ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಕನಸು ನನಸಾಗುವುದೇ..?

ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಕನಸು ನನಸಾಗುವುದೇ..?

ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಕನಸು ನನಸಾಗುವುದೇ..?

ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸ್ಟೇಡಿಯಂ ನಿರ್ಮಾಣ ಆಗಬೇಕೆಂಬುದು ಕರಾವಳಿಯ ಕ್ರೀಡಾ ಪ್ರಿಯರ ಬಹುಕಾಲದ ಆಸೆ.  ಈಗ, ಸ್ಟೇಡಿಯಂ ಕನಸು ನನಸಾಗುವ ಆಶಾಕಿರಣವೊಂದು ಮೂಡಿದೆ. ಜಾಗ ಗುರುತಿಸುವಂತೆ ಕೆಎಸ್‌ಸಿಎ ಅಧ್ಯಕ್ಷರೇ ಸೂಚಿಸಿದ್ದಾರೆ. ಸ್ಟೇಡಿಯಂ ನಿರ್ಮಾಣದ ಸಾಧ್ಯತೆಗಳ ಬಗ್ಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಸುಸಜ್ಜಿತ ಕ್ರೀಡಾಂಗಣದಿಂದ ಕ್ರಿಕೆಟ್‌ ಬೆಳವಣಿಗೆ ಆಗುವ ಬಗೆಯ ಕುರಿತು ಕೋಚ್ ಸ್ಯಾಮ್ಯುಯೆಲ್ ಜಯರಾಜ್ ಮುತ್ತು ‘ಪ್ರಜಾವಾಣಿ ಚರ್ಚೆ’ಯಲ್ಲಿ ವಿವರಿಸಿದ್ದಾರೆ.    

ಈ ಬಾರಿ ಪ್ರಯತ್ನಕ್ಕೆ ಯಶಸ್ಸು ಖಚಿತ: ಸಂತೋಷ್ ಕುಮಾರ್ ಶೆಟ್ಟಿ 

ನಾನು ಕ್ರೀಡಾ ಪ್ರಿಯ. ಬ್ಯಾಡ್ಮಿಂಟನ್ ನನ್ನ ಅಚ್ಚುಮೆಚ್ಚಿನ ಆಟ. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಆದ ನಂತರ ನಗರದ ಉರ್ವಸ್ಟೋರ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಸಾಧ್ಯವಾಯಿತು. ಇಲ್ಲಿ ಕ್ರಿಕೆಟ್ ಸ್ಟೇಡಿಯಂ ಬೇಡಿಕೆ ಬಹಳ ಕಾಲದ್ದು. ಮುಡಾ ಅಧ್ಯಕ್ಷ ಆದ ನಂತರ ಅದರ ಬೆನ್ನು ಬಿದ್ದೆ. ಹೀಗಾಗಿ ಆ ಬಯಕೆ ಈಡೇರುವ ಭರವಸೆ ಇದೆ. ಇಲ್ಲಿ ಸುಸಜ್ಜಿತ ಕ್ರಿಕೆಟ್ ಅಂಗಣ ಇಲ್ಲದೆ ಪ್ರತಿಭೆಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಒಳ್ಳೆಯ ತರಬೇತಿಗಾಗಿ ಬೆಂಗಳೂರಿಗೆ ಹೋಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಖರ್ಚು ವೆಚ್ಚ, ಸಮಯ ಮತ್ತು ಒಟ್ಟಾರೆ ಪರಿಸ್ಥಿತಿ ಅನುಕೂಲಕರ ಇದ್ದರೆ ಮಾತ್ರ ಹೋಗಲು ಆದೀತು. ಇದೆಲ್ಲದರ ಪರಿವೆ ಇರುವುದರಿಂದ ಅಂಗಣಕ್ಕಾಗಿ ನನ್ನಿಂದ ಆಗುವಷ್ಟು ಪ್ರಯತ್ನ ಮಾಡುತ್ತಿದ್ದೇನೆ.

ಸ್ಟೇಡಿಯಂ ನಿರ್ಮಾಣದಲ್ಲಿ ಮೂಡಾದ ಪಾತ್ರ ಏನೂ ಇಲ್ಲ. ಸರ್ಕಾರ ಮತ್ತು ಕೆಎಸ್‌ಸಿಎ ನಡುವೆ ಮೂಡ ಸೇತುವೆಯಾಗಿ ನಿಲ್ಲಬಹುದು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜಾಗ ಕೊಟ್ಟರೆ ಸ್ಟೇಡಿಯಂ ನಿರ್ಮಿಸಲು ಸಿದ್ಧ ಎಂದಿದ್ದಾರೆ. ಮಂಗಳೂರು ಸುತ್ತಮುತ್ತ ಜಾಗ ಗುರುತಿಸಲಾಗುತ್ತಿದೆ. ಕ್ರಿಕೆಟ್ ಅಂಗಣಕ್ಕೆ ಮುಖ್ಯವಾಗಿ ನೀರು ಬೇಕು. ಆದ್ದರಿಂದ ನದಿ ಬದಿಯಲ್ಲೇ ಹೆಚ್ಚು ನೋಡಲಾಗುತ್ತಿದೆ‌. ಮಂಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 35 ಎಕರೆಗೂ ಹೆಚ್ಚು ಇರುವ ಜಾಗ ಗುರುತಿಸಲಾಗುತ್ತಿದೆ. ಸರ್ವೆಯರ್‌ಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ.  ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿ ಪಕ್ಷಬೇಧ ಮರೆತು ಎಲ್ಲರೂ ಸಹಕರಿಸುತ್ತಿದ್ದಾರೆ.

ಕೆಎಸ್‌ಸಿಎ ಕಳುಹಿಸಿದ ಪತ್ರವನ್ನು ಸೇರಿಸಿ ಆಶಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಟೇಡಿಯಂ ನಿರ್ಮಾಣದ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್ ಕರೆ ಮಾಡಿ ಪ್ರೋತ್ಸಾಹ ತುಂಬಿದ್ದಾರೆ. 50 ಎಕರೆ ಜಾಗಕ್ಕೆ ಆದ್ಯತೆ ಕೊಡುತ್ತಿದ್ದು ಎಲ್ಲ ಸಿದ್ಧತೆ ಆದ ನಂತರ ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಆಹ್ವಾನಿಸಲಾಗುವುದು.

 
ಪ್ರತಿಭಾ ಶೋಧಕ್ಕೆ, ಪಲಾಯನ ತಡೆಗೆ ಅನುಕೂಲ: ಸ್ಯಾಮ್ಯುಯೆಲ್ ಜಯರಾಜ್ ಮುತ್ತು

ಈ ಭಾಗದಲ್ಲಿ ತರಬೇತಿ ಚೆನ್ನಾಗಿಯೇ ನಡೆಯುತ್ತಿದೆ. ಇಲ್ಲಿಯ ಹವಾಮಾನವು ಉತ್ತಮ ವೇಗದ ಬೌಲರ್‌ಗಳನ್ನು ಸೃಷ್ಟಿಸುತ್ತದೆ. ಪ್ರತಿಭಾವಂತ ಬ್ಯಾಟರ್‌ಗಳು ಕೂಡ ಇದ್ದಾರೆ. ಇಲ್ಲಿ ಹೆಚ್ಚಾಗಿ ಇರುವುದು ಮಣ್ಣಿನಿಂದ ತಯಾರಿಸಿದ ಪಿಚ್‌ಗಳು. ಸಿಮೆಂಟ್ ಮತ್ತು ಕಾಂಕ್ರೀಟ್‌ ಹಾಸಿನ ಆಸ್ಟ್ರೊ ಟರ್ಫ್ ವಿಕೆಟ್‌ಗಳೂ ಇವೆ. ತೆಂಗಿನ ನಾರಿನ ಮ್ಯಾಟಿಂಗ್‌ ಕೂಡ ಬಳಸಲಾಗುತ್ತಿದೆ. ಸದ್ಯ ಅನೇಕ ಕಡೆಗಳಲ್ಲಿ ಒಳಾಂಗಣ ಕ್ರೀಡಾಂಗಣಗಳಲ್ಲೂ ತರಬೇತಿ ನಡೆಯುತ್ತಿದೆ. ಆದರೆ ಅದಕ್ಕೆ ಮಿತಿಗಳಿವೆ. ಹೊರಾಂಗಣ ಮತ್ತು ಟರ್ಫ್‌ ವಿಕೆಟ್ ಇದ್ದರೆ ಕ್ರಿಕೆಟ್‌ಗೆ ಹೆಚ್ಚು ಅನುಕೂಲ. ಉತ್ತಮ ಜಿಮ್ ಸೌಲಭ್ಯ, ಫಿಸಿಯೊಥೆರಪಿಸ್ಟ್, ಟ್ರೇನರ್‌ಗಳ ಅಗತ್ಯವಿದೆ.

ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆದರೆ ಮಹಿಳಾ ಕ್ರಿಕೆಟ್ ಕೂಡ ಬೆಳೆಯಬಹುದು. 19 ವರ್ಷದೊಳಗಿನವರ ಮತ್ತು ‘ಎ’ ತಂಡಗಳ ಪಂದ್ಯಗಳು ನಡೆದರೆ ಇಲ್ಲಿನ ಕ್ರಿಕೆಟ್‌ನಲ್ಲಿ ಹೊಸ ಅಲೆ ಏಳಬಹುದು. ಇಲ್ಲಿನ ಹವಾಮಾನ ನಾಲ್ಕು ಮತ್ತು ಐದು ದಿನಗಳ ಪಂದ್ಯಗಳಿಗೆ ಅನುಕೂಲಕರ. ಮಳೆಗಾಲ ಮುಗಿದರೆ ಕ್ರಿಕೆಟ್‌ಗೆ ಅತ್ಯುತ್ತಮ ವಾತಾವರಣ ಇರುತ್ತದೆ. ಇಲ್ಲಿ ಫಿಸಿಯೊಥೆರಪಿಗೆ ಸಂಬಂಧಿಸಿದ ಒಳ್ಳೆಯ ಕಾಲೇಜುಗಳು ಇವೆ. ಸ್ಟ್ರೆಂತ್ ಅ್ಯಂಡ್ ಕಂಡೀಷನಿಂಗ್‌ಗೆ ಸಂಬಂಧಿಸಿದ ಸಿಬ್ಬಂದಿ ತಯಾರಾಗುತ್ತಿದ್ದಾರೆ. ಕ್ರೀಡಾಂಗಣ ಆದರೆ ಕ್ರಿಕೆಟ್ ಮಾತ್ರವಲ್ಲ, ಹೋಟೆಲ್ ಉದ್ಯಮ ಮತ್ತು ಟ್ರಾನ್ಸ್‌ಪೋರ್ಟ್‌ ಉದ್ಯಮ ಬೆಳೆಯುತ್ತದೆ. ಮೈದಾನ ನಿರ್ವಹಣೆ ಮಾಡುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಕ್ಯೂರೇಟರ್, ಮಾರ್ಕರ್ ಬೇಕಾಗುತ್ತಾರೆ. ಯಂತ್ರಗಳ ಉಸ್ತುವಾರಿ ನೋಡಿಕೊಳ್ಳಲು ಜನರು ಬೇಕಾಗುತ್ತಾರೆ. ಮೈದಾನದ ಟರ್ಫ್ ನಿರ್ವಹಣೆಯೂ ದೊಡ್ಡ ಉದ್ಯೋಗವಾಗಿ ಬೆಳೆಯುತ್ತದೆ. ಒಟ್ಟಿನಲ್ಲಿ ಒಂದು ಕ್ರೀಡಾಂಗಣದಿಂದ ಸರ್ವಾಂಗೀಣ ಬೆಳವಣಿಗೆ ಆಗುತ್ತದೆ. 

ಕ್ರಿಕೆಟ್ ಬೆಳೆದರೆ ಅಂಡರ್ ಆರ್ಮ್ ಪಂದ್ಯಗಳಿಗೆ ಧಕ್ಕೆ ಇಲ್ಲ. ಈ ಭಾಗದಲ್ಲಿ ಅದಕ್ಕೆ ಅದರದೇ ಅಸ್ಮಿತೆ ಇದೆ. ಅಂಡರ್‌ ಆರ್ಮ್‌ಗೆ ಕ್ರಿಕೆಟ್ ತುಂಬ ಸಂಘಟಿತವಾಗಿ ನಡೆಯುತ್ತಿದೆ. ಹಾಗಾಗಿ ಅದಕ್ಕೆ ಯಾವ ತೊಂದರೆಯೂ ಆಗುವುದಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ