
WPL 2027: ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದ ಕೋಚ್ ಈಗ ಮುಂಬೈ ಇಂಡಿಯನ್ಸ್‌ಗೆ ಶಿಫ್ಟ್
WPL 2027: ಡಬ್ಲ್ಯೂಪಿಎಲ್ 2027ರ ಆವೃತ್ತಿಯ ಹರಾಜು ಪ್ರಕ್ರಿಯೆ ಮಂಬರುವ ತಿಂಗಳಿನ ಕೊನೆಯಲ್ಲಿ ನಡೆಯಲಿದೆ. ಇದೀಗ ಇದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಎತ್ತುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೋಚ್ ಮುಂಬೈ ಇಂಡಿಯನ್ಸ್‌ಗೆ ಶಿಫ್ಟ್ ಆಗಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2027ರ ಆವೃತ್ತಿಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರನ್ನು ತಮ್ಮ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಇಲ್ಲಿಯವರೆಗೆ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಿಸಾ ಕೀಟ್ಲಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ಲಿಸಾ ಅವರು ಸೆಪ್ಟೆಂಬರ್ 2025ರಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದ ಕೋಚ್ ಮುಂಬೈಗೆ ಶಿಫ್ಟ್
ಇನ್ನೂ ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ತರಬೇತುದಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 2024ರ ಡಬ್ಲ್ಯೂಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಮುಖ್ಯ ಕೋಚ್ ಆಗಿದ್ದ ಇವರು, ಚೊಚ್ಚಲ ಟ್ರೋಫಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರದ ಆವೃತ್ತಿಯಲ್ಲೂ ಆರ್‌ಸಿಬಿ ಜೊತೆಗಿದ್ದ ಅವರು, ಮಹಿಳಾ ಬಿಗ್ ಬ್ಯಾಷ್ ಲೀಗ್ ಜವಾಬ್ದಾರಿಗಳತ್ತ ಗಮನ ಹರಿಸಲು ಈ ಬಾರಿ ಹೊರಬಂದಿದ್ದರು.
ಎಂಐ ಸೇರಿದ ಬಗ್ಗೆ ವಿಲಿಯಮ್ಸ್ ಹೇಳಿದ್ದೇನು?
ಹೊಸ ಜವಾಬ್ದಾರಿ ವಹಿಸಿಕೊಂಡ ನಂತರ ಮಾತನಾಡಿದ ಲ್ಯೂಕ್ ವಿಲಿಯಮ್ಸ್ ಅವರು, 'ಮುಂಬೈ ಇಂಡಿಯನ್ಸ್ ಜೊತೆ ಹೊಸ ಪಯಣ ಆರಂಭಿಸುತ್ತಿರುವುದು ಸಂತಸ ತಂದಿದೆ. ಅತ್ಯುತ್ತಮ ಕ್ರಿಕೆಟ್ ಆಡುವ ಮೂಲಕ ಮತ್ತೊಮ್ಮೆ ಯಶಸ್ಸು ಕಾಣಲು ಹಾಗೂ ಬಲಿಷ್ಠ ತಂಡವನ್ನು ಕಟ್ಟುವುದು ನಮ್ಮ ಆದ್ಯತೆಯಾಗಿದೆ,' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಅವರು ವಿಲಿಯಮ್ಸ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದು, 'ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಆಟಗಾರರನ್ನು ಬೆಳೆಸುವ ಹಾಗೂ ಪಂದ್ಯಗಳನ್ನು ಗೆಲ್ಲಿಸುವ ಅವರ ಸಾಮರ್ಥ್ಯ ತಂಡಕ್ಕೆ ದೊಡ್ಡ ಬಲ ತರಲಿದೆ,' ಎಂದು ಹೇಳಿದ್ದಾರೆ.
ತರಬೇತುದಾರರಾಗಿ ಲ್ಯೂಕ್ ವಿಲಿಯಮ್ಸ್ ಸಾಧನೆಗಳು
ಲ್ಯೂಕ್ ವಿಲಿಯಮ್ಸ್ ಕೇವಲ ಡಬ್ಲ್ಯೂಪಿಎಲ್‌ನಲ್ಲಿ ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ವಿವಿಧ ಕ್ರಿಕೆಟ್ ಲೀಗ್‌ಗಳಲ್ಲಿ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಡಬ್ಲ್ಯೂಬಿಬಿಎಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಕೋಚ್ ಆಗಿದ್ದು, ದಿ ಹಂಡ್ರೆಡ್ ಟೂರ್ನಿಯಲ್ಲಿ 'ಸೌದರ್ನ್ ಬ್ರೇವ್' ಮಹಿಳಾ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅಡಿಲೇಡ್ ಸ್ಟ್ರೈಕರ್ಸ್ ಪುರುಷರ ತಂಡಕ್ಕೂ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಹಿನ್ನಡೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್
ಡಬ್ಲ್ಯೂಪಿಎಲ್ 2026ರ ಆವೃತ್ತಿಯಲ್ಲಿ ಲಿಸಾ ಕೀಟ್ಲಿ ಅವರ ಮಾರ್ಗದರ್ಶನದಲ್ಲಿ ಆಡಿದ್ದ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಹಿನ್ನಡೆ ಅನುಭವಿಸಿತ್ತು. ಇದು ಟೂರ್ನಿಯ ಇತಿಹಾಸದಲ್ಲೇ ಮುಂಬೈ ತಂಡದ ಅತ್ಯಂತ ಕಡಿಮೆ ಸಾಧನೆಯಾಗಿತ್ತು. ಮುಂಬೈ ಇಂಡಿಯನ್ಸ್ ತಂಡವು 2023ರಲ್ಲಿ ಚೊಚ್ಚಲ ಆವೃತ್ತಿಯ ಕಪ್ ಗೆದ್ದಿದ್ದರೆ, 2025ರಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು.
ಹೊಸ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಲ್ಯೂಕ್ ವಿಲಿಯಮ್ಸ್ ಅವರ ಮುಂದಿರುವ ಮೊದಲ ಸವಾಲೆಂದರೆ ಸೆಪ್ಟೆಂಬರ್ 28ರ ಒಳಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸುವುದು. ಡಬ್ಲ್ಯೂಪಿಎಲ್ 2027ರ ಪಂದ್ಯಗಳು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದ್ದು, ಅದಕ್ಕಾಗಿ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.