
Sandalwood Film: ‘ಪವರ್‌ಮ್ಯಾನ್‘ ಯುವ ರಾಜ್‌ಕುಮಾರ್
‘ಎಕ್ಕ’ ಸಿನಿಮಾ ಬಳಿಕ ಯುವ ರಾಜ್‌ಕುಮಾರ್ ಅವರ ಸಿನಿಮಾ ಯಾವುದು ಎನ್ನುವುದಕ್ಕೆ ಉತ್ತರ ದೊರಕಿದೆ. ‘ಕಾಟೇರ’ ಕಥೆಗಾರ ಹಾಗೂ ‘ಲ್ಯಾಂಡ್‌ಲಾರ್ಡ್’ ನಿರ್ದೇಶಕ ಜಡೇಶ್ ಕೆ.ಹಂಪಿ ಆ್ಯಕ್ಷನ್ ಕಟ್ ಹೇಳಲಿರುವ ‘ಪವರ್‌ಮ್ಯಾನ್’ನಲ್ಲಿ ಯುವ ನಾಯಕರಾಗಿ ನಟಿಸಲಿದ್ದಾರೆ.
ಗಣೇಶ ಚತುರ್ಥಿಯಂದು ಚಿತ್ರದ ಶೀರ್ಷಿಕೆಯನ್ನು ರಾಘವೇಂದ್ರ ರಾಜ್‌ಕುಮಾರ್ ಅನಾವರಣಗೊಳಿಸಿದರು. ತರುಣ್ ಕಿಶೋರ್ ಸುಧೀರ್ ಹಾಗೂ ಜಗದೀಶ್ ಗೌಡ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ‘ದಿ ಗ್ರೇಟೆಸ್ಟ್ ಪವರ್ ಈಸ್ ಗುಡ್ ಹಾರ್ಟ್’ ಎಂಬ ಅಡಿಬರಹ ಈ ಸಿನಿಮಾಗಿದೆ.
ಚಿತ್ರದ ಕುರಿತು ಮಾಹಿತಿ ನೀಡಿದ ಜಡೇಶ್, ‘ಚಿತ್ರದ ಅಡಿಬರಹದ ಸಾಲೇ ಪ್ರಮುಖ ಕಥಾಹಂದರ ಎನ್ನಬಹುದು. ಇದು ಕೂಡ ಈ ನೆಲದ ಕಥೆ. ಈ ಹಿಂದಿನ ಚಿತ್ರಗಳಲ್ಲಿ ಈ ನೆಲದ ಕಥೆಯನ್ನು ಬೇರೆಬೇರೆ ರೀತಿಯಲ್ಲಿ ಹೇಳಿದ್ದೆ. ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳು ಈ ಚಿತ್ರದ ಪ್ರಮುಖ ಆಕರ್ಷಣೆ. ಯುವ ಅವರು ನೃತ್ಯ ಹಾಗೂ ಫೈಟ್ ಎರಡರಲ್ಲೂ ಪರಿಣಿತರು. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹಾಡುಗಳು ಬರಲಿವೆ. ಈಗ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪೂರ್ಣವಾಗಿವೆ. ಚಿತ್ರದ ಹೆಸರು ‘ಪವರ್‌ಮ್ಯಾನ್’. ಆದರೆ ಇದು ಪುನೀತ್ ರಾಜ್‌ಕುಮಾರ್ ಅವರ ಕುರಿತಾದ ಚಿತ್ರವಲ್ಲ. ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದರು.
‘ವರನಟ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರು ವಾಸವಿದ್ದ ಸ್ಥಳದಲ್ಲೇ ನಮ್ಮ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಅಟ್ಲಾಂಟ ನಾಗೇಂದ್ರ ಸಹ ನಿರ್ಮಾಪಕರಾಗಿದ್ದಾರೆ. ಇದೊಂದು ಎಲ್ಲರಿಗೂ ಆಪ್ತವಾಗುವ ಕಥೆಯನ್ನೊಳಗೊಂಡ ಚಿತ್ರ. ವಿಶೇಷವಾಗಿ ಮಕ್ಕಳಿಗೆ ಇದು ಇಷ್ಟವಾಗಲಿದೆ’ ಎಂದಿದ್ದಾರೆ ತರುಣ್ ಸುಧೀರ್.