ್ಟೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

ದಸರಾ ಹಾಗೂ ಆಯುಧ ಪೂಜೆಯು ರೈತಾಪಿ ವರ್ಗಕ್ಕೆ ವಿಶೇಷ ಮಹತ್ವದ ಹಬ್ಬಗಳು. ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್, ಎತ್ತುಬಂಡಿ, ನೇಗಿಲು, ಕುಂಟೆ ಸೇರಿದಂತೆ ವಿವಿಧ ಕೃಷಿ ಸಲಕರಣೆಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುವುದು ಗ್ರಾಮೀಣ ಭಾಗದ ಸಂಪ್ರದಾಯ. ಹೊಲದಲ್ಲಿ ಬೆಳೆದ ಫಸಲನ್ನು ಮನೆಗೆ ತಂದು ಸಂಭ್ರಮಿಸುವುದು, ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಹಬ್ಬ ಆಚರಿಸುವುದು ವಾಡಿಕೆ.

ಬರ, ಸಂಕಷ್ಟದ ಪರಿಸ್ಥಿತಿ ಇದ್ದರೂ, ಹಬ್ಬದ ಸಂಪ್ರದಾಯವನ್ನು ಕೈಬಿಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕುಟುಂಬಗಳು ತಮ್ಮ ಶಕ್ತ್ಯಾನುಸಾರ ಪೂಜೆ ಹಾಗೂ ಆಚರಣೆಗಳನ್ನು ಮುಂದುವರಿಸಿವೆ.

ಬೆಲೆ ಏರಿಕೆಯ ನಡುವೆಯೂ ಖರೀದಿ ಜೋರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಹೂವು, ಹಣ್ಣು, ತರಕಾರಿ, ಕಬ್ಬು, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು, ಪೂಜಾ ಸಾಮಗ್ರಿಗಳು, ಬಳೆ, ಸೀರೆ ಹಾಗೂ ಮಕ್ಕಳ ಬಟ್ಟೆಗಳ ಖರೀದಿ ಚುರುಕಾಗಿದೆ. ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಕುಟುಂಬ ಸಮೇತ ಜನರು ಮಾರುಕಟ್ಟೆಗೆ ಬರುತ್ತಿದ್ದಾರೆ.

ಆಯುಧ ಪೂಜೆ ಹಾಗೂ ದಸರಾ ಆಚರಣೆಗೆ ಅಗತ್ಯವಿರುವ ಸಾಮಗ್ರಿಗಳ ಮಾರಾಟವೂ ಹೆಚ್ಚಾಗಿದೆ. ವ್ಯಾಪಾರಿಗಳು ಅಂಗಡಿಗಳ ಮುಂದೆ ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಜೋಡಿಸಿಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

ಆದರೆ, ಹಬ್ಬದ ಖರೀದಿಗೆ ಬೆಲೆ ಏರಿಕೆ ಅಡ್ಡಿಯಾಗಿದೆ. ಹೂವು ಮತ್ತು ಹಣ್ಣುಗಳ ಬೆಲೆ ದುಪ್ಪಟ್ಟಾಗಿರುವುದರಿಂದ ಗ್ರಾಹಕರು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸುವಂತಾಗಿದೆ. ಇತರ ಪೂಜಾ ಸಾಮಗ್ರಿಗಳು ಹಾಗೂ ಬಟ್ಟೆಗಳ ಬೆಲೆಯೂ ಹೆಚ್ಚಾಗಿರುವುದರಿಂದ ಮಧ್ಯಮ ವರ್ಗದ ಕುಟುಂಬಗಳು ಖರ್ಚಿನ ಲೆಕ್ಕಾಚಾರ ಹಾಕುತ್ತಿವೆ. ಹಬ್ಬದ ಸಂಪ್ರದಾಯಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಬೆಲೆ ಏರಿಕೆಯ ಹೊರೆ ಮತ್ತೊಂದೆಡೆ ಜನರನ್ನು ಕಾಡುತ್ತಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನವರಾತ್ರಿ ಅಂಗವಾಗಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನ ಸೇರಿದಂತೆ ಸಣ್ಣ ದುರ್ಗಮ್ಮ , ಏಳು ಮಕ್ಕಳ ತಾಯಮ್ಮ ದೇವಿ, ಮಾರಿಕಾಂಬ, ಮಾರೆಮ್ಮ, ಸುಂಕ್ಲಮ್ಮ ಹಾಗೂ ಕನ್ನಿಕಾ ಪರಮೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಮತ್ತು ಪುರಾಣ ಪ್ರವಚನಗಳನ್ನು ನವರಾತ್ರಿ ಆರಂಭದಿಂದಲೂ ನಡೆಯುತ್ತಿವೆ.

ಆಯುಧ ಪೂಜೆ ಮತ್ತು ವಿಜಯದಶಮಿಗಾಗಿ ದೇವಸ್ಥಾನಗಳನ್ನು ತಳಿರು- ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯುತ್ ದೀಪಗಳ ಬೆಳಕು ಹಬ್ಬದ ಕಳೆ ಹೆಚ್ಚಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ