
ಕಲಬುರಗಿಯಲ್ಲಿ ಹೊಸ ಪೊಲೀಸ್ ಠಾಣೆಗಳ ಆರಂಭಕ್ಕೆ ಒತ್ತಾಯ
ಕಲಬುರಗಿ: ‘ನಗರದ ಬ್ರಹ್ಮಪುರ, ಸ್ಟೇಷನ್ ಬಜಾರ್, ಅಶೋಕನಗರ, ಆರ್.ಜೆ. ನಗರ ಸೇರಿದಂತೆ 13 ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಹೆಚ್ಚಿಸಬೇಕು ಹಾಗೂ ನಗರದಲ್ಲಿ ನೂತನ ನಾಲ್ಕು ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪರಾಧ ಪ್ರಕರಣಗಳು ಕಡಿಮೆಯಾಗಬೇಕಾದರೆ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು. ಅಲ್ಲದೆ, ನಗರದ ಕೋಟನೂರು, ಹೈಕೋರ್ಟ್ ಹತ್ತಿರ, ನೂತನ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ವಿಶೇಷ ಮಹಿಳಾ ಠಾಣೆಯನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
‘ನಗರದ 13 ಪೊಲೀಸ್ ಠಾಣೆಗಳಲ್ಲಿ ಸೂಮಾರು 280ಕ್ಕೂ ಹೆಚ್ಚು ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ 70–80, ಅಶೋಕ ನಗರದಲ್ಲಿ 60–70, ಬ್ರಹ್ಮಪುರ ಠಾಣೆಯಲ್ಲಿ 40–50 ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗಳಲ್ಲಿ ಅನೇಕರು ಪ್ರತಿಭಟನೆ, ವಿಐಪಿಗಳ ಆಗಮನದ ಬಂದೋಬಸ್ತ್‌ನಲ್ಲಿ ನಿರತರಾಗಿರುತ್ತಾರೆ. ಜನಸಮಾನ್ಯರು ದೂರು ನೀಡಲು ಹೋದರೆ ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಕಾಯಬೇಕಾದ ಸ್ಥಿತಿ ಇದೆ’ ಎಂದರು.
‘2019ರಲ್ಲಿ ಕಲಬುರಗಿ ನಗರವನ್ನು ಆಯುಕ್ತಾಲಯವನ್ನಾಗಿ ಮಾಡಲಾಗಿದೆ. ಆದರೆ, ಪೊಲೀಸ್ ಆಯುಕ್ತಾಲಯಕ್ಕೆ ಬೇಕಾಗುವಷ್ಟು ಸಿಬ್ಬಂದಿಯನ್ನು ಹೆಚ್ಚಿಸಿಲ್ಲ. ಈ ಬಗ್ಗೆ ಈಗಾಗಲೇ ಪೊಲೀಸ್ ಅಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೂ ಈವರೆಗೆ ಸಿಬ್ಬಂದಿ ಹೆಚ್ಚಿಸಿಲ್ಲ’ ಎಂದರು.
‘ಜಿಲ್ಲೆಯಲ್ಲಿ ಶೀಘ್ರವೇ ಪೊಲೀಸ್ ಸಿಬ್ಬಂದಿ ಕೊರತೆ ನಿವಾರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದರು.
ಮಹಿಳಾ ಘಟಕದ ಜಿಲ್ಲಾಧಕ್ಷೆ ಶ್ರೀಮತಿ ಗೋರಂಪಳ್ಳಿ, ಕಾರ್ಯದರ್ಶಿ ಶ್ರೀದೇವಿ ಮುತ್ತಂಗಿ, ಜಿಲ್ಲಾಧ್ಯಕ್ಷ ಭಜರಂಗಸಿಂಗ್, ಶಾಹಿನ್, ಬಸವರಾಜ ಹಯ್ಯಾಳಕರ ಉಪಸ್ಥಿತರಿದ್ದರು.