
ಹೊಸಪೇಟೆಯಲ್ಲಿ ಪೊಲೀಸ್ ಹುತಾತ್ಮ ದಿನ|ಮಹಿಳಾ ಪೊಲೀಸರ ಮೇಲಿನ ಹಲ್ಲೆಗೆ ಐಜಿಪಿ ಬೇಸರ
ಹೊಸಪೇಟೆ (ವಿಜಯನಗರ): ದೇಶದಲ್ಲಿ ಇಂದು ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಹೊಡೆಯುವುದು, ಕಾರಣ ಇಲ್ಲದೆ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸುವುದು ನಡೆಯುತ್ತಿದೆ. ಪ್ರಶ್ನಿಸಿದರೆ ಮಾನವ ಹಕ್ಕಿನ ಉಲ್ಲಂಘನೆಯ ಗುರಾಣಿ ಹಿಡಿಯುತ್ತಾರೆ. ಇಂತಹ ಸವಾಲುಗಳ ನಡುವೆ ಪೊಲೀಸಿಂಗ್ ಬಹಳ ಸವಾಲಿನ ಕೆಲಸವಾಗುತ್ತಿದೆ ಎಂದು ಬಳ್ಳಾರಿ ಐಜಿಪಿ ಪಿ.ಎಸ್.ಹರ್ಷ ಹೇಳಿದರು.
ಇಲ್ಲಿನ ಪರೇಡ್ ಮೈದಾನದಲ್ಲಿ ಬುಧವಾರ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಭಟನೆ ವೇಳೆ ಉದ್ರಿಕ್ತ ಸ್ಥಿತಿಯನ್ನು ಉಂಟುಮಾಡುವ ಮನಃಸ್ಥಿತಿ ಹೆಚ್ಚುತ್ತಿದೆ. ಇದು ದೇಶಭಕ್ತಿಯಲ್ಲ. ದೇಶದ ಬಗ್ಗೆ ಗೌರವ ಇರುವವರು ಇಂತಹ ಕೃತ್ಯದಲ್ಲಿ ತೊಡಗಬಾರದು ಎಂದು ಸಲಹೆ ನೀಡಿದರು.
‘ದೇಶದ ಆಂತರಿಕ ಭದ್ರತೆ ಕಾಪಾಡುವ ದೊಡ್ಡ ಹೊಣೆಗಾರಿಕೆ ಪೊಲೀಸರ ಮೇಲೆ ಇದೆ. ಆದರೆ ಇದು ಇಂದು ದೊಡ್ಡ ಸವಾಲಿನ ಕೆಲಸವೂ ಆಗಿದೆ. ಎಡಪಂಥೀಯ ಚಟುವಟಿಕೆಗಳು ದೇಶದಲ್ಲಿ ಸಕ್ರಿಯವಾಗಿದ್ದ ಕಡೆ ಹೆಚ್ಚು ಬಲಿದಾನ ಮಾಡಿದವರು ಪೊಲೀಸರು ಎಂಬುದನ್ನು ಮರೆಯಬಾರದು. ಆಧುನಿಕ ಯುದ್ಧ ತಂತ್ರ ಬದಲಾಗಿರುವಂತೆ ಆಂತರಿಕ ಅಶಾಂತಿ ಮೂಡಿಸುವವವರ ಕಾರ್ಯತಂತ್ರವೂ ಬದಲಾಗಿದೆ. ಹೀಗಾಗಿ ಪೊಲೀಸರು ಬಹಳ ಎಚ್ಚರದಿಂದ ಇರಬೇಕು, ನಮ್ಮ ಕೌಶಲ ಹೆಚ್ಚಿಸಿಕೊಳ್ಳಬೇಕು, ಯಾವುದೇ ಸವಾಲು ಎದುರಿಸಲು ಸಜ್ಜಾಗಿರಬೇಕು’ ಎಂದು ಐಜಿಪಿ ಹೇಳಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಪೊಲೀಸರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು, ಅವರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ನಾವೆಲ್ಲ ನೆರವಾಗಬೇಕಿದೆ ಎಂದರು.
ಎಸ್‌ಪಿ ಎಸ್.ಜಾಹ್ನವಿ ಅವರು ಪೊಲೀಸ್ ಹುತಾತ್ಮ ದಿನ ಮಹತ್ವ ತಿಳಿಸಿ, ದೇಶದಲ್ಲಿ 2025–26ನೇ ಸಾಲಿನಲ್ಲಿ ಕರ್ತವ್ಯದ ವೇಳೆ 154 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ, ಇದರಲ್ಲಿ ರಾಜ್ಯದ ಐವರು ಸಹ ಸೇರಿದ್ದಾರೆ ಎಂದರು. ಎಲ್ಲರ ಹೆಸರನ್ನೂ ಓದಿ ಹೇಳಿದರು.
ಆರಂಭದಲ್ಲಿ ಪೊಲೀಸ್ ಗೌರವದೊಂದಿಗೆ ಹುತಾತ್ಮ ಪೊಲೀಸರಿಗೆ ಐಜಿಪ, ಡಿ.ಸಿ. ಎಸ್‌ಪಿ ಸಹಿತ ಹಲವು ಹಿರಿಯ ಅಧಿಕಾರಿಗಳು, ಗಣ್ಯರು ಪುಷ್ಪನಮನ ಸಲ್ಲಿಸಿದರು. ಕೊನೆಯಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಸರಳ ಪರೇಡ್ ಸಹ ನಡೆಯಿತು