ಕಾಡು ಬಿಟ್ಟು ನಾಡಿನತ್ತ ಚಿರತೆಗಳ ಚಿತ್ತ, ಜನರಲ್ಲಿ ಹೆಚ್ಚಿದ ಆತಂಕ

ಕಾಡು ಬಿಟ್ಟು ನಾಡಿನತ್ತ ಚಿರತೆಗಳ ಚಿತ್ತ, ಜನರಲ್ಲಿ ಹೆಚ್ಚಿದ ಆತಂಕ

ಕಾಡು ಬಿಟ್ಟು ನಾಡಿನತ್ತ ಚಿರತೆಗಳ ಚಿತ್ತ, ಜನರಲ್ಲಿ ಹೆಚ್ಚಿದ ಆತಂಕ

ಉಡುಪಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನವಿಲು, ಮಂಗ, ಕಾಡು ಹಂದಿ, ಕಾಡು ಕೋಣ ಮೊದಲಾದ ವನ್ಯಜೀವಿಗಳು ಕೃಷಿ ಪ್ರದೇಶಗಳತ್ತ ಬರುತ್ತಿರುವುದರ ನಡುವೆಯೇ ಚಿರತೆಗಳೂ ಜನವಸತಿ ಪ್ರದೇಶಗಳಿಗೆ ಆಗಾಗ ಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಆಹಾರ ಅರಸಿ ಬರುವ ಚಿರತೆಗಳು ಬಾವಿಗೆ ಬೀಳುವ ಪ್ರಕರಣಗಳು ಜಿಲ್ಲೆಯಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ, ಅರಣ್ಯ ನಾಶ, ಆಹಾರ ಕೊರತೆಯಿಂದಲೇ ಈಚೆಗೆ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ ಎನ್ನುತ್ತಾರೆ ಪರಿಸರ ತಜ್ಞರು.

ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶ ಮಾತ್ರವಲ್ಲದೆ ನಗರ ಪ್ರದೇಶಗಳ ಸಮೀಪಕ್ಕೂ ಚಿರತೆಗಳು ಬರುತ್ತಿವೆ ಎನ್ನುತ್ತಾರೆ ಜನರು. ಎರಡು ವರ್ಷಗಳ ಹಿಂದೆ ಮಣಿಪಾಲ ಸಮೀಪದಲ್ಲೂ ಚಿರತೆ ಓಡಾಟ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಮಣಿಪಾಲ ಎಂಡ್‌ ಪಾಂಯಿಂಟ್‌ ಸಮೀಪ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಬೋನನ್ನೂ ಇರಿಸಿದ್ದರು.

ಜಿಲ್ಲೆಯಲ್ಲಿ ಚಿರತೆಗಳು ಮನುಷ್ಯರ ಮೇಲೆ ದಾಳಿ ನಡೆಸಿದ ಪ್ರಕರಣಗಳು ನಡೆ ದಿಲ್ಲವಾದರೂ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯಗಳು ದಾಖಲಾದರೆ ಸಾಮಾನ್ಯವಾಗಿ ಆ ಪ್ರದೇಶದ ಜನರಲ್ಲಿ ಭೀತಿ ಮೂಡುತ್ತದೆ. ಅರಣ್ಯ ಪ್ರದೇಶಗಳ ಸಮೀಪದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆಯೂ ಚಿರತೆಗಳು ದಾಳಿ ನಡೆಸಿರುವ ಪ್ರಕರಣಗಳು ಈ ಹಿಂದೆ ಸಾಕಷ್ಟು ನಡೆದಿವೆ.

ಚಿರತೆಗಳು ಹಿಂದೆ ಅಪರೂಪಕ್ಕೆ ಜನವಸತಿ ಪ್ರದೇಶಗಳಿಗೆ ಬರುತ್ತಿದ್ದವು ಈಗ ಹೆಚ್ಚಾಗಿ ಬರುತ್ತಿವೆ. ಅವುಗಳು ಬಾವಿಗೆ ಬೀಳುವ ಪ್ರಕರಣಗಳೂ ಹೆಚ್ಚುತ್ತಿವೆ ಎನ್ನುತ್ತಾರೆ ರೈತರು.

ಅರಣ್ಯ ಪ್ರದೇಶ ಮಾತ್ರವಲ್ಲದೆ ಜನವಸತಿ ಪ್ರದೇಶಗಳ ಸಮೀಪವಿರುವ ಕುರುಚಲು ಪೊದೆಗಳಲ್ಲೂ ಚಿರತೆಗಳು ಅವಿತುಕೊಳ್ಳುತ್ತವೆ. ಕೆಲವೊಮ್ಮೆ ಆಹಾರ ಅರಸಿ ಬಂದು ಬಾವಿಗೂ ಬೀಳುತ್ತವೆ. ಹೀಗೆ ಬಾವಿಗೆ ಬೀಳುವ ಚಿರತೆಗಳನ್ನು ರಕ್ಷಣೆ ಮಾಡಿ ಸೋಮೇಶ್ವರ ಅಭಯಾರಣ್ಯ, ಕುದುರೆಮುಖ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರಗಳ ಹೊರವಲಯಗಳಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಚಿರತೆಗಳು ನಾಯಿಗಳನ್ನು ಹಿಡಿದು ತಿನ್ನುತ್ತವೆ. ಅದಕ್ಕಾಗಿ ಅವುಗಳು ಜನ ವಸತಿ ಪ್ರದೇಶಗಳತ್ತ ಬರುತ್ತಿವೆ ಎಂದೂ ಹೇಳಿವೆ.

ಜಿಲ್ಲೆಯ ಹಿರಿಯಡ್ಕ, ಪರ್ಕಳ, ಶಂಕರನಾರಾಯಣ, ಕುಂದಾಪುರ, ಬೈಂದೂರು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿವೆ ಎನ್ನುತ್ತಾರೆ ರೈತರು.

ಚಿರತೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ರಾತ್ರಿ ಸಮಯಗಳಲ್ಲಿ ತೋಟಕ್ಕೆ ತೆರಳಲು ಭಯವಾಗುತ್ತಿದೆ. ಚಿರತೆಗಳು ಕಂಡು ಬರುವ ಪ್ರದೇಶಗಳಲ್ಲಿ ಬೋನುಗಳನ್ನು ಇರಿಸಿ ಅವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಗಳಿಗೆ ಬಿಡಬೇಕು ಎಂದು ಗ್ರಾಮೀಣ ಪ್ರದೇಶದ ಜನರು ಆಗ್ರಹಿಸಿದ್ದಾರೆ.

ಕರಿ ಚಿರತೆಯ ಜಾಡು ಪತ್ತೆ

ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳಂಜೆ ಎಂಬಲ್ಲಿ ಈಚೆಗೆ ಕರಿ ಚಿರತೆಯೊಂದು ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಆ ಪ್ರದೇಶದ ಜನರಲ್ಲಿ ಆತಂಕ ಮೂಡಿತ್ತು.

ವಂಶವಾಹಿಗಳ ವ್ಯತ್ಯಾಸದಿಂದ ಕಪ್ಪುಬಣ್ಣವನ್ನು ಪಡೆದುಕೊಳ್ಳುವ ಚಿರತೆಗಳು ಅಪರೂಪಕ್ಕೆ ಈ ಹಿಂದೆಯೂ ಜಿಲ್ಲೆಯಲ್ಲಿ ಕಂಡು ಬಂದಿದ್ದವು. ಎರಡು ವರ್ಷಗಳ ಹಿಂದೆ ಕುಂದಾಪುರ ವ್ಯಾಪ್ತಿಯಲ್ಲಿ ಕರಿ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡಲಾಗಿತ್ತು. ಕುಂದಾಪುರ ವ್ಯಾಪ್ತಿಯ ಮೂಕಾಂಬಿಕಾ ಅರಣ್ಯ ಪ್ರದೇಶಗಳಲ್ಲಿಯೂ ಕರಿ ಚಿರತೆಗಳು ಕಂಡು ಬಂದಿವೆ ಎನ್ನುತ್ತಾರೆ ಪರಿಸರ ತಜ್ಞರು.

‘ನಗರೀಕರಣದಿಂದ ಆವಾಸಸ್ಥಾನಕ್ಕೆ ಧಕ್ಕೆ’

‘ನಗರೀಕರಣ ಮತ್ತು ಮಾನವ ವಸತಿಗಳ ವಿಸ್ತರಣೆಯಿಂದಾಗಿ ವನ್ಯಜೀವಿಗಳ ಆವಾಸಸ್ಥಾನಗಳ ಮೇಲೆ ಮಾನವ ಅತಿಕ್ರಮಣ ಹೆಚ್ಚುತ್ತಿದೆ. ಚಿರತೆಗಳಿಗೆ ಬದುಕುಳಿಯಲು ವಿಶಾಲವಾದ ವಾಸಸ್ಥಳದ ಅಗತ್ಯವಿರುತ್ತದೆ. ಅವುಗಳ ಆವಾಸಸ್ಥಾನ ಕುಗ್ಗುತ್ತಿರುವುದರಿಂದ, ಅವು ಆಹಾರ ಮತ್ತು ಆಶ್ರಯಕ್ಕಾಗಿ ಮಾನವ ವಸತಿ ಪ್ರದೇಶಗಳತ್ತ ಚಲಿಸುವಂತಾಗುತ್ತಿದೆ’ ಎನ್ನುತ್ತಾರೆ ಉಡುಪಿಯ ಎಂಜಿಎಂ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮನಿತಾ ಟಿ.ಕೆ. ‘ಜನವಸತಿ ಪ್ರದೇಶಗಳ ಸಮೀಪದಲ್ಲಿರುವ ತ್ಯಾಜ್ಯ ವಿಲೇವಾರಿ ಸ್ಥಳಗಳು ಬೀದಿ ನಾಯಿಗಳು ಮತ್ತು ಹಂದಿಗಳನ್ನು ಆಕರ್ಷಿಸುತ್ತವೆ. ಅವು ಚಿರತೆಗಳಿಗೆ ಸುಲಭವಾಗಿ ದೊರೆಯುವ ಸಂಭಾವ್ಯ ಬೇಟೆಯಾಗುತ್ತವೆ’ ಎಂದೂ ಅವರು ಹೇಳಿದರು.

‘ನಾಯಿ ಸಾಕಲಾಗದ ಪರಿಸ್ಥಿತಿ ಇದೆ’

‘ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ವ್ಯಾಪ್ತಿಯ ಕನ್ನಾರು ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆಗಳ ಕಾಟ ಜಾಸ್ತಿಯಾಗಿದೆ. ಕೆಲವೊಮ್ಮೆ ಸಂಜೆ ವೇಳೆ ಚಿರತೆ ಕಾಣಸಿಗುತ್ತದೆ. ಚಿರತೆ ಹಾವಳಿಯಿಂದಾಗಿ ನಾಯಿಗಳನ್ನು ಸಾಕಲಾಗದ ಪರಿಸ್ಥಿತಿ ಇದೆ. ರಾತ್ರಿ ವೇಳೆ ಬರುವ ಚಿರತೆ ನಾಯಿಗಳನ್ನು ಹೊತ್ತೊಯ್ಯುತ್ತದೆ. ಕೋಳಿಯನ್ನೂ ಹಿಡಿಯುತ್ತಿದೆ’ ಎನ್ನುತ್ತಾರೆ ಚೇರ್ಕಾಡಿ ಹುತ್ತಿಯ ರಾಜೇಶ್‌ ಶೆಟ್ಟಿ. ‌‘ಚಿರತೆಗಳು ಬಂದು ಹಟ್ಟಿಗೂ ನುಗ್ಗುತ್ತವೆ. ಕರುಗಳ ಮೇಲೆ ದಾಳಿ ನಡೆಸಿರುವ ಘಟನೆಗಳೂ ಈ ಹಿಂದೆ ನಡೆದಿವೆ’ ಎಂದು ಅವರು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ