
ಚಳ್ಳಕೆರೆ| ಮೇವು–ನೀರಿಲ್ಲದೆ ರಾಸುಗಳ ಪರದಾಟ; ಗೋಶಾಲೆ ಆರಂಭಿಸಲು ರೈತರ ಒತ್ತಾಯ
ಚಳ್ಳಕೆರೆ: ಬರದ ತೀವ್ರತೆಗೆ ಬೆಳೆಗಳು ಒಣಗಿದ್ದರಿಂದ ರೈತರಷ್ಟೇ ಅಲ್ಲ, ಜಾನುವಾರುಗಳ ಬದುಕೂ ಸಂಕಷ್ಟಕ್ಕೆ ಸಿಲುಕಿದೆ. ಹೊಲಗಳಲ್ಲಿ ಮೇವು ಇಲ್ಲ; ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಸುಗಳನ್ನು ಸಾಕಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವ ಕೆಲವು ರೈತರು, ಅವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಅನಿವಾರ್ಯತೆ ಎದುರಾಗಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಕೇಂದ್ರದ ಬರ ಅಧ್ಯಯನ ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬರ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿರುವ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆಗೂ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಬಲಗೊಂಡಿದೆ.
ಚಳ್ಳಕೆರೆ ಹಾಗೂ ಮೊಳಕಾಲ್ಮುರು ಭಾಗದಲ್ಲಿ ಗೋವು ಸಾಕಣೆಗೆ ಆದ್ಯತೆ ನೀಡುವ ಬುಡಕಟ್ಟು ಕುಟುಂಬಗಳಿದ್ದು, ಬರದ ಹೊಡೆತದಿಂದ ಸಾವಿರಾರು ರೈತರ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದ ಹೊಲಗಳಲ್ಲಿ ಮೇವು ಬೆಳೆಯದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಗೋಶಾಲೆಗಳಿಗೆ ಸ್ಥಳ ಗುರುತು: ತಾಲ್ಲೂಕಿನ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ, ನಾಯಕನಹಟ್ಟಿ ಹೋಬಳಿಯ ಹಿರೇಕೆರೆ ಕಾವಲು, ಕಸಬಾ ಹೋಬಳಿಯ ಅಜ್ಜನಗುಡಿ ಹಾಗೂ ಪರಶುರಾಂಪುರ ಹೋಬಳಿಯ ಚೌಳೂರು ಗೇಟ್ ಬಳಿ ಗೋಶಾಲೆಗಳನ್ನು ಆರಂಭಿಸಲು ಸ್ಥಳ ಗುರುತಿಸಲಾಗಿದೆ. ಆದರೆ, ಅವು ಆರಂಭವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.
‘ಪಶುಸಂಗೋಪನಾ ಇಲಾಖೆಯ ಅಂಕಿ– ಅಂಶಗಳ ಪ್ರಕಾರ ತಾಲ್ಲೂಕಿ ನಲ್ಲಿ ಅಂದಾಜು 47,882 ಗೋವು ಗಳಿದ್ದು, 5.19 ಲಕ್ಷಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳಿವೆ. ಒಂದು ರಾಸು ದಿನಕ್ಕೆ ಅಂದಾಜು 6 ಕೆ.ಜಿ. ಒಣಮೇವು ಸೇವಿಸುತ್ತದೆ’ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪಿ. ಶ್ರೀನಿವಾಸ್ ತಿಳಿಸಿದರು.
‘ಗೋಶಾಲೆ ಆರಂಭಕ್ಕೆ ಸಕಲ ಸಿದ್ಧತೆ’
ತಾಲ್ಲೂಕಿನ ಚೌಳೂರು ಗೇಟ್, ದೊಡ್ಡ ಉಳ್ಳಾರ್ತಿ, ಹಿರೇಕೆರೆ ಕಾವಲು ಹಾಗೂ ಅಜ್ಜನಗುಡಿ ಸ್ಥಳಗಳಲ್ಲಿ ಗೋಶಾಲೆ ಆರಂಭಿಸಲು ಸಿದ್ಧತೆ ಕೈಗೊಳ್ಳುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಅಕ್ಟೋಬರ್‌ನಲ್ಲಿ ಆದೇಶ ಬಂದರೆ ತುರ್ತಾಗಿ ಜಾನುವಾರುಗಳಿಗೆ ನೆರಳು, ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಲಾಗುವುದು. ರೈತರು ತಮ್ಮ ರಾಸುಗಳನ್ನು ಗೋಶಾಲೆಗೆ ಕರೆತಂದು ರಕ್ಷಿಸಿಕೊಳ್ಳಬಹುದು ಎಂದು ತಹಶೀಲ್ದಾರ್ ರೇಹಾನ್ ಪಾಷ ಮನವಿ ಮಾಡಿದ್ದಾರೆ.