
TMC ಮೈತ್ರಿ ತಿರಸ್ಕರಿಸಿದ ಕಾಂಗ್ರೆಸ್: ಬಂಗಾಳದಲ್ಲಿ ನೆಲೆ ಕಂಡುಕೊಳ್ಳುವತ್ತ ಚಿತ್ತ
ನವದೆಹಲಿ/ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮುಂದಿನ ತಿಂಗಳು ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೀಡಿದ್ದ ಮೈತ್ರಿ ಆಫರ್ ಅನ್ನು ಕಾಂಗ್ರೆಸ್ ತಿರಸ್ಕರಿಸಿದೆ.
ಉಪಚುನಾವಣೆ ನಡೆಯಲಿರುವ ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಸ್ಪರ್ಧೆ ಮಾಡಲು ಟಿಎಂಸಿ ನಾಯಕರು ಬಯಸಿದ್ದರು. ಈ ಬಗ್ಗೆ ಬಂಗಾಳದ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಮಾಡಿದ್ದರು. ರೇಜಿನಗರದಲ್ಲಿ ಟಿಎಂಸಿ ಸ್ಪರ್ಧೆ ಮಾಡಲಿದ್ದು, ನಂದಿಗ್ರಾಮದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿ ಎಂದು ಟಿಎಂಸಿ ನಾಯಕರು ಪ್ರಸ್ತಾವ ಇಟ್ಟಿದ್ದರು. ಆದರೆ ಕಾಂಗ್ರೆಸ್ ಹೈಮಾಂಡ್ ಟಿಎಂಸಿ ನೀಡಿದ ಆಫರ್ ಅನ್ನು ತಿರಸ್ಕಾರ ಮಾಡಿದೆ.
ಎರಡು ಕ್ಷೇತ್ರಗಳಿಂದ ಗೆದ್ದಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದ ಭಬಾನಿಪುರ ಕ್ಷೇತ್ರವನ್ನು ಅವರು ಉಳಿಸಿಕೊಂಡಿದ್ದಾರೆ.
ಎರಡೂ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಿ ಪಕ್ಷದ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಅಧಿಕಾರ ಕಳೆದುಕೊಂಡಿರುವ ಟಿಎಂಸಿ, ತನ್ನ ರಾಜಕೀಯ ನೆಲೆಯನ್ನು ಉಳಿಸಿಕೊಳ್ಳಲು ಹಾಗೂ 2029ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಕಸರತ್ತು ನಡೆಸಿತ್ತು ಎನ್ನಲಾಗಿದೆ.
ಆದರೆ, ಬಂಗಾಳದಲ್ಲಿ ಈ ಹಿಂದೆ ಕಳೆದುಕೊಂಡಿರುವ ಅಸ್ತಿತ್ವವನ್ನು ಮರಳಿ ಪಡೆಯುವುದಕ್ಕೆ ಕಾಂಗ್ರೆಸ್ ಆದ್ಯತೆ ನೀಡಿದೆ. ಇಲ್ಲಿ ಮಮತಾ ಬ್ಯಾನರ್ಜಿ ಪ್ರಬಲ ಶಕ್ತಿಯಾಗಿ ಬೆಳೆದ ನಂತರ ಕಾಂಗ್ರೆಸ್‌ನ ಮತಬ್ಯಾಂಕ್ ಟಿಎಂಸಿ ಪಾಲಾಗಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ತೀವ್ರ ಮುಖಭಂಗ ಅನುಭವಿಸಿರುವ ಟಿಎಂಸಿ ಜೊತೆ ಮೈತ್ರಿ ಮಾಡಿಕೊಂಡರೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಆತಂಕವೂ ಕಾಂಗ್ರೆಸ್‌ಗೆ ಇದೆ. ಮತ್ತೊಂದೆಡೆ, ಸಂಸದರು, ಶಾಸಕರು ಸರಣಿ ರಾಜೀನಾಮೆ ನೀಡುತ್ತಿದ್ದಾರೆ. ಪಕ್ಷದ ತಳಮಟ್ಟದಲ್ಲೂ ರಾಜೀನಾಮೆ ಪರ್ವ ಆರಂಭವಾಗಿದೆ. ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವನ್ನು ಒಟ್ಟಾಗಿ ಹಿಡಿದಿಡಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಸೋಲಿನ ಸುಳಿಯಲ್ಲಿ ಟಿಎಂಸಿ
2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಈ ಮೈತ್ರಿಯು 34 ವರ್ಷಗಳ ಸುದೀರ್ಘ ಎಡರಂಗ ಆಡಳಿತವನ್ನು ಅಂತ್ಯಗೊಳಿಸಿತ್ತು. 2009ರ ಲೋಕಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಎನ್‌ಡಿಎಯಿಂದ ಹೊರಬಂದು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. 2009ರ ಚುನಾವಣೆಯಲ್ಲಿ ಟಿಎಂಸಿ 19 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿದ್ದವು.
ಆದರೆ, 2014ರ ಲೋಕಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಟಿಎಂಸಿ 34 ಸ್ಥಾನಗಳನ್ನು ಗೆದ್ದು ಲೋಕಸಭೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್ ದೇಶದಾದ್ಯಂತ 44 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
ಬಂಗಾಳದಲ್ಲಿ ಪ್ರಬಲವಾಗಿ ಬೆಳೆದಿದ್ದ ಟಿಎಂಸಿ, ನಂತರದ ದಿನಗಳಲ್ಲಿ ಗೋವಾ, ಮೇಘಾಲಯ, ಅಸ್ಸಾಂ ಮತ್ತು ತ್ರಿಪುರಾದಂತಹ ಸಣ್ಣ ರಾಜ್ಯಗಳಲ್ಲಿ ತನ್ನ ಪ್ರಭಾವ ವಿಸ್ತರಿಸಲು ಯತ್ನಿಸಿತು. ಇಲ್ಲಿ ಕಾಂಗ್ರೆಸ್ ಪಕ್ಷವನ್ನೇ ತನ್ನ ಪ್ರಮುಖ ಎದುರಾಳಿಯನ್ನಾಗಿ ಮಾಡಿಕೊಂಡಿತ್ತು.
ಹೀಗಾಗಿ, ಬಂಗಾಳದ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕಾಂಗ್ರೆಸ್ ತೀರ್ಮಾನ ಕೇವಲ ತಂತ್ರಗಾರಿಕೆಯಷ್ಟೇ ಅಲ್ಲ, ಟಿಎಂಸಿ ಬೆಳವಣಿಗೆಯಿಂದ ತಾನು ಕಳೆದುಕೊಂಡಿದ್ದ ರಾಜಕೀಯ ನೆಲೆಯನ್ನು ಮರಳಿ ಪಡೆಯುವುದಾಗಿದೆ.