ಕೊಡಗಿಗೆ ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವಾಹ

ಕೊಡಗಿಗೆ ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವಾಹ

ಕೊಡಗಿಗೆ ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವಾಹ

ಮಡಿಕೇರಿ: ಸಾಲು, ಸಾಲು ರಜೆ ಇದ್ದುದ್ದರಿಂದ ಕಳೆದ 3–4 ದಿನಗಳಲ್ಲಿ ಕೊಡಗಿನತ್ತ ಪ್ರವಾಸಿಗರ ಪ್ರವಾಹವೇ ಹರಿದು ಬಂದಿತ್ತು. ಎಲ್ಲಿ ನೋಡಿದರಲ್ಲಿ ಜನಜಂಗುಳಿ ಕಂಡು ಬಂತು. ತಂಡೋಪತಂಡವಾಗಿ ಪ್ರವಾಸಿಗರು ಈ ಬಾರಿ ಭೇಟಿ ಕೊಟ್ಟಿದ್ದು ವಿಶೇಷ ಎನಿಸಿತ್ತು.

ಕೇವಲ ಎರಡೇ ದಿನಗಳಲ್ಲಿ 13,560 ಮಂದಿ ಪ್ರವಾಸಿಗರು ಇಲ್ಲಿನ ರಾಜಾಸೀಟ್‌ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದಾಗಿ ಇಡೀ ನಗರದಲ್ಲಿ ಸಂಚಾರದಟ್ಟಣೆ ಉಂಟಾಗಿ, ಸಾರ್ವಜನಿಕರು ಪರದಾಡಿದರು.

ಇಲ್ಲಿನ ಕೋಟೆ ಆವರಣದಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಶನಿವಾರ 1,900 ಮತ್ತು ಭಾನುವಾರ 1,100 ಮಂದಿ ಭೇಟಿ ನೀಡಿ ವೀಕ್ಷಿಸಿದ್ದಾರೆ. ರಾಜಾಸೀಟ್‌ಗೂ ಅಪಾರ ಸಂಖ್ಯೆಯ ಜನರು ಭೇಟಿ ನೀಡಿದ್ದರು. ಭಾನುವಾರ 5,100 ಮಂದಿ ಹಾಗೂ ಶನಿವಾರ 8,460 ಮಂದಿ ಭೇಟಿ ನೀಡಿದ್ದರು.

ಇದರಿಂದ ರಾಜಾಸೀಟ್‌ ರಸ್ತೆಯಂತೂ ವಾಹನಗಳಿಂದ ತುಂಬಿ ಹೋಗಿತ್ತು. ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಣಾದರು.

ಶುಕ್ರವಾರ ಮತ್ತು ಶನಿವಾರ ಹೋಟೆಲ್‌ ರೂಂಗಳು ಖಾಲಿ ಇಲ್ಲದೇ ಪ್ರವಾಸಿಗರೂ ಸಹ ಪರದಾಡಿದರು. ಬಹಳಷ್ಟು ಮಂದಿ ಹೋಟೆಲ್‌ಗಳನ್ನು ಹುಡುಕುತ್ತಾ ಬೇರೆ ಬೇರೆ ಪಟ್ಟಣಗಳತ್ತ ಹೊರಟಿದ್ದು ಕಂಡು ಬಂತು.

ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವುದಕ್ಕೆ ಕೆಲವೊಮ್ಮೆ ಸುಮಾರು 2 ಗಂಟೆಗಳ ಕಾಲ ಹಿಡಿಯಿತು.

ಇರುವೆಗಳ ಸಾಲಿನಂತೆ ಸಾಲುಗಟ್ಟಿ ವಾಹನಗಳು ಮಡಿಕೇರಿಯತ್ತ ಬರುತ್ತಿರುವುದು ಶುಕ್ರವಾರ, ಶನಿವಾರ ಕಂಡು ಬಂದಿತ್ತು. ಭಾನುವಾರ ಇಷ್ಟೇ ಸಂಖ್ಯೆಯ ವಾಹನಗಳು ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದುದ್ದು ಕಂಡು ಬಂತು.

ಕೆಎಸ್‌ಆರ್‌ಟಿಸಿ ಬಸ್‌ಗಳೂ ಪ್ರಯಾಣಿಕರಿಂದ ಭರ್ತಿಯಾಗಿದ್ದವು. ಇಲ್ಲಿನ ಬೇರೆ ಬೇರೆ ಪ್ರವಾಸಿ ಸ್ಥಳಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಗೌರವ ಸಲಹೆಗಾರ ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ‘ಶುಕ್ರವಾರ, ಶನಿವಾರ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಕಂಡು ಬಂತು. ಆದರೆ, ಭಾನುವಾರ ಪ್ರವಾಸಿಗರು ವಾಪಸ್ ತೆರಳಿದ್ದರಿಂದ ರೂಂಗಳು ಖಾಲಿ ಇದ್ದವು’ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ಶಶಿಧರ್ ಪ್ರತಿಕ್ರಿಯಿಸಿ, ‘ಕೇವಲ ಮಡಿಕೇರಿಗೆ ಮಾತ್ರವಲ್ಲ ವಿರಾಜಪೇಟೆ, ಕುಶಾಲನಗರ ಭಾಗಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದರು. ವಾರಾಂತ್ಯಗಳಲ್ಲಿ ಸರ್ಕಾರಿ ರಜೆ ದಿನಗಳು ಬಂದರೆ ಸಾಮಾನ್ಯವಾಗಿ ಕೊಡಗಿನಲ್ಲಿ ಪ್ರವಾಸಿಗರು ಹೆಚ್ಚು ಬರುತ್ತಾರೆ’ ಎಂದರು.

ಸದ್ಯ, ಈ ವಾರದಲ್ಲಿ ಶುಕ್ರವಾರ ಮತ್ತು ಶನಿವಾರ ಇದ್ದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಅನುಮಾನ. ಬಹಳಷ್ಟು ಶಾಲೆಗಳಿಗೆ ರಾಜ್ಯದಲ್ಲಿ ಇನ್ನೂ ದಸರೆ ರಜೆ ನೀಡಿಲ್ಲ. ಹೀಗಾಗಿ, ಈ ವಾರ ಹೆಚ್ಚಿನ ಪ್ರವಾಸಿಗರು ಕೊಡಗಿನತ್ತ ಬರುವುದು ಕಡಿಮೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು.

ಮುಂದಿನ ವಾರ ದಸರೆ ಅವಧಿಗೆಂದು ಈಗಾಗಲೇ ಅನೇಕ ಮಂದಿ ಪ್ರವಾಸಿಗರು ಇಲ್ಲಿರುವ ಹೋಟೆಲ್ ರೂಂಗಳನ್ನು ಬುಕ್ ಮಾಡಲು ವಿಚಾರಿಸುತ್ತಿದ್ದಾರೆ. ಹಲವು ಮಂದಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವರ್ಷವೂ ಕಳೆದ ವರ್ಷದಷ್ಟೇ ಪ್ರವಾಸಿಗರು ಆಗಮಿಸುವ ನಿರೀಕ್ಷೆಇದೆ.

ವಾಹನ ದಟ್ಟಣೆ: ಜನರು ಹೈರಾಣು

ಸುಂಟಿಕೊಪ್ಪ: ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಇರುವುದರಿಂದ, ಕೊಡಗಿಗೆ ಮಿತಿಮೀರಿದ ಸಂಖ್ಯೆಯಲ್ಲಿ ಪ್ರವಾಸಿ ವಾಹನಗಳು ಬಂದಿವೆ. ಸುಂಟಿಕೊಪ್ಪದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಜನ ಬಸವಳಿದರು.

ಗಾಂಧಿ ಜಯಂತಿಯಿಂದ ಪ್ರಾರಂಭವಾಗಿ ಅ.21ರವರೆಗೆ ರಜೆ ಸಿಕ್ಕಿದ್ದರಿಂದ ಹೊರ ಜಿಲ್ಲೆ, ರಾಜ್ಯಗಳ ಪ್ರವಾಸಿಗರ ದಂಡು ಸಾವಿರಾರು ಸಂಖ್ಯೆಯಲ್ಲಿ ರಜಾ ದಿನ ಆನಂದಿಸಲು ಕೊಡಗಿಗೆ ಭೇಟಿ ನೀಡಿದ್ದಾರೆ.

ಎಲ್ಲೆಲ್ಲೂ ವಾಹನ ದಟ್ಟಣೆ ಹೆಚ್ಚಾಗಿ ಕಂಡುಬಂತು.

ವಾರದ ಸಂತೆ ದಿ‌ನವಾದ ಭಾನುವಾರ ಹೋಬಳಿ ವ್ಯಾಪ್ತಿಯ ಗ್ರಾಹಕರ ವಾಹನಗಳ ಜೊತೆಯಲ್ಲಿ ಪ್ರವಾಸಿಗರ ವಾಹನ ಎಡಬಿಡದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ್ದರಿಂದ ಸಂತೆಗೆ ಬಂದ ಜನರು ರಸ್ತೆ ದಾಟಲು ಕಷ್ಟಪಡುವಂತಾಯಿತು.

ಬೆರಳೆಣಿಕೆಯ ಪೊಲೀಸ್ ಸಿಬ್ಬಂದಿ ವಾಹನ‌ ಸಂಚಾರ ಸುಗಮಗೊಳಿಸಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ