
ರಾಗಿ ಬೆಳೆದ ರೈತರೀಗ ನಿರಾಳ: ಬರಗಾಲ ಪೀಡಿತ ನೆಲದಲ್ಲಿ ಆಶಾಕಿರಣ
ಹಗರಿಬೊಮ್ಮನಹಳ್ಳಿ: ರಾಜ್ಯದ ಬರಗಾಲ ಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿಯಲ್ಲೇ ಸ್ಥಾನ ಪಡೆದಿದ್ದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಒಂದು ಭರವಸೆಯ ಬೆಳಕಾಗಿ ರಾಗಿ ಕಾಣಿಸಿದೆ. ತಾಲ್ಲೂಕಿನ ಹಲವೆಡೆ ಮೆಕ್ಕೆಜೋಳ ಬೆಳೆದು ಭಾರಿ ನಷ್ಟವಾಗಿದ್ದರೂ, ನೀರಾವರಿ ಸೌಲಭ್ಯ ಇರುವಲ್ಲಿ ರಾಗಿ ಬೆಳೆದವರು ಖುಷಿಯಿಂದಿದ್ದಾರೆ.
ಈ ಬಾರಿ ಭೀಕರ ಬರಗಾಲ ಇದೆ ಎಂಬುದನ್ನು ಮೊದಲೇ ಊಹಿಸಿಕೊಂಡ ತಾಲ್ಲೂಕಿನ ಹಲವು ರೈತರು ಮೆಕ್ಕೆಜೋಳ ಬದಲಿಗೆ ರಾಗಿಯತ್ತ ತಿರುಗಿದ್ದರು. ಅಂತಹ ರೈತರ ನಿರ್ಧಾರ ನೂರಕ್ಕೆ ನೂರರಷ್ಟು ಸರಿಯಾಗಿಯೇ ಇರುವುದು ಈಗ ಸಾಬೀತಾಗುತ್ತಿದೆ.
ಈ ಬಾರಿ ತಾಲ್ಲೂಕಿನಲ್ಲಿ ದಾಖಲೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಈಗಾಗಲೇ 6,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ಉತ್ತಮ ಫಸಲು ಬಂದಿದ್ದು, ಕಟಾವಿಗೆ ಸಿದ್ಧಗೊಳ್ಳುತ್ತಿದೆ. ಇನ್ನೂ 4,000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ನೀರಾವರಿ ಪ್ರದೇಶದಲ್ಲಿ ಈ ಬಾರಿ ಕಳೆದ ಬಾರಿಗಿಂತಲೂ 20 ಪಟ್ಟು ಹೆಚ್ಚು ಬಿತ್ತನೆ ಆಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಕೇವಲ 90 ದಿನಗಳಲ್ಲಿ ಕಟಾವಿಗೆ ಬರುವ ರಾಗಿ ಬೆಳೆ ಬೆಳೆಯಲು ಮುಖ್ಯ ಕಾರಣ ಬೀಜೋಪಚಾರ ಮತ್ತು ಬೆಳೆಯ ನಿರ್ವಹಣೆ ಅತ್ಯಂತ ಕಡಿಮೆ ಇರುವುದು ರೈತರ ಪಾಲಿಗೆ ವರದಾನವಾಗಿದೆ. ರೋಗ, ಕೀಟ ಬಾಧೆ ಇರುವುದಿಲ್ಲ, ಇದರಿಂದಾಗಿ ರೈತರು ನಿರಾಳರಾಗಿದ್ದಾರೆ. ಬಿತ್ತನೆ ಮಾಡಿದ ಬಳಿಕ ಎಕರೆಗೆ ಒಂದು ಪಾಕೆಟ್ ಡಿಎಪಿ ಹಾಗೂ ಕಾಂಪ್ಲೆಕ್ಸ್ ಮೇಲುಗೊಬ್ಬರ ಹಾಕಿದರೆ ಆಯಿತು, ಬೆಳೆ ಕಟಾವಿನ ವರೆಗೂ ಬಿತ್ತನೆ ಮಾಡಿದ ಜಮೀನಿನ ಕಡೆ ಗಮನ ಹಾಕುವುದಿಲ್ಲ, ಮೂರು ಬಾರಿ ನೀರು ಹರಿಸಿದರೆ ಸಾಕು ಎನ್ನುತ್ತಾರೆ ರೈತ ಅಡವಿ ಆನಂದೇವನಹಳ್ಳಿಯ ರೈತ ಮಲ್ಲಪ್ಪ.
ಸರ್ಕಾರದಿಂದ ಕ್ವಿಂಟಲ್ ರಾಗಿ ಖರೀದಿಗೆ ₹5,200 ಬೆಂಬಲ ಬೆಲೆ ಹೆಚ್ಚಿಸಿರುವುದು ರೈತರು ರಾಗಿಯ ಕಡೆಗೆ ಮುಖ ಮಾಡಲು ಮುಖ್ಯ ಕಾರಣವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೂಲಿ ಖರ್ಚು ಸೇರಿದಂತೆ ರೈತರು ಎಕರೆಗೆ ₹15 ಸಾವಿರ ವ್ಯಯ ಮಾಡಿದರೆ ಸಾಕು, ಸರಾಸರಿ 20 ಕ್ವಿಂಟಲ್ ಇಳುವರಿ ತೆಗೆಯುವ ಮೂಲಕ ಎಕರೆಗೆ ₹80 ಸಾವಿರ ಲಾಭ ಗಳಿಸಬಹುದು ಎನ್ನುತ್ತಾರೆ ಕಡಲಬಾಳು ರೈತ ಕೆ.ಶರಣಪ್ಪ.
ತಂಬ್ರಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಎಕರೆಗೆ 25 ಕ್ವಿಂಟಲ್ ಇಳುವರಿ ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಹೇಳುತ್ತಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಿದರೂ ಸಾಕು ಉತ್ತಮ ಬೆಳೆ ಬರುತ್ತದೆ ಎನ್ನುತ್ತಾರೆ.
ಸರ್ಕಾರದ ಬಿತ್ತನೆ ಬೀಜ ಖರೀದಿ ಕೇಂದ್ರಗಳಲ್ಲಿ ಕೆಎಂಆರ್ 301, ಜಿಪಿಯು 28, ಎನ್‍ಎಲ್-365 ಹಾಗೂ ಖಾಸಗಿ ಅಂಗಡಿಗಳಲ್ಲಿ ದೊರೆಯುವ ಪಿಆರ್202 ತಳಿ ಬೀಜಗಳನ್ನು ರೈತರು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ.
ಬರಗಾಲ ಎದುರಾಗುವ ಲಕ್ಷಣ ಇದ್ದರೆ ನೀರು ಕಡಿಮೆ ಬೇಡುವ, ನಿರ್ವಹಣೆ ಕಡಿಮೆ ಕೇಳುವ ಬೆಳೆಯತ್ತ ಗಮನ ಹರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಹಗರಿಬೊಮ್ಮನಹಳ್ಳಿಯ ನೂರಾರು ರೈತರು ಸ್ಪಂದಿಸಿದ್ದರಿಂದಲೇ ಅವರಿಂದ ಗೆಲುವಿನ ನಗೆ ಬೀರುವುದು ಸಾಧ್ಯವಾಗಿದೆ.
ಖರ್ಚು ಕಡಿಮೆ, ಅಧಿಕ ಲಾಭ ಮೂರು ಬಾರಿ ನೀರು ಹರಿಸಿದರೆ ಸಾಕು 90 ದಿನದಲ್ಲೇ ಬೆಳೆ ಕೈಗೆ