
ಕೆರೆಗಳ ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುವುದನ್ನು ತಡೆಯಿರಿ: ದಾವಣಗೆರೆ ಡಿಸಿ
ದಾವಣಗೆರೆ: ಕೆರೆಗಳ ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುವುದನ್ನು ತಡೆಯಬೇಕು. ಜಲಮೂಲಗಳ ಸುತ್ತ ಅನುಮತಿ ಇಲ್ಲದೇ ಕೊಳವೆಬಾವಿ ಕೊರೆಯುವುದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ನೆಲ-ಜಲ ಮತ್ತು ಮಳೆನೀರು ಸಂಗ್ರಹ’ ಕುರಿತು ಗುರುವಾರ ಏರ್ಪಡಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸೆಪ್ಟೆಂಬರ್‌ನಲ್ಲಿ 6.9 ಮೀಟರ್‌ನಷ್ಟಿದ್ದ ಅಂತರ್ಜಲ ಮಟ್ಟವು 7.1 ಮೀಟರ್‌ಗೆ ಕುಸಿದಿದೆ. ಇದು ಅಪಾಯದ ಮುನ್ಸೂಚನೆ. ಹೊಲಗಳಲ್ಲಿ ಬದುಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕು. ಮಳೆ ನೀರು ಮರುಪೂರಣದತ್ತ ಒಲವು ತೋರಬೇಕು. ಸರ್ಕಾರಿ ಕಚೇರಿ, ವಸತಿ ಗೃಹ, ಪೊಲೀಸ್ ಠಾಣೆ, ವಸತಿ ಶಾಲೆ ಹಾಗೂ ಉದ್ಯಾನಗಳಲ್ಲಿ ಇಂಗುಗುಂಡಿ ನಿರ್ಮಿಸಬೇಕು’ ಎಂದು ಸೂಚಿಸಿದರು.
‘ಹುಚ್ಚವ್ವನಹಳ್ಳಿ ಕೆರೆಯ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ ಪಹಣಿ ಇಂಡೀಕರಣ ಆಗಿಲ್ಲ. ಸ್ಥಳ ಪರಿಶೀಲನೆ ನಡೆಸಲು ಆದೇಶಿಸಿ ತಿಂಗಳು ಕಳೆದರೂ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಕರ್ತವ್ಯ ಲೋಪ ಎಸಗಿರುವ ಕಂದಾಯ ನಿರೀಕ್ಷಕರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಸಂಬಂಧಪಟ್ಟ ತಹಶೀಲ್ದಾರ್‌ಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿ’ ಎಂದು ಸೂಚಿಸಿದರು.
‘ನಲ್ಕುದುರೆ’ ಕೆರೆ ಒತ್ತುವರಿ ತೆರವು ಮತ್ತು ಇಂಡೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಸೂಳೆಕೆರೆ ವ್ಯಾಪ್ತಿಯಲ್ಲಿನ ಒತ್ತುವರಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಮಗ್ರ ವರದಿ ರವಾನಿಸಬೇಕು. ಕೆರೆ ಮತ್ತು ಜಲಮೂಲಗಳ ಒತ್ತುವರಿ ತೆರವುಗೊಳಿಸದಿದ್ದರೆ ಲೋಕಾಯುಕ್ತ ಸಂಸ್ಥೆ ಹಾಗೂ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತವೆ’ ಎಂದು ಎಚ್ಚರಿಕೆ ನೀಡಿದರು.
‘ಭದ್ರಾ ಮತ್ತು ತುಂಗಾ ನಾಲೆಯ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ತಕ್ಷಣವೇ ಇಂಡೀಕರಣ ಮಾಡಬೇಕು. ದಾವಣಗೆರೆ ನಗರದಲ್ಲಿ ನಾಲೆಯ ರಸ್ತೆಗಳನ್ನು ಖಾಸಗಿ ಬಡಾವಣೆಯ ರಸ್ತೆಗಳನ್ನಾಗಿ ಬಿಂಬಿಸಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಕ್ಷಣ ತಡೆಯಬೇಕು’ ಎಂದು ‘ಧೂಡಾ’ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
‘ರಸ್ತೆಗಳಿಗೆ ಪೈಪ್ ಅಳವಡಿಸಿ’
ಕಾಂಕ್ರಿಟ್ ಹಾಗೂ ಟಾರ್ ರಸ್ತೆ ಅಭಿವೃದ್ಧಿಪಡಿಸುವಾಗಲೇ ಪ್ರತಿ 200 ಮೀಟರ್‌ಗೆ 3 ಇಂಚಿನ ಪೈಪ್‌ಗಳನ್ನು ಅಡ್ಡವಾಗಿ ಅಳವಡಿಸಬೇಕು. ಇದರಿಂದ ಪದೇ ಪದೇ ರಸ್ತೆಗಳನ್ನು ಅಗೆಯುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
‘ಅಭಿವೃದ್ಧಿಪಡಿಸಿದ ಬಡಾವಣೆಗಳ ಪ್ರತಿ ನಿವೇಶನಗಳ ಮೂಲೆಗಳಲ್ಲಿ ಸಸಿಗಳನ್ನು ನೆಡಬೇಕು. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿರುವ ಮನೆಗಳ ಜಿಯೋ ಟ್ಯಾಗಿಂಗ್ ಮಾಡಿ ‘ಜಲಶಕ್ತಿ ಅಭಿಯಾನ’ದ ಜಾಲತಾಣಕ್ಕೆ ಹಾಕಬೇಕು’ ಎಂದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಯಲು ಕೆರೆಗಳ ಜೀರ್ಣೋದ್ಧಾರ ಹಾಗೂ ನೂತನ ಕೆರೆಗಳ ನಿರ್ಮಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
‘ಮಲೇಬೆನ್ನೂರು ಸರ್ವೆ ನಂಬರ್ 141 ಮತ್ತು 142 ಹಾಗೂ ಚನ್ನಗಿರಿ ದೊಡ್ಡೇರಿಕಟ್ಟೆಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ’ ಎಂದರು.