
ನಿಟ್ಟೆ ಮಹಾಲಿಂಗ ಅಡ್ಯಂತಾಯ ಕಾಲೇಜಿನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರ ಉದ್ಘಾಟನೆ
ಕಾರ್ಕಳ: ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗ ಮತ್ತು ಅಡ್ವಾನ್ಸ್ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗ ಜಂಟಿಯಾಗಿ ಸ್ಥಾಪಿಸಿದ ‘ಉಪಗ್ರಹ ಟ್ರ್ಯಾಕಿಂಗ್ ಕೇಂದ್ರ, ನಿಟ್ಟೆ ಸ್ಯಾಟಲೈಟ್ ಟ್ರ್ಯಾಕಿಂಗ್ ಮತ್ತು ನ್ಯಾವಿಗೇಷನಲ್ ಟೆಲಿಮೆಟ್ರಿ ಯುನಿಟ್ ಅನ್ನು ಉದ್ಘಾಟಿಸಲಾಯಿತು.
ಉದ್ಘಾಟನೆ ನೆರವೇರಿಸಿದ ಎಎಸ್ಪಿ ಇಶಿತಾ ಗುಪ್ತಾ ಮಾತನಾಡಿ, ಉಪಗ್ರಹ ಸಿಗ್ನಲ್ ತಂತ್ರಜ್ಞಾನ ಮಹತ್ವದ್ದಾಗಿದೆ. ಉಪಗ್ರಹ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಉಪಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅವಕಾಶಗಳನ್ನು ಅನ್ವೇಷಿಸಲು ಇದು ಸಹಕಾರಿಯಾಗಲಿದೆ ಎಂದರು.
ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಳುಣ್ಕರ್ ಮಾತನಾಡಿ, ಕೇಂದ್ರಕ್ಕೆ ತಾಂತ್ರಿಕ ಸಂಪನ್ಮೂಲವನ್ನು ಬೆಂಗಳೂರಿನ ಐಆರ್ಜಿ ಲ್ಯಾಬ್ನ ಸಂಸ್ಥಾಪಕಿ ಶ್ವೇತಾ ಪ್ರಭಾಕರನ್ ಮತ್ತು ಅವರ ತಂಡ ಒದಗಿಸಿದೆ. ನಿರ್ದಿಷ್ಟ ದಿಕ್ಕು ಹಾಗೂ ಕೋನದಲ್ಲಿ ಡಿಶ್ ಆಂಟೆನಾವನ್ನು ಅಳವಡಿಸುವ ಮೂಲಕ ಈ ಜಿಯೊಸ್ಟೇಷನರಿ ಉಪಗ್ರಹಗಳಿಂದ ರವಾನೆಯಾಗುವ ಸಂಕೇತ ಹಾಗೂ ಭೂಮಿಯ ಚಿತ್ರಗಳನ್ನು ಕೇಂದ್ರದಲ್ಲಿ ಸ್ವೀಕರಿಸಿ ಹವಾಮಾನದ ಬಗೆಗೆ ಮಾಹಿತಿಯನ್ನು ವಿಶ್ಲೇಷಿಸಬಹುದು ಎಂದರು.
ಪ್ರದರ್ಶನದ ಭಾಗವಾಗಿ ಕೊರಿಯನ್ ಉಪಗ್ರಹದಿಂದ ಸಿಗ್ನಲ್ ಅನ್ನು ಯಶಸ್ವಿಯಾಗಿ ಸ್ವೀಕರಿಸಲಾಯಿತು. ಕೇಂದ್ರವು ಹೆಚ್ಚು ಸುಧಾರಿತ ಪ್ರಯೋಗಗಳನ್ನು ನಡೆಸುವ ಮೂಲಕ ಪ್ರಗತಿ ಸಾಧಿಸುತ್ತದೆ ಎಂಬ ನಿರೀಕ್ಷೆಯಿದೆ ಎಂದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ವೀಣಾದೇವಿ ಶಾಸ್ತ್ರೀಮಠ್ ವಿ ಸ್ವಾಗತಿಸಿದರು. ಅಡ್ವಾನ್ಸ್ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ದುರ್ಗಾಪ್ರಸಾದ್ ಮಾತನಾಡಿದರು. ಆಕಾಶ್ ಶೆಟ್ಟಿ ನಿರೂಪಿಸಿದರು.