
Lieutenant Shivani Jha: ಬೆನ್ನುಮೂಳೆ ಮುರಿದರೂ ಬಿಡದ ಛಲ: ಕನಸಿನ ಬೆನ್ನತ್ತಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆದ ಶಿವಾನಿ
Lieutenant Shivani Jha: ಜೀವನದಲ್ಲಿ ನಾವು ಏನಾಗಬೇಕು ಎನ್ನುವ ಕನಸು ಪ್ರತಿಯೊಬ್ಬರೂ ಕಾಣುತ್ತಾರೆ. ಆದರೆ ಪ್ರತಿಯೊಬ್ಬರು ಕಂಡ ಕನಸು ಸಾಕಾರವಾಗುತ್ತದೆ ಎಂದಲ್ಲ. ಕೆಲವರು ಕನಸು ಮಾತ್ರ ಕಾಣಬಹುದು ಆದರೆ ನನಸಾಗಿಸುವ ಪ್ರಯತ್ನಕ್ಕೆ ಕೈ ಹಾಕದೇ ಇರಬಹುದು. ಇನ್ನು ಕೆಲವರಿಗೆ ಪ್ರಯತ್ನವಿದ್ದರೂ ಅದೃಷ್ಟ ಕೈ ಹಿಡಿಯದೇ ಇರಬಹುದು. ಸಾಮಾನ್ಯವಾಗಿ ನಮ್ಮ ಪ್ರಯತ್ನ ಕೈಗೂಡದೇ ಹೋದಾಗ ಅದೃಷ್ಟದ ನೆಪ ಹೇಳಿ ಸುಮ್ಮನಾಗುವವರೇ ಹೆಚ್ಚು. ಆದರೆ ಮಧ್ಯಪ್ರದೇಶದ ಸತ್ನಾ ನಿವಾಸಿ ಶಿವಾನಿ ಝಾ ಇದಕ್ಕೆ ತದ್ವಿರುದ್ದ. ತನ್ನ ಕನಸಿನ ದಾರಿಯಲ್ಲಿ ಇವರಿಗೆ ಎದುರಾದ ಸಮಸ್ಯೆಗಳು ಒಂದೆರಡಲ್ಲ, ಆದರೆ ಎಲ್ಲವನ್ನೂ ಮೆಟ್ಟಿ ನಿಂತು ತನ್ನ ಗುರಿ ಸಾಧಿಸಿದ್ದಾರೆ.
ವೈಫಲ್ಯಗಳನ್ನು ಮೆಟ್ಟಿ ನಿಂತ ಶಿವಾನಿ
ತನ್ನ ಕನಸಿನ ಗುರಿ ಬೆನ್ನತ್ತಿದ್ದ ಶಿವಾನಿ ಪದೇ ಪದೇ ಕಂಡಿದ್ದು ವೈಫಲ್ಯಗಳನ್ನೇ. ಆದರೆ ಮರಳಿ ಯತ್ನವ ಮಾಡು ಎನ್ನುವಂತೆ ಹಠ ಬಿಡದೆ ಪ್ರಯತ್ನಗಳನ್ನು ಮುಂದುವರೆಸುತ್ತಾರೆ. ಅಸಲಿಗೆ ಇವರು ಕಲಿತದ್ದು ಎಂಜಿನಿಯರಿಂಗ್. ಇದಾದ ನಂತರ ಶಿವಾನಿಗೆ ಉತ್ತಮ ಕೆಲಸವೂ ಸಿಕ್ಕಿತು. ಆದರೆ ತಾನು ಭಾರತೀಯ ಸೇನೆಯ ಸಮವಸ್ತ್ರವನ್ನು ಧರಿಸಬೇಕು ಎನ್ನುವ ಕನಸು ಇವರದ್ದಾಗಿತ್ತು. ಎಸ್‌ಎಸ್‌ಬಿ ಸಂದರ್ಶನದಲ್ಲಿ ಹಲವಾರು ಬಾರಿ ರೆಜೆಕ್ಟ್ ಆಗುತ್ತಾರೆ. ವೈದ್ಯಕೀಯ ಕಾರಣಗಳಿಂದ ಅನರ್ಹಗೊಳ್ಳುತ್ತಾರೆ. ಅಪಘಾತದಲ್ಲಿ ಬೆನ್ನುಮೂಳೆಯೂ ಮುರಿಯುತ್ತದೆ. ಆದರೂ ಅವರು ಪ್ರಯತ್ನವನ್ನು ಬಿಡಲಿಲ್ಲ. ಕೊನೆಗೊಂದು ದಿನ ಶಿವಾನಿಯ ಕನಸು ನನಸಾಗುತ್ತದೆ. ಇವತ್ತು ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್.
ತಾಯಿಯ ವಿಶ್ವಾಸವೇ ದೊಡ್ಡ ಶಕ್ತಿ
ಶಿವಾನಿ ಝಾ ಮಧ್ಯಪ್ರದೇಶದ ಸತ್ನಾದಲ್ಲಿ ಜನಿಸಿದರು. ಅವರ ತಂದೆ ಸಂಜೀವ್ ಝಾ ಕಾರ್ಖಾನೆ ಮೇಲ್ವಿಚಾರಕರು ಮತ್ತು ತಾಯಿ ಪ್ರತಿಭಾ ಝಾ ಗೃಹಿಣಿ. ಶಿವಾನಿ ಸಣ್ಣವಳಾಗಿರುವಾಗಲೇ ಅವರ ತಾಯಿ ತಮ್ಮ ಮಗಳು ಒಂದು ದಿನ ಅಧಿಕಾರಿಯಾಗುತ್ತಾಳೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಈ ನಂಬಿಕೆ ಶಿವಾನಿಯಲ್ಲಿಯೂ ಅಚಲವಾಗಿ ಬೇರೂರಿ ಬಿಟ್ಟಿತು.
ಶಿವಾನಿ ಪೋಷಕರು ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವತ್ತೂ ಭೇದ ಮಾಡಲೇ ಇಲ್ಲ. ಅನೇಕ ಕುಟುಂಬಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಲದಲ್ಲಿಯೇ ಅವರ ತಂದೆ ತಾಯಿ ಶಿವಾನಿಗೆ ನಗರದ ಉತ್ತಮ ಐಸಿಎಸ್‌ಇ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಾರೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಾರೆ. ದೊಡ್ಡ ಕನಸು ಕಾಣುವ ಸ್ವಾತಂತ್ರ್ಯವನ್ನು ನೀಡುತ್ತಾರೆ.
ಶಿವಾನಿ ಎಂಜಿನಿಯರ್ ಆದರೂ ಸೈನ್ಯಕ್ಕೆ ಸೇರುವುದು ಅವರ ಬಯಕೆ. ಶಿವಾನಿ ಗ್ವಾಲಿಯರ್‌ನ ಮಾಧವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ಕಾಲೇಜಿನಿಂದ ಕ್ಯಾಂಪಸ್ ಪ್ಲೇಸ್‌ಮೆಂಟ್ ಪಡೆದ ನಂತರ, ಅವರು ಟಿಸಿಎಸ್‌ನಲ್ಲಿ ಕೆಲಸ ಶುರು ಮಾಡುತ್ತಾರೆ. ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಸೈಬರ್ ಸೆಕ್ಯುರಿಟಿ ಕಂಪನಿಯಲ್ಲಿಯೂ ಕೆಲಸ ಮಾಡಿದರು. ಮೇಲ್ನೋಟಕ್ಕೆ, ಅವರ ಜೀವನವು ಯಶಸ್ವಿ ಎಂಜಿನಿಯರ್‌ನ ಜೀವನದಂತೆ ಕಾಣುತ್ತಿತ್ತು, ಆದರೆ ಶಿವಾನಿ ಬಯಸಿದ್ದು ಸೇನಾಧಿಕಾರಿಯಾಗುವುದನ್ನು.
ಶಿವಾನಿ ತನ್ನ ಕಾಲೇಜು ಸ್ನೇಹಿತರಿಂದ ಎಸ್‌ಎಸ್‌ಬಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಯಾವುದೇ ತರಬೇತಿಯಿಲ್ಲದೆ, ಮೊದಲ ಬಾರಿಗೆ ಪರೀಕ್ಷೆಯನ್ನು ತೆಗೆದುಕೊಂಡು ಮೊದಲ ಸುತ್ತಿನಲ್ಲಿ ಉತ್ತೀರ್ಣರಾಗುತ್ತಾರೆ. ಈ ದಾರಿ ಸುಲಭ ಎಂದುಕೊಳ್ಳುತ್ತಾರೆ. ಆದರೆ ನಿಜವಾದ ಹೋರಾಟ ಅಲ್ಲಿಂದಲೇ ಪ್ರಾರಂಭವಾದದ್ದು.
ಎಸ್‌ಎಸ್‌ಬಿ ಸ್ಕ್ರೀನಿಂಗ್ ಹಂತದಲ್ಲಿ ಆಕೆ ಹಲವಾರು ಬಾರಿ ಪರೀಕ್ಷೆಯಿಂದ ಹೊರಗುಳಿಯುತ್ತಾರೆ. ಒಮ್ಮೆ ಅವರನ್ನು ವಾಯುಪಡೆಯ ವೈದ್ಯಕೀಯ ಪರೀಕ್ಷೆಗೆ ಅನರ್ಹ ಎಂದೂ ಘೋಷಿಸುತ್ತಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಸಂದರ್ಶನದ ಸಮಯದಲ್ಲಿ ಆಕೆಯ ಆತ್ಮವಿಶ್ವಾಸ ಕುಗ್ಗಿತು.ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಆರೋಗ್ಯ ಸಮಸ್ಯೆಗಳಿಂದಾಗಿ ಆಕೆ ಮತ್ತೊಂದು ಪ್ರಯತ್ನವನ್ನು ಕೈಬಿಡಬೇಕಾಯಿತು. ಇದೆಲ್ಲದರ ಹೊರತಾಗಿಯೂ, ಆಕೆ ಅಚಲಳಾಗಿದ್ದಳು. ಆಕೆ ದಿನವಿಡೀ ಕೆಲಸ ಮಾಡುತ್ತಿದ್ದಳು, ಬೆಳಿಗ್ಗೆ ಮತ್ತು ಸಂಜೆ ಮತ್ತು ರಜಾದಿನಗಳಲ್ಲಿ ತಯಾರಿ ನಡೆಸುತ್ತಿದ್ದಳು.
2023 ರಲ್ಲಿ, ಬೆಂಗಳೂರಿನಲ್ಲಿ ನಡೆದ SSB ಪರೀಕ್ಷೆಯ ಸಮಯದಲ್ಲಿ, ಅವರು ಗಂಭೀರ ಅಪಘಾತಕ್ಕೀಡಾದರು. ಅವರ ಬೆನ್ನುಮೂಳೆ ಮುರಿದುಹೋಗುತ್ತದೆ. ಮೂರು ತಿಂಗಳು ಹಾಸಿಗೆ ಹಿಡಿಯಬೇಕಾಗುತ್ತದೆ. ಶಿವಾನಿಗೆ ಸಾಮಾನ್ಯವಾಗಿ ನಡೆಯಲು ಸಹ ಕಷ್ಟವಾಯಿತು. ಈ ಕಷ್ಟದ ಸಮಯದಲ್ಲಿ ಅವಳ ಹೆತ್ತವರು ಜತೆ ನಿಲ್ಲುತ್ತಾರೆ. ಯಾವುದೇ ಕಾರಣಕ್ಕೂ ಸೋಲೊಪ್ಪದಂತೆ ಧೈರ್ಯ ತುಂಬುತ್ತಾರೆ.
ಜೀವನವನ್ನೇ ಬದಲಾಯಿಸಿದ ಕೊನೆಯ ಪ್ರಯತ್ನ
ತನ್ನ ಅಂತಿಮ SSB ಪರೀಕ್ಷೆಗೆ ಮುನ್ನ, ಶಿವಾನಿ ಒಂದು ಸಣ್ಣ ಬದಲಾವಣೆ ಮಾಡಿಕೊಂಡರು. ತನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡರು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಹೊಸ ಹುರುಪಿನಿಂದ ತನ್ನ ಕೊನೆಯ ಪ್ರಯತ್ನವನ್ನು ಮಾಡಲಿದ್ದೇನೆ ಎಂಬ ಭಾವನೆ ಮೂಡಿಸಿತು. ಕೊನೆಗೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ SSB ಸಂದರ್ಶನದಲ್ಲಿ ಅವರು ಆಯ್ಕೆಯಾಗುತ್ತಾರೆ. ಅವರ ಜಾಯಿನಿಂಗ್ ಲೆಟರ್ ಕೈ ಸೇರಿದ ಬಳಿಕ ಅವರು ತನ್ನ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ.
ಇಂದು ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ. ಸೆಪ್ಟೆಂಬರ್ 2024 ರಲ್ಲಿ, ಶಿವಾನಿ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ತರಬೇತಿಯನ್ನು ಪ್ರಾರಂಭಿಸಿದರು. ಒಂದು ವರ್ಷದ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಸೆಪ್ಟೆಂಬರ್ 2025 ರಲ್ಲಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.
ಯುವಕರಿಗೆ ಶಿವಾನಿಯ ಸಂದೇಶ
ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ ಎನ್ನುವುದು ಶಿವಾನಿಯ ಅಚಲ ನಂಬಿಕೆ. ವೈಫಲ್ಯಗಳು ಬರುತ್ತವೆ, ಆದರೆ ನಾವು ಅದನ್ನು ಹಿಂದಿಕ್ಕಬೇಕು. ಗುರಿ ಸ್ಪಷ್ಟವಾಗಿದ್ದರೆ, ಎಂದಿಗೂ ಬಿಟ್ಟುಕೊಡಬಾರದು. ಯಾವುದೇ ದೊಡ್ಡ ಕನಸನ್ನು ಸಾಧಿಸಲು ಸ್ಥಿರವಾದ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸ ಮುಖ್ಯ ಎನ್ನುತ್ತಾರೆ.