
ಶಿಡ್ಲಘಟ್ಟಕ್ಕೆ 500 ವರ್ಷಗಳ ಇತಿಹಾಸ: ಶಿಲಾಯುಗದಿಂದ ವಿಜಯನಗರದವರೆಗಿನ ಶಾಸನ
ಶಿಡ್ಲಘಟ್ಟ: ರೇಷ್ಮೆ ಕೃಷಿ, ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಂದ ಗುರುತಿಸಿಕೊಂಡಿರುವ ಶಿಡ್ಲಘಟ್ಟಕ್ಕೆ ಈಗ ಐದು ಶತಮಾನಗಳ ಇತಿಹಾಸದ ಸಂಭ್ರಮ.
1526ರಲ್ಲಿ ಶಿಡ್ಲಘಟ್ಟ ಸ್ಥಾಪನೆಯಾಯಿತು ಎಂಬ ಸ್ಥಳೀಯ ಐತಿಹ್ಯವಿದೆ. ಆದರೆ, ಈ ನೆಲದ ಇತಿಹಾಸ ಅದಕ್ಕಿಂತಲೂ ಹಿಂದಿನದು. ಶಿಲಾಯುಗದ ಕುರುಹುಗಳಿಂದ ಆರಂಭವಾಗಿ ಗಂಗರು, ನೊಳಂಬರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಆಡಳಿತದವರೆಗೆ ವ್ಯಾಪಿಸಿರುವ ಶ್ರೀಮಂತ ಪರಂಪರೆ ಇಲ್ಲಿದೆ.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಕೊಂಡದಲ್ಲಿ ದೊರೆತ ಶಿಲಾಯುಗದ ಕಲ್ಲಿನ ಆಯುಧಗಳು ಹಾಗೂ ಮದ್ದೇಗಾರಹಳ್ಳಿಯ ಗುಡ್ಡದಲ್ಲಿರುವ ಬೃಹತ್ ಶಿಲಾಯುಗದ ಸಮಾಧಿಗಳು ಈ ಪ್ರದೇಶದ ಪ್ರಾಚೀನತೆ ಸಾರುತ್ತವೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಮಾನವ ವಸತಿ ಇತ್ತು ಎಂಬುದಕ್ಕೆ ಕುರುಹುಗಳ ಲಭ್ಯವಿವೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದೊರೆತ ಶಾಸನಗಳು ಇಲ್ಲಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬದುಕಿನ ಚಿತ್ರಣ ನೀಡುತ್ತವೆ. ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟ 10ರಲ್ಲಿ 103 ಶಾಸನಗಳು, 17ನೇ ಸಂಪುಟದ ಅನುಬಂಧದಲ್ಲಿ ಏಳು ಶಾಸನಗಳು ಹಾಗೂ ಪುರಾತತ್ವ ಇಲಾಖೆ ವರದಿಗಳಲ್ಲಿ ಮತ್ತಷ್ಟು ಶಾಸನಗಳು ದಾಖಲಾಗಿವೆ. ಕನ್ನಡ, ತಮಿಳು ಮತ್ತು ನಂದಿನಾಗರಿ ಲಿಪಿಗಳಲ್ಲಿರುವ ಈ ದಾಖಲೆಗಳು ಇಲ್ಲಿನ ಐತಿಹಾಸಿಕ ಮಹತ್ವವನ್ನು ಎತ್ತಿಹಿಡಿಯುತ್ತವೆ.
ಗಂಗರ ಕಾಲದ ದಾನ ಶಾಸನಗಳಿಂದ ಆರಂಭವಾಗಿ ಚೋಳರ ಕಾಲದ ದೇವಾಲಯ ನಿರ್ಮಾಣ, ಭೂದಾನ, ನೀರಾವರಿ ಮತ್ತು ವಾಣಿಜ್ಯ ಚಟುವಟಿಕೆಗಳವರೆಗೆ ಅನೇಕ ಸಂಗತಿಗಳು ಶಾಸನಗಳಲ್ಲಿ ದಾಖಲಾಗಿವೆ. ವಿಜಯನಗರದ ಅರಸರ ಕಾಲದಲ್ಲಿ ಅಗ್ರಹಾರಗಳ ಸ್ಥಾಪನೆ, ಸಂತೆಗಳ ಆರಂಭ, ದೇವಾಲಯಗಳ ನಿರ್ಮಾಣ ಮತ್ತು ಕಲಾವಿದರಿಗೆ ನೀಡಿದ ಪ್ರೋತ್ಸಾಹದ ವಿವರಗಳೂ ದೊರೆಯುತ್ತವೆ. ಸುಗಟೂರು ವೀರಶೈವ ಅರಸು ಮನೆತನ ಹಾಗೂ ಆವತಿ ನಾಡಪ್ರಭುಗಳು ಈ ಪ್ರದೇಶದ ಆಡಳಿತ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
‘ಶಿಡ್ಲಘಟ್ಟ’ ಹೆಸರು ಬಂದಿದ್ದು ಹೀಗೆ: ಸ್ಥಳೀಯ ಐತಿಹ್ಯದ ಪ್ರಕಾರ, ಉಜನಿ ಪಟ್ಟಣದ ಕೆಂಪೇಗೌಡನ ಪತ್ನಿ ಹಲಸೂರಮ್ಮ 1526ರಲ್ಲಿ ಅಬ್ಲೂಡು ಗ್ರಾಮದ ಪರಿಸರದಲ್ಲಿ ಹೊಸ ಊರು ಸ್ಥಾಪಿಸಿ, ತನ್ನ ಮಾವ ಸಿಡಿಲಗೌಡನ ಹೆಸರಿನಿಂದ ಅದಕ್ಕೆ ‘ಶಿಡ್ಲಘಟ್ಟ’ ಎಂದು ನಾಮಕರಣ ಮಾಡಿದರು. ಕೆಂಪೇಗೌಡನ ಮಗ ಶಿವನೇಗೌಡ 1529ರಲ್ಲಿ ಅಧಿಕಾರ ವಹಿಸಿಕೊಂಡು, ಗೌಡನಕೆರೆಯನ್ನು ಮತ್ತು ಹಲಸೂರಮ್ಮ ಅಮ್ಮನಕೆರೆಯನ್ನು ನಿರ್ಮಿಸಿದರು ಎಂದು ಇತಿಹಾಸದ ದಾಖಲೆಗಳು ಹಾಗೂ ಸ್ಥಳೀಯ ಪರಂಪರೆ ತಿಳಿಸುತ್ತವೆ. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಶಿಡ್ಲಘಟ್ಟ ಎಂದು ನಾಮಕರಣ ಮಾಡಲಾಯಿತು.
ನಂತರ ಮರಾಠರು, ವಿಜಾಪುರ ಸುಲ್ತಾನರು, ಮೊಘಲರು ಮತ್ತು ಬ್ರಿಟಿಷರ ಆಡಳಿತಕ್ಕೂ ಈ ಪ್ರದೇಶ ಒಳಪಟ್ಟಿತ್ತು.