
ಉಪ್ಪಿನಂಗಡಿ | ತಲವಾರು ಕಾಳಗ: ಮೂವರ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ: ಇಲ್ಲಿನ ಶೆಣೈ ಆಸ್ಪತ್ರೆ ಮುಂಭಾಗದ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ತಲವಾರ್‌ನಂಥ ಆಯುಧದೊಂದಿಗೆ ಜಗಳ ನಿರತ ಇಬ್ಬ ರನ್ನು ಉಪ್ಪಿನಂಗಡಿ ಪೊಲೀಸರು ಬಂಧಿ ಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮದ್ಯದ ಮತ್ತಿನಲ್ಲಿ ಮುನ್ನಾ ಯಾನೆ ಗೋಪಾಲ ಶೆಟ್ಟಿ ಎಂಬಾತ ಮಂಜುನಾಥ ಎಂಬಾತನ ಮನೆಯವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ವೇಳೆ ಮಂಜುನಾಥ ಎಂಬಾತ ತಲವಾರಿನಿಂದ, ವಿಶ್ವನಾಥ ಎಂಬಾತ ಬಿಯರ್ ಬಾಟ್ಲಿಯೊಂದಿಗೆ ಹೊಡೆದಾಟಕ್ಕೆ ಯತ್ನಿಸುತ್ತಿದ್ದ ವೇಳೆ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಜಗಳ ನಿರತ ಮೂವರ ಪೈಕಿ ಮುನ್ನಾ ಯಾನೆ ಗೋಪಾಲ ಶೆಟ್ಟಿ ಘಟನಾ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜುನಾಥ ಎಂಬಾತನ ವಿರುದ್ಧ ಈ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಧರ್ಮಸ್ಥಳ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.