ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಖರ್ಗೆ ತವರಿನಲ್ಲಿ ಮತ್ತೆ ಅರಳಿದ ‘ಕಮಲ’

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಖರ್ಗೆ ತವರಿನಲ್ಲಿ ಮತ್ತೆ ಅರಳಿದ ‘ಕಮಲ’

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಖರ್ಗೆ ತವರಿನಲ್ಲಿ ಮತ್ತೆ ಅರಳಿದ ‘ಕಮಲ’

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದೆ. ಶಿಕ್ಷಕರು ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಕೊರಳಿಗೆ ‘ವಿಜಯ ಮಾಲೆ’ ತೊಡಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೂ ಇದೆ. ಅದಕ್ಕೂ ಹೆಚ್ಚಾಗಿ ಕಲಬುರಗಿಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ. ಇಂಥ ಅಖಾಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲು ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕ್ಷೇತ್ರಕ್ಕೆ ಅ.23ರಂದು ನಡೆದ ಮತದಾನದಲ್ಲಿ ಒಟ್ಟು 34,784 ಮತದಾರರ ಪೈಕಿ 30,253 ಶಿಕ್ಷಕರು ತಮ್ಮ ಮತಹಕ್ಕು ಚಲಾಯಿಸಿದ್ದರು. ದಾಖಲೆಯ ಶೇ87ರಷ್ಟು ಮತದಾನವಾಗಿತ್ತು. ಈ ಮತಗಳ ಎಣಿಕೆ ಪ್ರಕ್ರಿಯೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್‌ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ನಡೆಯಿತು. ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್‌ ನೇತೃತ್ವದಲ್ಲಿ ಅಭ್ಯರ್ಥಿಗಳು, ಏಜೆಂಟರು, ಚುನಾವಣಾ ವೀಕ್ಷಕರರ ಸಮ್ಮುಖದಲ್ಲಿ 14 ಟೇಬಲ್‌ಗಳಲ್ಲಿ ಮೂರು ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಿತು.

ಮೊದಲ ಪ್ರಾಶಸ್ತ್ರ್ಯದ ಮತಗಳ ಎಣಿಕೆಯಲ್ಲೇ ನಮೋಶಿ ಒಟ್ಟು 15,596 ಮತಗಳನ್ನು ಪಡೆದು, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಿಗದಿಪಡಿಸಿದ್ದ ಗೆಲುವಿನ ಕೋಟಾ (14,191) ದಾಟಿ ಮುನ್ನಡೆದರು. ಈ ಮೂಲಕ ಕ್ಷೇತ್ರವನ್ನು ಉಳಿಸಿಕೊಂಡರು.

ಮತಗಳ ಎಣಿಕೆ ಪ್ರಕ್ರಿಯೆಯಲ್ಲಿ ಚುನಾವಾಣಾ ವೀಕ್ಷಕ ಶಿವಕುಮಾರ ಕೆ.ಬಿ., ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್‌, ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ‌ಪಾಂಡ್ವೆ, ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್., ಬಳ್ಳಾರಿ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಕಲಬುರಗಿ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ‌್‌ ಸಂಕನೂರ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.

ಕಲಬುರಗಿ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ., ಡಿಸಿಪಿ ಶಾಲೂ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಬಿಗಿ ಬಂದೋಬಸ್ತ್ ವಹಿಸಿದ್ದರು.

* ಶಿಕ್ಷಕರೊಂದಿಗೆ ನಿರಂತರ ಸಂಪರ್ಕ

* ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಬಲ

* ಬಿ.ಎಸ್‌.ವೈ ಸಿ.ಟಿ.ರವಿ ಸುರೇಶಕುಮಾರ್‌ ಸೇರಿ ಬಿಜೆಪಿ ನಾಯಕರಿಂದ ಬಿರುಸಿನ ಪ್ರಚಾರ

* ಹತ್ತಾರು ಶಿಕ್ಷಣ ಸಂಸ್ಥೆ ಹೊಂದಿರುವ ಎಚ್‌ಕೆಇ ಸಂಸ್ಥೆಗೆ ನಮೋಶಿ ಅಧ್ಯಕ್ಷರಾಗಿರುವುದು

* ಕಲಬುರಗಿಯಲ್ಲೇ 10 ಸಾವಿರಕ್ಕೂ ಹೆಚ್ಚು ಮತಗಳಿದ್ದು ನಮೋಶಿ ಸ್ಥಳೀಯರಾಗಿರುವುದು ‘ಕೈ’ ಹಿನ್ನಡೆಗೆ ಕಾರಣಗಳು

* ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲೂ ಪ್ರಚಾರದ ಕೊರತೆ

* ಶಿಕ್ಷಕರೊಂದಿಗೆ ನೇರ ಸಂಪರ್ಕ ಇಲ್ಲದಿರುವುದು

* ಕೊನೆಕ್ಷಣದಲ್ಲಿ ಪ್ರಚಾರಕ್ಕೆ ಇಳಿದ ಕೆಪಿಸಿಸಿ ಅಧ್ಯಕ್ಷರು

ಸಚಿವರು ಐದು ಸಲ ಗೆದ್ದ ನಮೋಶಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಈ ಸಲ ಶಶೀಲ್‌ ನಮೋಶಿ ದಾಖಲಿಸಿದ್ದು ಐದನೇ ಗೆಲುವು. ಈ ಹಿಂದೆ ಅವರು 1996 2002 2008 ಹಾಗೂ 2020ರ ಚುನಾವಣೆಯಲ್ಲಿ ಗೆದ್ದು ಮೇಲ್ಮನೆ ಪ್ರವೇಶಿಸಿದ್ದರು. 2014ರಲ್ಲಿ ಮಾತ್ರವೇ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಎದುರು ಪರಾಭವಗೊಂಡಿದ್ದರು. ಆರಂಭದಿಂದಲೇ ಬಿಜೆಪಿಯಲ್ಲಿ ಸಂಭ್ರಮ ಮತಗಳ ಎಣಿಕೆ ಕೇಂದ್ರದ ಎದುರು ಬೆಳಿಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರಲ್ಲಿ ಸಡಗರ ಮನೆ ಮಾಡಿತ್ತು. ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ನಡೆಯುತ್ತಿದ್ದ ಕ್ಷಣಕ್ಷಣ ಮಾಹಿತಿ ಪಡೆಯಲು ಕಾತರರಾಗಿದ್ದರು. ಮೊದಲ ಸುತ್ತಿನ ಮತಗಳ ಎಣಿಕೆ ಅಂತ್ಯಕ್ಕೆ ವಿಜಯೋತ್ಸವದ ಮೂಡ್‌ನಲ್ಲಿದ್ದರು. ಸಂಜೆ ಗೋದೂಳಿ ಹೊತ್ತಿಗೆ ನಮೋಶಿ ಗೆಲುವು ನಿಚ್ಚಳವಾದ ಬೆನ್ನಲ್ಲೆ ಹರ್ಷೋದ್ಗಾರ ಕೇಕೆ ಜೈಕಾರಗಳು ಮೊಳಗಿದವು. ಭರ್ಜರಿ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರಲ್ಲಿ ಅಂಥ ಉತ್ಸಾಹ ಕಾಣಲಿಲ್ಲ. ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್‌ ಬಿಟ್ಟರೆ ಬೇರಾರೂ ಮತಗಳ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಶರಣಪ್ಪ ಮಟ್ಟೂರ ಕೆಲವು ಬೆಂಬಲಿಗರೊಂದಿಗೆ ಬೆಳಿಗ್ಗೆಯೇ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. 

‘ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ’

‘ನಮೋಶಿ ಗೆಲುವಿನಲ್ಲಿ ಕಲ್ಯಾಣ ಭಾಗದ ಜಿಲ್ಲೆಗಳ ಪಕ್ಷದ ಅಧ್ಯಕ್ಷರು ಶಾಸಕರು ಮಾಜಿ ಶಾಸಕರು ಮುಖಂಡರು ಕಾರ್ಯಕರ್ತರ ಶ್ರಮವಿದೆ. ಶಿಕ್ಷಕರು ಉಪನ್ಯಾಸಕರು ಪ್ರಾಧ್ಯಾಪಕರಿಗೆ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಈಗಲಾದರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಸರ್ಕಾರ ಮರು ಜಾರಿಗೊಳಿಸಬೇಕು. ಶಿಕ್ಷಕರನ್ನು ಮಾತುಕತೆಗೆ ಆಹ್ವಾನಿಸಿ ಅವರ ಬೇಡಿಕೆಗಳ್ನು ಈಡೇರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್‌ ಒತ್ತಾಯಿಸಿದರು. ‘ಖಾಲಿ ಹುದ್ದೆಗಳ ಭರ್ತಿ ಮಾಡಲಿ’ ‘ಶಿಕ್ಷಕರನ್ನು ಮೊಟ್ಟೆ ಬಾಳೆಹಣ್ಣು ಹಂಚುವ ಕೆಲಸ ಹಚ್ಚಿ ಪಾಠ ಮಾಡಲು ಬಿಡದಿರುವುದು ದುರ್ದೈವದ ಸಂಗತಿ. ಕಳೆದ ಎರಡ್ಮೂರು ವರ್ಷಗಳಿಂದ 371(ಜೆ) ಕಲಂ ಅಡಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಲೇ ಇದ್ದೇನೆ. ಆದರೆ 15 ಸಾವಿರ ಹುದ್ದೆ ಬಿಟ್ಟರೆ ಇನ್ನುಳಿದ ಯಾವುದೇ ಹುದ್ದೆಗಳನ್ನು ಸರ್ಕಾರ ತುಂಬಿಲ್ಲ. ಹಿಂದುಳಿದ ಭಾಗದಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ? ನಮ್ಮ ಭಾಗದಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಿದರೆ ಬೆಂಗಳೂರು ಮೈಸೂರು ಉಡುಪಿಗಿಂತಲೂ ಉತ್ತಮ ಫಲಿತಾಂಶ ನಾವು ಕೊಡುತ್ತೇವೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಆಗ್ರಹಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ