ಚಿಂಚೋಳಿ: ಕೆರೆಗಳ ಒಡಲ ಹೂಳು ತೆಗೆಯಲು ಸಕಾಲ

ಚಿಂಚೋಳಿ: ಕೆರೆಗಳ ಒಡಲ ಹೂಳು ತೆಗೆಯಲು ಸಕಾಲ

ಚಿಂಚೋಳಿ: ಕೆರೆಗಳ ಒಡಲ ಹೂಳು ತೆಗೆಯಲು ಸಕಾಲ

ಚಿಂಚೋಳಿ: ಪ್ರಸಕ್ತ ವರ್ಷ ಉಂಟಾಗಿರುವ ಎಲ್‌ನಿನೊ ಪರಿಣಾಮ ಬರಗಾಲದಿಂದ ತಾಲ್ಲೂಕಿನ 19 ಸಣ್ಣ ನೀರಾವರಿ ಕೆರೆಗಳು ಖಾಲಿಯಾಗಿದ್ದು, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯ ತೊಡಗಿದೆ. ಚಿಂಚೋಳಿ ಸಣ್ಣ ನೀರಾವರಿ ಉಪ ವಿಭಾಗದಲ್ಲಿ 21 ಸಣ್ಣ ನೀರಾವರಿ ಕೆರೆಗಳಿದ್ದು, ಇದರಲ್ಲಿ ಐನಾಪುರ ಹಳೆ ಕೆರೆ ಮಾತ್ರ ಭರ್ತಿಯಾಗಿತ್ತು.

ನಾಗಾಈದಲಾಯಿ ಕೆರೆ ಒಡೆದಿದ್ದರಿಂದ ಪುನರ್ ನಿರ್ಮಾಣ ಬಾಕಿಯಿದೆ. ಉಳಿದ 19 ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ. ಐನಾಪುರ ಹಳೆ ಕೆರೆಯಲ್ಲಿ ಶೇ 90, ಹುಲ್ಸಗೂಡ ಶೇ 70, ಕೋಡ್ಲಿ ಶೇ 60, ತುಮಕುಂಟಾ ಶೇ 44, ಚಂದನಕೇರಾ ಶೇ 43, ಹೂಡದಳ್ಳಿ ಶೇ 34, ದೋಟಿಕೊಳ ಶೇ 32ರಷ್ಟು ಹಾಗೂ ಚಿಕ್ಕದಳ್ಳಿ ಶೇ 27, ಕೊಳ್ಳೂರು ಶೇ 26, ಸಾಲೇಬೀರನಹಳ್ಳಿ ಶೇ 21, ಪಂಗರಗಾ ಶೇ 15, ಧರ್ಮಾಸಾಗರ ಶೇ 14, ಅಂತಾವರಂ ಶೇ 13, ಹಸರಗುಂಡಗಿ ಶೇ 11, ಲಿಂಗಾನಗರ ಕೆರೆಯಲ್ಲಿ ಶೇ 10ರಷ್ಟು ಮಾತ್ರ ನೀರಿನ ಸಂಗ್ರಹವಿದೆ.

ಉಳಿದ ಕೆರೆಗಳಲ್ಲಿ ಶೇ 5ಕ್ಕಿಂತ ಕಡಿಮೆ ನೀರಿದ್ದು, ಇದು ನಿರುಪಯುಕ್ತವಾಗಿದೆ. ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿಗಿಂತಲೂ ಶೇ 50ರಷ್ಟು ಮಳೆ ಕೊರತೆಯಿದೆ. ಇದರಿಂದ ಕೆರೆಗಳಿಗೆ ಒಳ ಹರಿವಿಲ್ಲದೆ ಬಸವಳಿದರೆ, ನದಿ, ನಾಲಾ, ತೊರೆ ಹಳ್ಳ ಸಹಿತ ಮುಲ್ಲಾಮಾರಿ ನದಿಯೂ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಚಳಿಗಾಲದ ಆರಂಭದಲ್ಲಿಯೇ ಬಿಸಿಲಿನ‌ ಅಟ್ಟಹಾಸ ಒಂದೆಡೆಯಾದರೆ ಜಲ‌ಮೂಲಗಳು ಒಣಗುತ್ತಿರುವುದು ಬರಗಾಲದ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ.

ಸದ್ಯ ಎದುರಾಗಿರುವ ಬರ ಸ್ಥಿತಿಯನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಳ್ಳಬೇಕು. ಈಗ ಕೆರೆಗಳ ಅಂಗಳ ಖಾಲಿ ಇರುವುದರಿಂದ ಹೂಳು ತೆಗೆಯಲು ಇದು ಸಕಾಲ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಒದಗಿಸಿದರೆ ಭವಿಷ್ಯದಲ್ಲಿ ಜಲಕ್ಷಾಮ ನೀಗಿಸಲು ಈ ಕೆರೆಗಳು ವರದಾನವಾಗಲಿವೆ.

‘ಸುಮಾರು 4 ಲಕ್ಷ ಕೋಟಿಗೂ ಅಧಿಕ ಮೊತ್ತದ ಕರ್ನಾಟಕ ಬಜೆಟ್‌ ಗಾತ್ರವಿದ್ದು, ಬರಗಾಲದಂತಹ ಸಂದಿಗ್ಧ ಪರಿಸ್ಥಿಯಲ್ಲಿ ಕೆರೆಗಳ ಹೂಳೆತ್ತಲೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ರೈತರ ಬದುಕು ಹಸನುಗೊಳಿಸುವ ಕಾಳಜಿ ಸರ್ಕಾರಕ್ಕೆ ಇದ್ದಿದ್ದೇ ಆದರೆ ಬರಗಾಲದ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕೆರೆ ಹೂಳೆತ್ತಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ.

‘ದಶಕಗಳ ಹಿಂದೆ ವಿಶ್ವಬ್ಯಾಂಕ್‌ ನೆರವಿನಿಂದ ಸಣ್ಣ ನೀರಾವರಿ ಕೆರೆಗಳ ದುರಸ್ತಿ, ನವೀಕರಣ ಮತ್ತು ಪುನರುತ್ಥಾನ (ಆರ್‌ಆರ್‌ಆರ್‌) ಯೋಜನೆ ಜಾರಿಯಲ್ಲಿತ್ತು. ರಾಜ್ಯ ಸರ್ಕಾರ ಬರಗಾಲದ ಅವಧಿಯಲ್ಲಿ ಖಾಲಿಯಿರುವ ಕೆರೆಯ ಅಂಗಳದ ಹೂಳು ತೆಗೆಯಲು ಅತ್ಯಂತ ಉಪಯುಕ್ತವಾದ ‘ಟ್ರಿಪಲ್ ಆರ್’ ಯೋಜನೆ ಜಾರಿ ಮಾಡಬೇಕು’ ಎಂದು ರೈತ ಮುಖಂಡ ರಾಜಶೇಖರ ನಿಪ್ಪಾಣಿ ಒತ್ತಾಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ದೂರದೃಷ್ಟಿಯಂತೆ ತಾಲ್ಲೂಕಿನಲ್ಲಿ ದಾಖಲೆಯ ಸಂಖ್ಯೆಯ ಸಣ್ಣ ನೀರಾವರಿ ಕೆರೆಗಳು ನಿರ್ಮಿಸಲಾಗಿದೆ. ಇವು ಈಗ ಹಳೆಯದಾಗಿದ್ದು, ಇವುಗಳ ಬಲವರ್ಧನೆಯ ಅಗತ್ಯವಿದೆ. ಜತೆಗೆ ಕೆರೆಯ ಪ್ರಾಂಗಣ ಹೂಳು ತೆರವುಗೊಳಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದೆ. ಆಗ ನಿಗದಿತ ಪ್ರಮಾಣದಲ್ಲಿ ಈ ಕೆರೆಗಳು ಕೃಷಿ ಚಟುವಟಿಕೆಗೆ ಮತ್ತು ಅಂತರ್ಜಲ‌ವೃದ್ಧಿಗೆ ಮಹತ್ವದ ಕೊಡುಗೆ ನೀಡುವುದರಲ್ಲಿ ಸಂದೇಹವಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ