
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ
ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳು, ಏಜೆಂಟರು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆದು ಮತಪೆಟ್ಟಿಗೆಗಳನ್ನು ತೆರೆದು ಮತ ಎಣಿಕೆ ಕೊಠಡಿಗೆ ಒಯ್ಯಲಾಯಿತು.
14 ಟೇಬಲ್ ಗಳಲ್ಲಿ ಮತಗಳ ಎಣಿಕೆ ಪ್ರಕ್ರಿಯೆ ಶುರುವಾಯಿತು.
ಚುನಾವಣಾ ಅಧಿಕಾರಿಯೂ ಆಗಿರುವ ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿರುವ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.
ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ, ಕಾಂಗ್ರೆಸ್ನ ಶರಣಪ್ಪ ಮಟ್ಟೂರ ಹಾಗೂ ಬಿಜೆಪಿಯ ಶಶೀಲ್ ನಮೋಶಿ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಶಿಕ್ಷಕರು ಯಾರ ಕೊರಳಿಗೆ ವಿಜಯದ ಮಾಲೆ ತೊಡಿಸಲಿದ್ದಾರೆ ಎಂಬುದು ಸಂಜೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಹಾಗೂ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಸೇರಿದಂತೆ ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಚುನಾವಣೆಗಳಲ್ಲೂ ಗೆಲುವು ನಿರ್ಧರಿಸಲು ಬಹುಮತವೇ ಏಕೈಕ ಮಾನದಂಡ. ಆದರೆ, ಆ ಬಹುಮತವನ್ನು ನಿರ್ಧರಿಸುವ ಅಂಶಗಳು–ಪ್ರಕ್ರಿಯೆ ತುಸು ವಿಭಿನ್ನ.
ನಗರ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರು ಅತಿಹೆಚ್ಚು ಮತಗಳನ್ನು ಪಡೆಯುವರೋ ಅವರೇ ‘ಜಯಶಾಲಿ’ ಎಂದು ನಿರ್ಧರಿಸಲಾಗುತ್ತದೆ. ಆದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಪ್ರಕ್ರಿಯೆ ತುಸು ಭಿನ್ನ. ಪರಿಷತ್ ಸದಸ್ಯರ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಇರುತ್ತದೆ. ಅಂದರೆ ಒಬ್ಬ ಮತದಾರ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆಯೂ ‘1,2,3,4...’ ಎಂದು ಪ್ರಾಶಸ್ತ್ಯ ನಮೂದಿಸಿ ಮತ ಹಾಕಿರುತ್ತಾರೆ. ಈ ಪ್ರಾಶಸ್ತ್ರವೇ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿ ಗೆಲುವು ನಿರ್ಧರಿಸಲು ‘ಕೋಟಾ’ ನಿರ್ಧರಿಸಲಾಗುತ್ತದೆ.
ಏನು ಕೋಟಾ? ನಿರ್ಧಾರ ಹೇಗೆ?:
ಮತದಾನದಂದು ಚಲಾವಣೆಯಾದ ಒಟ್ಟು ಮತಗಳನ್ನು ಮತಎಣಿಕೆ ವೇಳೆ ಮೊದಲಿಗೆ ಲೆಕ್ಕ ಹಾಕಲಾಗುತ್ತದೆ. ಅದರಲ್ಲಿ ಕ್ರಮಬದ್ಧವಲ್ಲದ ಮತಗಳನ್ನು ತಿರಸ್ಕರಿಸಲಾಗುತ್ತದೆ. ಇನ್ನುಳಿದ ಒಟ್ಟು ಸಿಂಧು ಮತಗಳ ಅರ್ಧದಷ್ಟು ಮತಗಳಿಗೆ +1 ಮತ ಸೇರಿಸಿ ಅದನ್ನು ‘ಗೆಲುವಿನ ಕೋಟಾ’ ಎಂದು ನಿರ್ಧರಿಸಲಾಗುತ್ತದೆ.
ಉದಾಹರಣೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ 30,250 ಮತಗಳು ಚಲಾವಣೆಯಾಗಿವೆ. ಅಷ್ಟೂ ಮತಗಳು ಸಿಂಧುವಾದರೆ ಅದರ ಅರ್ಧದಷ್ಟಾದ ‘15,125+1’ ಮತಗಳನ್ನು ಗೆಲುವಿನ ಕೋಟಾ ಆಗಿ ಘೋಷಿಸಲಾಗುತ್ತದೆ. ಇಷ್ಟು ಮತಗಳನ್ನು ಪಡೆಯುವ ಅಭ್ಯರ್ಥಿ ಗೆಲುವಿನ ನಗೆ ಬೀರುತ್ತಾರೆ.
ಪ್ರಾಶಸ್ತ್ಯದ ಲೆಕ್ಕಾಚಾರ ಹೇಗೆ?
ಕಣದಲ್ಲಿರುವ ಯಾವುದೇ ಅಭ್ಯರ್ಥಿಯು ಮೊದಲ ಸುತ್ತಿನಲ್ಲಿ ‘15,125+1’ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯದಿದ್ದರೆ ಗೆಲುವು ನಿರ್ಧರಿಸಲು 2ನೇ ಪ್ರಾಶಸ್ತ್ಯದ ಮತಗಳ ಎಣಿಕೆಗೆ ಮೊರೆ ಹೋಗಲಾಗುತ್ತದೆ. ಇದಕ್ಕಾಗಿ ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಎಲಿಮಿನೇಟ್ ಮಾಡಿ ಅವರು ಮತಪತ್ರಗಳಲ್ಲಿ ನಮೂದಿಸಿರುವ 2ನೇ ಪ್ರಾಶಸ್ತ್ಯದ ಮತಗಳನ್ನು ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಸೇರಿಸುತ್ತ(ಹಂಚುತ್ತ) ಬರಲಾಗುತ್ತದೆ.
ಉದಾಹರಣೆಗೆ ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಕೊನೆಯ ಅಭ್ಯರ್ಥಿ ಅಂದಾಜು 150 ಮತಗಳನ್ನು ಪಡೆದಿದ್ದಾರೆ ಎಂದುಕೊಳ್ಳಿ. ಆ ಪೈಕಿ ಯಾರಿಗೆಲ್ಲ 2ನೇ ಪ್ರಾಶಸ್ತ್ಯ ದೊರೆತಿವೆಯೋ ಅವುಗಳನ್ನು ಆಯಾಯ ಅಭ್ಯರ್ಥಿಗಳಿಗೆ ಸೇರಿಸುತ್ತ ಬರುತ್ತಾರೆ. ಗೆಲುವಿನ ಕೋಟಾ ತಲುಪುವವರೆಗೆ ಈ ಪ್ರಕ್ರಿಯೆ ನಡೆಯುತ್ತದೆ. ಅಂತಿಮವಾಗಿ ಯಾವ ಅಭ್ಯರ್ಥಿ ಮೊದಲಿಗೆ ಗೆಲುವಿನ ಕೋಟಾ ತಲುಪುತ್ತಾರೋ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಸಹಜವಾಗಿಯೇ ಇಂಥ ಚುನಾವಣೆಗಳಲ್ಲಿ ಫಲಿತಾಂಶ ಘೋಷಣೆಗೆ ಸಮಯ ಹಿಡಿಯುತ್ತದೆ.