
ದಲಿತ ಹೋರಾಟಗಾರರಿಗೆ ಪರಿಷತ್ ಸ್ಥಾನ ನೀಡಿ: ಆದಿಜಾಂಬವ ಸಂಘ ಒತ್ತಾಯ
ಬೆಂಗಳೂರು: ವಿಧಾನ ಪರಿಷತ್‌ನ ಐದು ಸ್ಥಾನಗಳು ತೆರವಾಗಿದ್ದು, ಸಮಾಜ ಸೇವಾ ಕ್ಷೇತ್ರದಿಂದ ದಲಿತ ಹೋರಾಟಗಾರರನ್ನು ನಾಮ ನಿರ್ದೇಶನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘ ಒತ್ತಾಯಿಸಿದೆ.
‘ಸಂವಿಧಾನದ ವಿಧಿ 171(5)ರ ಅನ್ವಯ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಮುಖ್ಯಮಂತ್ರಿ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲರು ನಾಮ ನಿರ್ದೇಶನ ಮಾಡುತ್ತಾರೆ. ಆದರೆ, ಇದುವರೆಗೂ ಸಮಾಜ ಸೇವಾ ಕ್ಷೇತ್ರದಿಂದ ದಲಿತ ಹೋರಾಟಗಾರರನ್ನು ಪರಿಗಣಿಸಿಲ್ಲ’ ಎಂದು ಸಂಘವು ಬೇಸರ ವ್ಯಕ್ತಪಡಿಸಿದೆ.
‘ಕಳೆದ ಬಾರಿ ಬಲಗೈ ಸಮುದಾಯದ ಇಬ್ಬರಿಗೆ ಪರಿಷತ್ ಸ್ಥಾನ ನೀಡಲಾಗಿದೆ. ಈ ಬಾರಿ ಮಾದಿಗ ಸಮುದಾಯದವರನ್ನು ಪರಿಗಣಿಸಿ, ನಾಮ ನಿರ್ದೇಶನ ಮಾಡಬೇಕು’ ಎಂದು ಸಂಘವು ಕೋರಿದೆ. ಅದಕ್ಕೆ ಬೆಂಬಲ ವ್ಯಕ್ತಪಡಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಎಂ.ವೆಂಕಟಸ್ವಾಮಿ, ಪಿ.ಯಶೋದಾ, ಸಿ.ವಿ.ರಮೇಶ್ ಕುಮಾರ್, ಎಚ್.ಮಾರಪ್ಪ, ಕಮಲಮ್ಮ, ಆರ್.ಮೋಹನ್ ರಾಜ್, ಅನಂತರಾಯಪ್ಪ, ಎನ್.ನಾರಾಯಣ ಸಹಿ ಮಾಡಿದ್ದಾರೆ.