
ಮಡಿಕೇರಿ ದಸರೆಯ ಬಲ ನಾರಿಶಕ್ತಿ
ಮಡಿಕೇರಿ: ಮಡಿಕೇರಿ ದಸರೆಯಲ್ಲಿ ವೇದಿಕೆಯ ಮೇಲೆ ಕಂಡವರು ಅನೇಕರು. ಪ್ರತಿ ನಿತ್ಯವೂ ವೇದಿಕೆಯಲ್ಲಿ ಕೆಲಸ ಮಾಡುತ್ತಿದ್ದವರು ಎಲ್ಲರ ಗಮನಕ್ಕೂ ಬಂದರು. ಆದರೆ, ವೇದಿಕೆಯ ಮೇಲೆ ಕಾಣಿಸಿಕೊಳ್ಳದೇ ತೆರೆಮರೆಯಲ್ಲೇ ಬೆವರು ಹರಿಸಿ ದುಡಿದವರೂ ಅನೇಕರಿದ್ದರು. ಅವರಲ್ಲಿ ಮಹಿಳೆಯರೂ ಸೇರಿದ್ದರು.
ಮುಖ್ಯವಾಗಿ ಇಲ್ಲಿ ನಡೆದ ಮಹಿಳಾ ದಸರೆ, ಕಾಫಿ ದಸರೆ ಸೇರಿದಂತೆ ಅನೇಕ ದಸರೆಗಳಲ್ಲಿ ಮಹಿಳೆಯರ ಪಾತ್ರ ಅತಿ ದೊಡ್ಡದಿತ್ತು. ಒಂದು ವೇಳೆ ಮಹಿಳೆಯರು ಇರದಿದ್ದರೆ ಈ ದಸರೆಗಳು ಯಶಸ್ಸನ್ನು ಪಡೆಯುತ್ತಲೇ ಇರಲಿಲ್ಲ. ಆದರೆ, ಇದು ಹೆಚ್ಚಿನ ಮಂದಿಯ ಗಮನಕ್ಕೆ ಬಾರಲೇ ಇಲ್ಲ.
ವಿಶೇಷವಾಗಿ, ಕಾಫಿ ದಸರೆ ಈ ಬಾರಿ ಯಶಸ್ವಿಯಾಯಿತು. ಈ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಅಗಾಧವಾಗಿತ್ತು. ಅದರಲ್ಲಿ ಕಾಫಿಯನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆಯು 8 ವಿಭಾಗದಲ್ಲಿ ನಡೆಯಿತು. ಈ ವಿಭಾಗದಲ್ಲಿ ನಡೆದ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದವರು ಮಹಿಳೆಯರೇ.
ಒಟ್ಟು 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 75 ಮಹಿಳೆಯರು ವಿವಿಧ ಬಗೆಯ ಸ್ವಾದಿಷ್ಟಕರವಾದ ಕಾಫಿ ತಿನಿಸುಗಳನ್ನು ತಂದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲ, ಸಭಿಕರಿಗೆ ಸೇವಿಸಲು ಉಚಿತವಾಗಿ ನೀಡಿದರು. ಸಾಲುಗಟ್ಟಿ ನಿಂತ ಸಭಿಕರು ಕಾಫಿ ತಿನಿಸುಗಳನ್ನು ಸವಿದರು. ಇದು ಕಾಫಿ ದಸರೆ ಯಶಸ್ಸಿನ ಒಂದು ಭಾಗವಾಗಿತ್ತು.
ಹಾಗೆಯೇ, ಮಹಿಳಾ ದಸರೆ ಈ ಬಾರಿ ಅಕ್ಷರಶಃ ಕಬ್ಬಿಣದ ಕಡಲೆಯಂತಿತ್ತು. ಕಾವೇರಿ ಪವಿತ್ರ ತೀರ್ಥೋದ್ಭವವಾದ ಮರುದಿನವೇ ಮಹಿಳಾ ದಸರೆ ನಿಗದಿಯಾಗಿತ್ತು. ಇಡೀ ಜಿಲ್ಲೆಯ ಎಲ್ಲ ಮಹಿಳೆಯರು, ಪುರುಷರು ದೈವಿಕ ಆರಾಧನೆಯಲ್ಲಿರುವಂತಹ ದಿನ ಅದು. ಮಾತ್ರವಲ್ಲ, ಎರಡೇ ದಿನಕ್ಕೆ ಆಯುಧಪೂಜೆಯೂ ಇತ್ತು. ಹೀಗಾಗಿ, ಮಹಿಳಾ ದಸರೆಯಲ್ಲಿ ಭಾಗವಹಿಸುವವರು ಯಾರು ಎಂಬ ಪ್ರಶ್ನೆಯೂ ಮೂಡಿತ್ತು.
ಇಂತಹ ಸಂದರ್ಭದಲ್ಲಿ ಮಹಿಳೆ ದಸರೆಗೆ ಜೀವ ತುಂಬಿದವರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಕ್ಕಳ ಪೋಷಕರು.
ಮಡಿಕೇರಿ ತಾಲ್ಲೂಕಿನಲ್ಲಿರುವ 251 ಅಂಗನವಾಡಿ ಕೇಂದ್ರಗಳಲ್ಲಿ ದುಡಿಯುತ್ತಿರುವ 450 ಕಾರ್ಯಕರ್ತೆಯರು, ಸಹಾಯಕಿಯರು ಮಹಿಳಾ ದಸರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಾತ್ರವಲ್ಲ, ಅಂಗನವಾಡಿ ಕೇಂದ್ರ ಮಕ್ಕಳ ಪೋಷಕರನ್ನೂ ಮನವೊಲಿಸಿ ಕರೆ ತಂದಿದ್ದರು. ಇವರೆಲ್ಲರೂ ವೈವಿಧ್ಯಮಯವಾದ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದರು.
ಮಾತ್ರವಲ್ಲ, ಸ್ತ್ರೀಶಕ್ತಿ ಸಂಘದವರು, ಸ್ವಸಹಾಯ ಸಂಘದವರು, ಓಡಿಪಿ ಸಂಸ್ಥೆಯ ಕಾರ್ಯಕರ್ತೆರಯು ವಿವಿಧ ಬಗೆಯ 20ಕ್ಕೂ ಅಂಗಡಿ ಮಳಿಗೆಗಳನ್ನು ತೆರೆದಿದ್ದರು. ಇವರು ವ್ಯಾಪಾರಕ್ಕೆ ತಂದಿರಿಸಿದ್ದ ವಸ್ತುಗಳು ಎಲ್ಲರ ಗಮನ ಸೆಳೆದಿದ್ದವು. ವೇದಿಕೆಯ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಬಿಟ್ಟು ಇವರು ತಂದಿದ್ದ ವಸ್ತುಗಳತ್ತ ಜನರು ಚಿತ್ತ ನೆಟ್ಟಿದ್ದರು.
ಇನ್ನು ಮಕ್ಕಳ ದಸರೆಯಲ್ಲೂ ತಮ್ಮ ಮಕ್ಕಳು ದಸರೆಯಲ್ಲಿ ಭಾಗವಹಿಸಲು ಕರೆ ತಂದಿದ್ದು ಬಹುತೇಕ ಮಹಿಳೆಯರೇ. ಮನೆಯಲ್ಲಿ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ತಮ್ಮ ಮಕ್ಕಳಿಗೆ ನೀಡಿದ್ದರು. ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ತಮ್ಮ ಮಕ್ಕಳಿಗೆ ಸಂತೆಯಲ್ಲಿ ಮಾರಾಟ ಮಾಡಲು ನೀಡಿದ್ದರು. ಮಹಿಳೆಯರ ಶ್ರಮ ಇರದೇ ಇದ್ದಿದ್ದರೆ ಮಕ್ಕಳ ದಸರೆಯೂ ಯಶಸ್ವಿಯಾಗುತ್ತಿರಲಿಲ್ಲ.
ಮಕ್ಕಳ ದಸರೆಯಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 5 ಅಂಗನವಾಡಿ ಕೇಂದ್ರಗಳ ಮಕ್ಕಳು ನೀಡಿದ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮಕ್ಕಳಿಗೆ ತರಬೇತಿ ನೀಡಿ ವೇದಿಕೆ ಏರಲು ಪ್ರೇರೇಪಣೆ ನೀಡಿದ್ದೇ ಈ ಮಹಿಳೆಯರು.
ಇಷ್ಟು ಮಾತ್ರವಲ್ಲ, ನಿರೂಪಕಿಯರಾಗಿ, ಹಾಡುಗಾರರಾಗಿ, ಪೊಲೀಸರಾಗಿ ಹೀಗೆ ಮಹಿಳೆಯರು ನಾನಾ ಸ್ವರೂಪದಲ್ಲಿ ದಸರೆಗಾಗಿ ಬೆವರು ಹರಿಸಿದ್ದಾರೆ. ದಸರೆಯ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಅತಿ ಹೆಚ್ಚಾಗಿಯೇ ಇದೆ.
ಹಬ್ಬದ ಸಂಭ್ರಮ ನಡುವೆಯೂ ಭಾಗಿ
ಮಡಿಕೇರಿಯಲ್ಲಿ ನಡೆದ ಕಾಫಿ ದಸರಾ ಹಾಗೂ ಮಹಿಳಾ ದಸರಾ ಕಾರ್ಯಕ್ರಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ವಿಶೇಷ ಪ್ರಯತ್ನ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ದೈನಂದಿನ ಕರ್ತವ್ಯಗಳ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಮನೆಕೆಲಸ, ಕುಟುಂಬದ ಆರೈಕೆ ಹಾಗೂ ಇಲಾಖೆಯ ಕೆಲಸಗಳ ಒತ್ತಡದ ನಡುವೆಯೂ ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಈ ಪ್ರಯತ್ನದ ಮುಖ್ಯ ಉದ್ದೇಶವಾಗಿತ್ತು.
ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳ ನಡುವೆ ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು, ದಸರಾ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ವಿಶೇಷವಾಗಿ ಕಾಫಿ ದಸರಾ ಹಾಗೂ ಮಹಿಳಾ ದಸರಾ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಸಮಯವನ್ನು ಹೊಂದಿಸಿಕೊಳ್ಳುವಂತೆ ಉತ್ತೇಜಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸಲು ಉತ್ತಮ ವೇದಿಕೆಯಾಗಿತ್ತು.
ಮಹಿಳೆಯರು ಕೇವಲ ಕುಟುಂಬ ಮತ್ತು ಕೆಲಸದ ಜವಾಬ್ದಾರಿಗಳಿಗೆ ಸೀಮಿತರಾಗದೆ, ತಮ್ಮ ಆಸಕ್ತಿ, ಕೌಶಲ್ಯ ಹಾಗೂ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು ಎಂಬ ಆಶಯದೊಂದಿಗೆ ಅವರನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಯಿತು. ಹಬ್ಬಗಳ ಸಂಭ್ರಮದ ನಡುವೆಯೂ ಮಹಿಳೆಯರು ತಮಗಾಗಿ ಸಮಯವನ್ನು ಮೀಸಲಿಟ್ಟು ಸಂತೋಷದಿಂದ ಪಾಲ್ಗೊಳ್ಳುವಂತೆ ಮಾಡುವ ಈ ಪ್ರಯತ್ನ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಮಹಿಳೆಯರ ಪ್ರತಿಭೆಗೆ ವೇದಿಕೆ, ಆತ್ಮವಿಶ್ವಾಸಕ್ಕೆ ಪ್ರೋತ್ಸಾಹ ಹಾಗೂ ಸಂತೋಷದ ಕ್ಷಣಗಳಿಗೆ ಅವಕಾಶ ಕಲ್ಪಿಸುವುದೇ ಇಂತಹ ಪ್ರಯತ್ನಗಳ ನಿಜವಾದ ಉದ್ದೇಶವಾಗಿದೆ. ಇವರೊಂದಿಗೆ ಸ್ತ್ರೀಶಕ್ತಿ ಸಂಘಗಳ, ಸ್ವಸಹಾಯ ಸಂಘಗಳ, ಓಡಿಪಿ ಸಂಸ್ಥೆಯ ಮಹಿಳೆಯರೂ ಭಾಗವಹಿಸಿ ಯಶಸ್ಸಿಗಾಗಿ ದುಡಿದಿದ್ದಾರೆ.
ಮೇಪಾಡಂಡ ಸವಿತಾ ಕೀರ್ತನಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ.