
ಕಾರವಾರ| ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ತಾರತಮ್ಯ: ಬಿ.ಎನ್.ವಾಸರೆ
ಕಾರವಾರ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಜಿಲ್ಲೆಯ ಸಾಧಕರನ್ನು ಕಡೆಗಣಿಸಿದ್ದ ರಾಜ್ಯ ಸರ್ಕಾರದ ನಡೆಗೆಜಿಲ್ಲೆಯಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗಿದ ಬೆನ್ನಲ್ಲೇ ಪಟ್ಟಿ ಬದಲಿಸಿ, ಕೊನೆ ಕ್ಷಣದಲ್ಲಿ ಒಬ್ಬರನ್ನು ಆಯ್ಕೆ ಮಾಡಿದೆ. ಈ ಬೆಳವಣಿಗೆಗೆ ಜಿಲ್ಲೆಯ ಶಾಸಕರು ಟೀಕೆಗೆ ಗುರಿಯಾಗಿದ್ದಾರೆ.
ವಿವಿಧ ಕ್ಷೇತ್ರದ 71 ಮಂದಿ ಸಾಧಕರನ್ನು ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ. ಈ ಹಿಂದಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಒಬ್ಬರಾದರೂ ಸಾಧಕರು ಆಯ್ಕೆ ಆಗುತ್ತಿದ್ದರು.
ಸಮಾಜ ಸೇವೆ ಕ್ಷೇತ್ರದ ಸಾಧನೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಡಾ.ಜಿ.ಎಸ್.ಚಂದ್ರಶೇಖರ್ ಅವರನ್ನುಆಯ್ಕೆ ಮಾಡಿ, ಅವರನ್ನು ಉತ್ತರ ಕನ್ನಡ ಜಿಲ್ಲೆಯವರು ಎಂದು ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲಿ, ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರ ಹೆಸರನ್ನು ಘೋಷಿಸಲಾಗಿದೆ.
‘ಕಲೆ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಹತ್ತಾರು ಸಾಧಕರು ಜಿಲ್ಲೆಯಲ್ಲಿದ್ದಾರೆ.ಅವರ ಪೈಕಿ ಬಹುತೇಕ ಮಂದಿ ಈವರೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದಿಲ್ಲ. ಅಂತಹವರನ್ನು ಗುರುತಿಸುವ ಕೆಲಸ ಸರ್ಕಾರವಂತೂ ಮಾಡಿಲ್ಲ. ಇಲ್ಲಿನ ಶಾಸಕರು ಸಾಧಕರ ಹೆಸರು ಶಿಫಾರಸು ಮಾಡುವ ಔದಾರ್ಯತೆ ತೋರಿಸಿಲ್ಲ. ಜನರ ವಿರೋಧದ ಬಳಿಕ ಕೊನೆ ಕ್ಷಣದಲ್ಲಿ ಪಟ್ಟಿ ಬದಲಿಸಿ, ಕಣ್ಣೊರೆಸುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ’ ಎಂಬ ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
‘ಸಾಂಸ್ಕೃತಿಕ ಕ್ಷೇತ್ರಕ್ಕೆ ಅನ್ಯಾಯ’
‘ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾಧಕರಿಗೆ ಗೌರವ ನೀಡದೆ, ನಿರ್ಲಕ್ಷಿಸಿದ್ದು ಖಂಡನೀಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದ್ದಾರೆ.
‘ಈ ಹಿಂದೆ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯ ಸಂದರ್ಭದಲ್ಲಿಯೂ ಜಿಲ್ಲೆಗೆ ಅನ್ಯಾಯ ಮಾಡಲಾಗಿತ್ತು. ಸಾಂಸ್ಕೃತಿಕ ಅನುದಾನ, ಗೌರವ ವಿಚಾರಗಳಲ್ಲಿ ಉತ್ತರ ಕನ್ನಡ ನಿರ್ಲಕ್ಷಿಸಲಾಗುತ್ತಿದೆ’ ಎಂದರು.
‘ಇಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಅದಕ್ಕೂ ಹೆಚ್ಚಿನ ಗೌರವದ ಪ್ರಶಸ್ತಿಯನ್ನು ಪಡೆಯುವ ಅರ್ಹರಿದ್ದಾರೆ. ಸಮರ್ಥ ಸಾಹಿತಿಗಳು ಕಲಾವಿದರು ಸೇರಿದಂತೆ ಹಲವು ವಿಭಾಗಗಳಲ್ಲಿ ಹೆಸರು ಮಾಡಿದವರಿದ್ದಾರೆ. ಅವರನ್ನೆಲ್ಲ ಗುರುತಿಸಬೇಕಿತ್ತು’ ಎಂದು ಹೇಳಿದ್ದಾರೆ.
‘ಧ್ವನಿ ಎತ್ತದ ಆಡಳಿತಾರೂಢ ಶಾಸಕರು’
‘ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಅನೇಕ ಅರ್ಹ ಸಾಧಕರಿದ್ದರೂ ಅರ್ಹರಿಗೆ ಪ್ರಶಸ್ತಿ ನೀಡದೆ ವಂಚಿಸಲಾಗಿದೆ. ವಿರೋಧಧ ಬಳಿಕ ಪಟ್ಟಿ ಬದಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಹೇಳಿದ್ದಾರೆ.
‘ಜಿಲ್ಲೆಯ ಅರ್ಹ ಸಾಧಕರ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಜನಪ್ರತಿನಿಧಿಗಳು ಆಸಕ್ತಿ ತೋರಿಸಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಸಾಧಕರ ಹಲವು ವರ್ಷಗಳ ಪರಿಶ್ರಮ ಮತ್ತು ಸೇವೆಗೆ ಸರ್ಕಾರ ನೀಡುವ ಮಾನ್ಯತೆಯಾಗಿದೆ. ಇಂತಹ ಮಹತ್ವದ ಪ್ರಶಸ್ತಿ ಆಯ್ಕೆಯಲ್ಲಿ ಪ್ರಾದೇಶಿಕ ನ್ಯಾಯ ಹಾಗೂ ಅರ್ಹತೆಗೆ ಆದ್ಯತೆ ನೀಡಬೇಕು. ಜಿಲ್ಲೆಯ ಸಾಧಕರಿಗೆ ಸೂಕ್ತ ಮನ್ನಣೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.