
ಯುವಕರ ದಾರಿತಪ್ಪಿಸುತ್ತಿರುವ ರಾಹುಲ್ ಗಾಂಧಿ: ಸಂಸದ ಗೋವಿಂದ ಕಾರಜೋಳ ಆರೋಪ
ಹೊಸದುರ್ಗ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಯುವಕರನ್ನು ತಪ್ಪು ದಾರಿಗೆಳೆಯುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಇತರ ಸಮುದಾಯಗಳ ಮತಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನೀಟ್ ಪರೀಕ್ಷೆಯಿಂದ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು, ಪೌರಕಾರ್ಮಿಕರ ಮಕ್ಕಳು ಸೇರಿ ಅನೇಕರು ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ದೊರೆತಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೂ ವೈದ್ಯರಾಗುವ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
‘ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ, ಈ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಟೀಕಿಸಿದರು.
‘ಯುವನಿಧಿ ಯೋಜನೆಯಡಿ ಅರ್ಹ ನಿರುದ್ಯೋಗಿ ಪದವೀಧರರಿಗೆ ಘೋಷಿಸಿದ ಆರ್ಥಿಕ ನೆರವು ಎಲ್ಲರಿಗೂ ಸಮರ್ಪಕವಾಗಿ ತಲುಪುತ್ತಿಲ್ಲ’ ಎಂದು ದೂರಿದರು.
ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚಿಸಬೇಕು ಎಂದು ಸೂಚಿಸಿ ದರು. ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿದರು.
ಬಿಜೆಪಿ, ಜೆಡಿಎಸ್ ಮುಖಂಡರಾದ ನಾರಾಯಣಸ್ವಾಮಿ, ಶಿವಸ್ವಾಮಿ, ಲಿಂಗಮೂರ್ತಿ, ಮಂಜುನಾಥ್, ರಾಜಶೇಖರ್, ಮುರಳಿ, ಮಾಧುರಿ ಗಿರೀಶ್, ಕೆ.ಎಸ್. ಕಲ್ಮಠ, ಮೋಹನ್, ಅಣ್ಣಪ್ಪ ಸ್ವಾಮಿ, ರಾಜೇಶ್ ಬುರುಡೆಕಟ್ಟೆ, ಕಿರಣ್ ಕುಮಾರ್, ತಮ್ಮಣ್ಣ, ಜಗದೀಶ್ ಗೂಳಿಹಟ್ಟಿ, ಕೊಂಡಾಪುರ ಮಂಜಣ್ಣ, ರವಿಕುಮಾರ್, ಜಗದೀಶ್ ರಾಮಯ್ಯ ಸೇರಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿದ್ದರು.