
ಕಲಬುರಗಿ ರೈಲು ನಿಲ್ದಾಣದಲ್ಲಿ ಜನ ಸಂವಾದ, ಪ್ರಯಾಣಿಕರ ಅಹವಾಲುಗಳಿಗೆ ಕಿವಿ
ಕಲಬುರಗಿ: ಮಧ್ಯ ರೈಲ್ವೆಯ ಸೋಲಾಪುರ ವಿಭಾಗದಿಂದ ಕಲ ಬುರಗಿ ರೈಲು ನಿಲ್ದಾಣ ಸೇರಿದಂತೆ ವಿಭಾಗದ 58 ಪ್ರಮುಖ ನಿಲ್ದಾಣಗಳಲ್ಲಿ ಜನ ಸಂವಾದ ವಿಶೇಷ ಅಭಿಯಾನ ನಡೆಸಿದ ಅಧಿಕಾರಿಗಳು ಪ್ರಯಾಣಿಕರ ಅಹವಾಲುಗಳಿಗೆ ಕಿವಿಯಾದರು.
ವಿಭಾಗ ವ್ಯಾಪ್ತಿಯ ಕಲಬುರಗಿ, ಗಾಣಗಾಪುರ ರೋಡ್, ಶಹಾಬಾದ್, ವಾಡಿ, ಹುಣಸಿಹಡಗಿಲ್, ನಾಗಣಸೂರ, ದುಧನಿ, ಅಕ್ಕಲಕೋಟೆ ಸೇರಿದಂತೆ ಸೋಲಾಪುರ ವಿಭಾಗದ ವಿವಿಧ ನಿಲ್ದಾಣಗಳಲ್ಲೂ ಈ ಅಭಿಯಾನ ನಡೆಯಿತು.
ಕಲಬುರಗಿಯಲ್ಲಿ ಆಯೋಜಿಸಿದ್ದ ಜನ ಸಂವಾದದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಅವರು ನಿಲ್ದಾಣದಲ್ಲಿ ಎರಡು ಹಾಗೂ ಮೂರನೇ ಪ್ಲಾಟ್‌ಫಾರಂನಿಂದ ಪ್ರಯಾಣಿಕರು ನಿರ್ಗಮನ ದ್ವಾರಕ್ಕೆ ಬರಲು ಈಗ ಇರುವ ಎಫ್‌ಒಬಿ (ಮೇಲ್ಸೇತುವೆಗಳು) ಕಿರಿದಾಗಿದ್ದು, ಈಗಾಗಲೇ ಮಂಜೂರಾಗಿರುವ 12 ಮೀಟರ್ ಅಗಲದ ಎಫ್‌ಒಬಿಯನ್ನು ಶೀಘ್ರ ಅಳವಡಿಸಬೇಕು. ಕಲಬುರಗಿಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ರಾತ್ರಿ ವೇಳೆ ಒಂದು ಹೊಸ ರೈಲು ಆರಂಭಿಸಬೇಕು’ ಎಂದರು.
‘ಹಬ್ಬದ ಋತು ಇರುವುದರಿಂದ ಬೆಂಗಳೂರಿನಲ್ಲಿ ನೆಲೆಸಿರುವವರು ಕಲಬುರಗಿಗೆ ಬರುತ್ತಾರೆ. ಆಗ ರೈಲುಗಳಲ್ಲಿ ಟಿಕೆಟ್ ಸಿಗದೇ ಇರುವುದಕ್ಕೆ ದುಪ್ಪಟ್ಟು ದರ ತೆತ್ತು ಬಸ್‌ಗಳಿಗೆ ಬರಬೇಕಿದೆ. ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ರೈಲು ಆರಂಭಿಸಬೇಕು. ಪ್ರಯಾಣಿಕರ ದಟ್ಟಣಿಯನ್ನು ನಿಭಾಯಿಸಲು ಈಗ ಇರುವ ರೈಲುಗಳಿಗೆ ಹೆಚ್ಚುವರಿ ಸಾಮಾನ್ಯ ಬೋಗಿಗಳನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದರು.
ದೌಂಡ್‌ನಿಂದ ಕಲಬುರಗಿಗೆ ಬರುವ ರೈಲನ್ನೇ ವಾಡಿವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.