
ಪದವೀಧರರ ಪಶ್ಚಿಮ ಮತಕ್ಷೇತ್ರ: ಸರದಿಯಲ್ಲಿ ನಿಂತು ಮತದಾನ
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ 29 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಯ ಅಂತ್ಯಕ್ಕೆ ಶೇ 28.37ರಷ್ಟು ಮತದಾನವಾಗಿದೆ.
ಹಾವೇರಿಯ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಮತದಾರರ ಸರದಿ ದೊಡ್ಡದಿದೆ.
ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಸರದಿಯಲ್ಲಿ ನಿಂತುಕೊಂಡಿದ್ದ ರುದ್ರಪ್ಪ ಲಮಾಣಿ, ಚುನಾವಣಾ ಅಧಿಕಾರಿಗಳ ಸೂಚನೆಯನ್ನು ಪಾಲಿಸಿ ಮತಪತ್ರವನ್ನು ಪಡೆದು ಮತದಾನ ಮಾಡಿದರು.
ಮತಗಟ್ಟೆಯ ಹೊರಗೆ ಅಭ್ಯರ್ಥಿಗಳ ಪರ ಬೆಂಬಲಿಗರು ಮತಯಾಚನೆ ಮಾಡುತ್ತಿದ್ದಾರೆ. ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯನ್ನು ಈ ಮತಕ್ಷೇತ್ರ ಹೊಂದಿದೆ.
ಹಾವೇರಿ ಜಿಲ್ಲೆಯಲ್ಲಿ 24648 ಮತದಾರರಿದ್ದಾರೆ. ಈ ಪೈಕಿ 6992 ಮತದಾರರು ಮತದಾನ ಮಾಡಿದ್ದಾರೆ.