
ಈಶಾನ್ಯ ಶಿಕ್ಷಕರ ಚುನಾವಣೆ:ಮೂರು ತಾಸಿನಿಂದ ಮುಂದುವರಿದ ಮತಪತ್ರಗಳ ಬಂಡಲಿಂಗ್ ಕಾರ್ಯ
ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಭಾಸ್ಕರ್ ಸಭಾಂಗಣದಲ್ಲಿ ಭರದಿಂದ ಸಾಗಿದೆ.
ಬೆಳಿಗ್ಗೆ 8 ಗಂಟೆಯ ಭದ್ರತಾ ಕೊಠಡಿಯ ಬೀಗ ಮುದ್ರೆ ತೆರೆದು ಮತಪೆಟ್ಟಿಗೆಗಳಲ್ಲಿರುವ ಮತಗಳ ಬಂಡಲ್ ಕಟ್ಟುವ ಕಾರ್ಯ ನಡೆಯುತ್ತಿದೆ. ಬೆಳಿಗ್ಗೆ 10.30ರ ತನಕ 100ಕ್ಕೂ ಅಧಿಕ ಮತಗಟ್ಟೆಗಳ ಮತ ಪತ್ರಗಳ ಬಂಡಲಿಂಗ್ ಕಾರ್ಯ ಮುಗಿದಿದ್ದು, ಇನ್ನುಳಿದ ಮತಪೆಟ್ಟಿಗೆಗಳನ್ನು ಇನ್ನಷ್ಟೇ ತೆರೆಯಬೇಕಿದೆ.
ಎಲ್ಲ ಮತಪತ್ರಗಳನ್ನು ತಲಾ 25ರಂತೆ ಬಂಡಲ್ ಕಟ್ಟಿದ ಬಳಿಕ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮೊದಲಿಗೆ ಸಿಂಧು ಹಾಗೂ ತಿರಸ್ಕತ ಮತಗಳ ಎಣಿಕೆ ನಡೆಯಲಿದ್ದು, ಬಳಿಕ ಗೆಲುವಿನ ಕೋಟಾ ನಿರ್ಧರಿಸಲಾಗುತ್ತದೆ. ಅದಾದ ಬಳಿಕ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.