
Tiptur Copra: ಪ್ರಸ್ತುತ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ
Tiptur Copra Price: ಕಲ್ಪತರು ನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೊಬ್ಬರಿಗೆ ಭಾಡಿ ಬೇಡಿಕೆಯಿದೆ. ಈಗಾಗಲೇ ಇಲ್ಲಿನ ಎಪಿಎಂಸಿಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಉದಾಹರಣೆಗಳಿವೆ. ಹಾಗಾದ್ರೆ ಇದೀಗ ಪ್ರಸ್ತುತ ಅಂದರೆ ಆಗಸ್ಟ್ 27ರಂದು ಕ್ವಿಂಟಾಲ್ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದ ಪ್ರಸಿದ್ಧ ತೆಂಗು ಹಾಗೂ ಕೊಬ್ಬರಿ ವಹಿವಾಟಿನ ಪ್ರಮುಖ ಕೇಂದ್ರವಾಗಿರುವ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಇದೀಗ ತುಸು ಇಳಿಕೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪ್ರತಿ ಕ್ವಿಂಟಾಲ್ (100 ಕೆ.ಜಿ) ಧಾರಣೆಯು 31,500 ರೂಪಾಯಿ ತಲುಪಿತ್ತು. ಆದರೆ ಈಗ 30,518 ರೂಪಾಯಿಗೆ ಇಳಿದಿದೆ. ಇದರಿಂದ ತೆಂಗು ಬೆಳೆಗಾರರ ಮುಖದಲ್ಲಿ ಸಂತಸವೂ ಕಡಿಮೆಯಾದಂತಾಗಿದೆ.
ತಿಪಟೂರು ಕೊಬ್ಬರಿಯ ವಿಶೇಷತೆ ಏನು?
ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಬ್ಬ-ಹರಿದಿನಗಳು ಹತ್ತಿರ ಆಗುತ್ತಿರುವುದರಿಂದ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ತಿಪಟೂರು ಕೊಬ್ಬರಿ ತನ್ನ ವಿಶಿಷ್ಟ ರುಚಿ, ಹೆಚ್ಚಿನ ಎಣ್ಣೆಯಂಶಕ್ಕೆ ಹೆಸರುವಾಸಿಯಾಗಿದೆ. ಇದರಿಂದಾಗಿ ಕಲ್ಪತರು ನಾಡಿನ ಕೊಬ್ಬರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಹೇಳಬಹುದು.
ಇತ್ತೀಚಿನ ಹವಾಮಾನ ವೈಪರೀತ್ಯ ಹಾಗೂ ಇಳುವರಿಯಲ್ಲಿ ಆದ ವ್ಯತ್ಯಾಸದಿಂದ ಮಾರುಕಟ್ಟೆಗೆ ಬರುವ ಕೊಬ್ಬರಿಯ ಪ್ರಮಾಣ ಕಡಿಮೆಯಾಗಿದ್ದು, ಬೆಲೆ 30,000 ಇದೆ. ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗೆಯೇ ಇದೀಗ ತುಸು ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಭರವಸೆಯಲ್ಲಿ ತೆಂಗು ಬೆಳೆಗಾರರಿದ್ದಾರೆ.
ಮತ್ತೊಂದೆಡೆ ಹೇಳುವುದಾದರೆ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಇಲ್ಲಿನ ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಬೆಲೆ ಸಿಗುತ್ತಿದೆ. ಇದರಿಂದ ಇಲ್ಲಿನ ಕೊಬ್ಬರಿ ಬೆಳೆಗಾರರಲ್ಲಿ ವಿಶ್ವಾಸವನ್ನು ಹೆಚ್ಚಿದೆ. ಬರುವ ದಿನಗಳಲ್ಲಿ ಬೆಲೆ ಮತ್ತೆ ಹೆಚ್ಚಳ ಆಗುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ತಿಪಟೂರು ಕೊಬ್ಬರಿಗೆ ಭಾರಿ ಬೇಡಿಕೆ ಏಕೆ?
* ಸ್ಥಳೀಯ ಮಾರುಕಟ್ಟೆಗಳ ಜೊತೆಗೆ ಹೊರರಾಜ್ಯಗಳಲ್ಲಿಯೂ (ವಿಶೇಷವಾಗಿ ಉತ್ತರ ಭಾರತದಲ್ಲಿ) ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಇದೆ.
* ಹಬ್ಬಗಳು ಮತ್ತು ಶುಭ ಸಮಾರಂಭಗಳ ವೇಳೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
* ರೈತರು ಮತ್ತು ವ್ಯಾಪಾರಸ್ಥರ ಬಳಿ ಇದ್ದ ಹಳೆಯ ಕೊಬ್ಬರಿಯ ದಾಸ್ತಾನುಗಳು ಬಹುತೇಕ ಖಾಲಿಯಾಗಿವೆ.
* ಹೊಸ ಕೊಬ್ಬರಿ ಮಾರುಕಟ್ಟೆಗೆ ಬರಲು ಸಮಯ ಹಿಡಿಯುತ್ತಿದೆ.
* ತಿಪಟೂರು ಕೊಬ್ಬರಿ ತನ್ನ ವಿಶೇಷ ರುಚಿ ಮತ್ತು ಬಾಳಿಕೆಗೆ ಹೆಸರುವಾಸಿ.
* ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 'ಗ್ರೇಡ್-1' ಕೊಬ್ಬರಿಯ ಕೊರತೆ ಇರುವುದರಿಂದ, ಸಿಗುತ್ತಿರುವ ಗುಣಮಟ್ಟದ ಈ ಕೊಬ್ಬರಿಗೆ ವ್ಯಾಪಾರಸ್ಥರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ.
* ತೆಂಗಿನ ಎಣ್ಣೆ ಮತ್ತು ಇತರ ಉಪ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿದೆ.