
Vastu Tips: ರಾತ್ರಿ ಹೊತ್ತಲ್ಲಿ ಕಸ ಗುಡಿಸುವುದರಿಂದ ಲಕ್ಷ್ಮೀ ಮುನಿಸಿಕೊಳ್ಳೋದ್ಯಾಕೆ? ಇದರ ಹಿಂದಿನ ನಿಜವಾದ ಕಾರಣ ಇಲ್ಲಿದೆ
Vastu Tips: ಸೂರ್ಯಾಸ್ತದ ನಂತರ ಮನೆ ಗುಡಿಸಬಾರದು ಎಂದು ಹಿರಿಯರು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆದರೆ ಈಗಿನ ಕಾಲದಲ್ಲಿ ಇದೆಲ್ಲಾ ಮೂಢ ನಂಬಿಕೆ ಎನ್ನುತ್ತಾ ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದವರೂ ಇದ್ದಾರೆ. ಆದರೆ ಈ ಸಂಪ್ರದಾಯವು ಕೇವಲ ಮೂಢ ನಂಬಿಕೆಯೇ? ಅಥವಾ ಅದನ್ನು ಮೀರಿದ ಸತ್ಯ ಇದರ ಹಿಂದೆ ಅಡಗಿದೆಯಾ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸಂಜೆ ಮೇಲೆ ಮನೆ ಕಸ ಗುಡಿಸಬಾರದು ಎನ್ನುವುದಕ್ಕೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹಲವು ಪ್ರಮುಖ ವಾದಗಳನ್ನು ನೀಡಲಾಗಿದೆ. ರಾತ್ರಿ ವೇಳೆ ಮನೆ ಗುಡಿಸುವುದನ್ನು, ಕಸ ಹೊರ ಹಾಕುವುದನ್ನು ಯಾಕೆ ನಿಷೇಧಿಸಲಾಗಿದೆ ಎನ್ನುವ ಸತ್ಯದ ಬಗೆಗಿನ ಮಾಹಿತಿಯನ್ನು ನಾವಿಲ್ಲಿ ಹೇಳ್ತೇವೆ.
ಸಂಜೆ ಮೇಲೆ ಕಸ ಗುಡಿಸಬಾರದು
ಹಿಂದೂ ಧರ್ಮದಲ್ಲಿ ಪೊರಕೆಯನ್ನು ಕೇವಲ ಸ್ವಚ್ಛಗೊಳಿಸಲು ಮಾತ್ರ ಬಳಸುವುದಿಲ್ಲ. ಇದು ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಸಂಕೇತ ಎನ್ನುವ ನಂಬಿಕೆಯೂ ಇದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮೀ ದೇವಿಯು ಸಂಜೆ ದೀಪ ಬೆಳಗಿಸಿದ ನಂತರ ಮನೆಯನ್ನು ಪ್ರವೇಶ ಮಾಡುತ್ತಾಳೆ. ಈ ಸಮಯದಲ್ಲಿ ಮನೆಯಲ್ಲಿ ಶಾಂತಿಯುತ ಮತ್ತು ಪವಿತ್ರ ವಾತಾವರಣವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಈ ಹೊತ್ತಿನಲ್ಲಿ ಮನೆ ಗುಡಿಸುವುದೆಂದರೆ ಲಕ್ಷ್ಮೀಗೆ ಅವಮಾನ ಮಾಡಿದ ಹಾಗೆಯಂತೆ. ಒಂದು ಇದನ್ನ ಮೀರಿದರೆ ಆರ್ಥಿಕ ಸಂಕಷ್ಟ ಮತ್ತು ಬಡತನ ಎದುರಾಗುತ್ತದೆ ಎಂದು ಹೇಳಲಾಗುತ್ತದೆ.
ಸಂಜೆಯ ವೇಳೆ ರಾಹು-ಕೇತುವಿನ ಪ್ರಭಾವ ಹೆಚ್ಚಾಗುತ್ತದೆ
ಜ್ಯೋತಿಷ್ಯದ ಪ್ರಕಾರ, ಸಮಯ ಮತ್ತು ಗ್ರಹಗಳ ಚಲನೆ ಜೀವನದಲ್ಲಿ ನಿರ್ಣಾಯಕವಾಗಿದೆ. ಶಾಸ್ತ್ರಗಳ ಪ್ರಕಾರ, ರಾಹು ಮತ್ತು ಕೇತುವಿನಂತಹ ಗ್ರಹಗಳು ರಾತ್ರಿಯ ಸಮಯದಲ್ಲಿ ಪ್ರಭಾವಕ್ಕೆ ಒಳಗಾಗುತ್ತವೆ. ಈ ಕಾರಣಕ್ಕಾಗಿ ಈ ಗ್ರಹಗಳು ವ್ಯಕ್ತಿಯ ಮನಸ್ಸು ಮತ್ತು ಮನೆಯ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಮನೆಯನ್ನು ಗುಡಿಸುವುದು, ಒರೆಸುವುದು ಮಾಡಿದರೆ ಮನೆಯಲ್ಲಿ ಅಶಾಂತಿ ಮತ್ತು ಅನಗತ್ಯ ಸಂಘರ್ಷದ ವಾತಾವರಣ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಯಾವಾಗಲೂ ಹಗಲು ಹೊತ್ತಿನಲ್ಲಿ ಗುಡಿಸುವುದು, ಒರೆಸುವುದು, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳನ್ನು ಮಾಡಬೇಕು ಅಂತ ಹೇಳ್ತಾರೆ. ಯಾಕಂದ್ರೆ, ಹಗಲಿನಲ್ಲಿ ಸೂರ್ಯನ ಬೆಳಕು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.
ಮನೆಯೊಳಗೆ ಶಕ್ತಿಯ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಸೂರ್ಯಾಸ್ತದ ನಂತರ, ಮನೆಯೊಳಗಿನ ಸಕಾರಾತ್ಮಕ ಶಕ್ತಿಯು ಹೊರಹೋಗಲು ಪ್ರಾರಂಭಿಸುತ್ತದೆ. ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಲ್ಲಿ ನೆಲವನ್ನು ಗುಡಿಸುವುದೆಂದರೆ ಮನೆಯ ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ತತ್ವಗಳ ಪ್ರಕಾರ, ರಾತ್ರಿ ಹೊತ್ತು ಮನೆ ಸ್ವಚ್ಛಗೊಳಿಸದೇ ಇರುವುದೇ ಬುದ್ಧಿವಂತಿಕೆಯಾಗಿದೆ. ಇಲ್ಲವಾದರೆ ಕುಟುಂಬ ಸದಸ್ಯರ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎನ್ನಲಾಗಿದೆ.
ರಾತ್ರಿ ಗುಡಿಸಲೇಬೇಕಂದ್ರೆ ಏನು ಮಾಡಬೇಕು?
ಕೆಲವೊಮ್ಮೆ ರಾತ್ರಿಯಲ್ಲಿ ಗುಡಿಸಲೇಬೇಕು ಎನ್ನುವ ಅನಿವಾರ್ಯತೆ ಎದುರಾಗಬಹುದು. ಉದಾಹರಣೆಗೆ, ಮನೆಯಲ್ಲಿ ಗಾಜು ಅಥವಾ ಕಸ ಬಿದ್ದರೆ, ಅದನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಸರಳ ಪರಿಹಾರವನ್ನು ನೀಡಲಾಗಿದೆ. ನೀವು ರಾತ್ರಿ ಗುಡಿಸಿದರೆ, ತಕ್ಷಣ ಕಸವನ್ನು ಕಸದ ಬುಟ್ಟಿಗೆ ಎಸೆಯಿರಿ. ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ರಾತ್ರಿ ಹೊತ್ತು ಮನೆಯೊಳಗಿನ ಕಸವನ್ನು ಹೊರಗೆ ಎಸೆಯಬಾರದು.
ಆರೋಗ್ಯ, ಹಳೆಯ ಜೀವನಶೈಲಿಗೆ ಸಂಬಂಧಿಸಿದ ಪ್ರಾಯೋಗಿಕ ಕಾರಣಗಳು
ಪ್ರಾಚೀನ ಕಾಲದಲ್ಲಿ, ವಿದ್ಯುತ್ ಮತ್ತು ಬೆಳಕು ಇಲ್ಲದೇ ಇದ್ದಾಗ ಜನರು ರಾತ್ರಿಯಲ್ಲಿ ದೀಪದ ಮಂದ ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದರು. ಕತ್ತಲೆಯಲ್ಲಿ ಗುಡಿಸುವುದು ಎಂದರೆ ಚಿನ್ನ ಅಥವಾ ಹಣದಂತಹ ಬೆಲೆಬಾಳುವ ವಸ್ತುಗಳು ಕೊಳಕು ಕಸದ ಜೊತೆಗೆ ಹೊರಕ್ಕೆ ಹೋಗುವ ಅಪಾಯವಿತ್ತು. ಗಾಳಿಯ ಧೂಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುವುದನ್ನು ತಡೆಯಲು ಹಿರಿಯರು ರಾತ್ರಿ ಹೊತ್ತು ಕ್ಲೀನಿಂಗ್ ಮಾಡೋದನ್ನು ವಿರೋಧಿಸುತ್ತಿದ್ದರು. ಈ ಸಂಪ್ರದಾಯವು ಇಂದಿಗೂ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.