ಚುನಾವಣಾ ಆಯುಕ್ತರ ದೂರಿನಂತೆ ಆಯೋಗದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಸಚಿವಾಲಯ!

ಚುನಾವಣಾ ಆಯುಕ್ತರ ದೂರಿನಂತೆ ಆಯೋಗದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಸಚಿವಾಲಯ!

ಚುನಾವಣಾ ಆಯುಕ್ತರ ದೂರಿನಂತೆ ಆಯೋಗದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ಸಚಿವಾಲಯ!

ನವದೆಹಲಿ: ಚುನಾವಣಾ ಆಯೋಗದ ಅಧಿಕಾರಿಯೊಬ್ಬರ ವಿರುದ್ಧ ಚುನಾವಣಾ ಆಯುಕ್ತರಿಬ್ಬರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಸಂಪುಟ ಸಚಿವಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಸಚಿವಾಲಯ, ಆಯುಕ್ತರು ಬರೆದಿರುವ ಪತ್ರಗಳು ವೈಯಕ್ತಿಕ ನೆಲೆಯಲ್ಲಿವೆ. ಇಡೀ ಆಯೋಗವೇ ಅಧಿಕೃತವಾಗಿ ಪತ್ರ ಬರೆದಿಲ್ಲದ ಕಾರಣ, ಈ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದೆ.

ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು, ಆಯೋಗದ ಉಪ ಆಯುಕ್ತ ಮನೀಶ್‌ ಗಾರ್ಗ್‌ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ, ಸಚಿವಾಲಯದ ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಅವರಿಗೆ ಜುಲೈ 29ರಂದು ಬರೆದಿದ್ದ ಪ್ರತ್ಯೇಕ ಪತ್ರ ಸಂಬಂಧ ಆರ್‌ಟಿಐ ಕಾರ್ಯಕರ್ತ ಲೋಕೇಶ್‌ ಕೆ. ಬಾತ್ರಾ ಅರ್ಜಿ ಸಲ್ಲಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯ, ‘ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮುಕ್ತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಆಯೋಗದ ಕೆಲಸ ಮತ್ತು ಕಾರ್ಯನಿರ್ವಹಣೆಯು ಚುನಾವಣಾ ಆಯೋಗದ ನಿಯಮಗಳು ಮತ್ತು ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುತ್ತದೆ. ಆಯುಕ್ತರಿಬ್ಬರು ಬರೆದಿರುವ ಪತ್ರಗಳು ವೈಯಕ್ತಿಕ ನೆಲೆಯಲ್ಲಿವೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆಯಾದರೂ, ಇಡೀ ಆಯೋಗದ ಅಧಿಕೃತ ಪತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಮುಂದುವರಿದು, ಗಾರ್ಗ್ ಅವರನ್ನು ಸಂಪುಟ ನೇಮಕಾತಿ ಸಮಿತಿ (ಎಸಿಸಿ) ನೇಮಕ ಮಾಡಿದ್ದರೂ, ಅವರು ಈಗ ಚುನಾವಣಾ ಆಯೋಗದ ಅಧಿಕಾರಿಯಾಗಿದ್ದಾರೆ. ಅವರ ಕಾರ್ಯಶೈಲಿಯನ್ನು ಚುನಾವಣಾ ಆಯೋಗದ ನಿಯಮಗಳು, ಮಾರ್ಗಸೂಚಿಗಳ ಅನುಸಾರವೇ ನಿಯಂತ್ರಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಉತ್ತರಿಸಿದೆ.

ಆಯೋಗದ ಕೆಲಸವನ್ನು ಸರ್ವಾನುಮತದಿಂದ ನಡೆಸಬೇಕು ಎಂಬುದನ್ನು ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಆಯುಕ್ತರ ಕಾಯ್ದೆ – 2023’ ಹೇಳುತ್ತದೆ ಎಂದು ಉಲ್ಲೇಖಿಸಿದೆ.

‘ಅಧಿಕಾರಿಯ ವಿರುದ್ಧ ಆಯೋಗದ ವತಿಯಿಂದ ಯಾವುದೇ ಅಧಿಕೃತ ಪತ್ರ ಬಂದಿಲ್ಲವಾದ್ದರಿಂದ ಅಧಿಕಾರಿಯ ವಿರುದ್ಧ ಕೈಗೊಳ್ಳುವ ಯಾವುದೇ ಕ್ರಮವನ್ನು ಸಾಂವಿಧಾನಿಕ ಸಂಸ್ಥೆಯ ಕಾರ್ಯದಲ್ಲಿನ ಹಸ್ತಕ್ಷೇಪ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ಆಯುಕ್ತರಿಬ್ಬರಿಗೆ ಸ್ವೀಕೃತಿ ಪತ್ರ ಕಳುಹಿಸಿ, ಮುಖ್ಯ ಚುನಾವಣಾ ಆಯುಕ್ತರಿಗೆ ಮಾಹಿತಿ ನೀಡುವುದು ಸೂಕ್ತ’ ಎಂದು ತಿಳಿಸಿದೆ.

ಎಸಿಸಿಯು ಗಾರ್ಗ್‌ ಅವರನ್ನು 2024ರ ಸೆಪ್ಟೆಂಬರ್‌ 2ರಂದು ಆಯೋಗಕ್ಕೆ ನಿಯೋಜಿಸಿದೆ.

‘ಸಂಧು ಮತ್ತು ಜೋಶಿ ಅವರು ಚುನಾವಣಾ ಆಯೋಗದೊಳಗೆ ಕೆಲಸ ಹಂಚಿಕೆಗೆ ವಿಚಾರವಾಗಿ ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಮತದಾದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವ ಹಾಗೂ ಸೇರಿಸುವ ಅಧಿಕಾರವನ್ನು ರಾಜ್ಯ ಮಟ್ಟದ ಅಧಿಕಾರಿಗಳಿಗೆ ನೀಡುವ ಬದಲು ಕೇಂದ್ರ ಮಟ್ಟದಲ್ಲಿಯೇ ಉಳಿಸಿಕೊಳ್ಳುವ ಆಯೋಗದ ಆದೇಶದ ಬಗ್ಗೆ ಅವರಿಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ’ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಸೆಪ್ಟೆಂಬರ್‌ನಲ್ಲಿ ವರದಿ ಮಾಡಿತ್ತು

ಇದೇ ವಿಚಾರವಾಗಿ ಸೆಪ್ಟೆಂಬರ್ 26ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಚುನಾವಣಾ ಆಯೋಗ, ಕೆಲಸ ಮರುಹಂಚಿಕೆ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿ ಹೊರಡಿಸಿರುವ ಆದೇಶವನ್ನು ಆಯುಕ್ತರಿಬ್ಬರ ನಿರ್ದೇಶನಗಳ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿಲ್ಲ ಎಂದು ತಿಳಿಸಿತ್ತು. ಹಾಗೆಯೇ, ಸಂಧು ಮತ್ತು ಜೋಶಿ ಬರೆದಿರುವ ಪತ್ರಗಳು ನೀತಿ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದವುಗಳಾಗಿರದೆ, ನಿಯೋಜನೆಯ ಮೇಲೆ (ಡೆಪ್ಯುಟೇಷನ್‌) ಆಯೋಗದಲ್ಲಿರುವ ಅಧಿಕಾರಿಯೊಬ್ಬರಿಗೆ ಸಂಬಂಧಪಟ್ಟವು ಎಂದು ಹೇಳಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ