
ಜ್ಞಾನ ವಿಸ್ತರಣೆ ವಿದ್ಯಾಲಯದ ಪಾತ್ರ ಪ್ರಮುಖ: ಪ್ರೊ.ಎಚ್.ಎಚ್.ಭರಡಿ
ಧಾರವಾಡ: ‘ನಗರದ ವಿಶ್ವವಿದ್ಯಾಲಯಗಳು, ತಂತ್ರಜ್ಞಾನ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಶಿಕ್ಷಕರ ತರಬೇತಿ ಸಂಸ್ಥೆಗಳು ಜ್ಞಾನ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಎಚ್.ಎಚ್.ಭರಡಿ ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ನೌಕರರಿಗೆ (ಗ್ರೂಪ್ ಸಿ) ಈಚೆಗೆ ನಡೆದ ‘ಸುಸ್ಥಿರ ಅಭಿವೃದ್ಧಿ ಗುರಿ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಧಾರವಾಡವು ರಾಜ್ಯದ ಪ್ರಮುಖ ಶೈಕ್ಷಣಿಕ, ಸಂಶೋಧನಾ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ, ಐಐಐಟಿ, ಕರ್ನಾಟಕ ಮಹಾವಿದ್ಯಾಲಯ (ಕೆಸಿಡಿ) ಮೊದಲಾದವು ಇಲ್ಲಿನ ಜ್ಞಾನ ಪರಂಪರೆಗೆ ಕೊಡುಗೆ ನೀಡಿವೆ’ ಎಂದರು.
ಪ್ರಭಾರ ಡಿಡಿಪಿಐ ಉಮೇಶ ಬೊಮ್ಮಕ್ಕನವರ ಮಾತನಾಡಿ, ‘ಇಲ್ಲಿನ ಸಂಸ್ಥೆಗಳು ನವ ತಂತ್ರಜ್ಞಾನ, ನವೋದ್ಯಮ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುತ್ತಿವೆ. ಸಂಶೋಧನೆ, ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿವೆ’ ಎಂದು ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯೆ ನಾಗರತ್ನ ಹೂಗಾರ ಅವರು ಮಾತನಾಡಿ, ‘ಗುಣಮಟ್ಟದ ಶಿಕ್ಷಣದ ಜೊತೆಗೆ ಧಾರವಾಡದ ಸಾಂಸ್ಕೃತಿಕ ಪ್ರಭಾವವೂ ವಿಶಿಷ್ಟವಾಗಿದೆ. ಹಿಂದೂಸ್ತಾನಿ ಸಂಗೀತದ ಪ್ರಮುಖ ಕೇಂದ್ರ ಈ ಊರು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಜನಪದ ಕಲೆ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಇಲ್ಲಿನ ವಾತಾವರಣ ಅನೇಕ ಮಹನೀಯರನ್ನು ಬೆಳೆಸಿದೆ’ ಎಂದರು.
ಉಪ-ಪ್ರಾಚಾರ್ಯ ಮಾಳಪೂರ ಎ.ಎ ಮಾತಾಡಿದರು. ಸಿದ್ದರಾಮ. ಎಚ್.ಎಂ ಉಪನ್ಯಾಸ ನೀಡಿದರು. ಬೋಧಕರಾದ ಗುತ್ಯಪ್ಪ ಬಿ.ಬಿ, ವೀಣಾ ಕುಲಕರ್ಣಿ, ಶಿರೋಳಕರ ಎಂ.ಎಸ್, ಕೆ.ಎ.ಝಂಗೂರು ಇದ್ದರು.