
ಕಸ ಗುಡಿಸುವ ಕೆಲಸವೂ ಸಿಗಲ್ಲ: ರಾಖಿ ಸಾವಂತ್ ವಿರುದ್ಧ ಗುಡುಗಿದ ಕಂಗನಾ ರನೌತ್
ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಮತ್ತು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅವರ ಬಗ್ಗೆ ಇತ್ತೀಚೆಗೆ ನಟಿ ರಾಖಿ ಸಾವಂತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬೆನ್ನಲ್ಲೇ ರಾಖಿ ವಿರುದ್ಧ ಕಂಗನಾ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿರುವ ಅವರು, ‘ರಾಖಿ ಅವರು ಸೋತ ಮತ್ತು ಕಹಿ ಮನಸ್ಸಿನವರಾಗಿದ್ದಾರೆ. ಇಂತಹ ಮನಸ್ಥಿತಿ ಇರುವವರು ತಮ್ಮ ವೈಫಲ್ಯ ಹಾಗೂ ಅಹಂಕಾರವನ್ನು ಸಮರ್ಥಿಸಿಕೊಳ್ಳಲು, ಯಶಸ್ವಿಯಾದ ಮಹಿಳೆಯರನ್ನು ಟೀಕಿಸುತ್ತಲೇ ಇರುತ್ತಾರೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು’ ಎಂದು ಉತ್ತರಿಸಿದ್ದಾರೆ.
ಯಾರಿಗೂ ನಿಮ್ಮ ಅಗತ್ಯವಿಲ್ಲ ಎಂದಿರುವ ರನೌತ್, ‘ ನೀವು ಕೂಡ ಯಶಸ್ಸಿಗಾಗಿ ಎಲ್ಲವನ್ನೂ ಮಾಡಲು ಸಿದ್ಧರಿದ್ದೀರಿ. ದುರದೃಷ್ಟವಶಾತ್ ಯಾರಿಗೂ ನಿಮ್ಮ ಅಗತ್ಯವಿಲ್ಲ. ನಿಮಗೆ ಕಸ ಗುಡಿಸುವ ಕೆಲಸವೂ ಸಿಗುವುದಿಲ್ಲ. ಆ ಕೆಲಸಕ್ಕೆ ಪ್ರತಿಭೆಯ ಅಗತ್ಯವಿದೆ. ನಾನು ಮಾಡುವ ರೀಲ್ಸ್ ನೋಡಿಕೊಂಡು ಕಣ್ಣೀರಿಡುತ್ತಿರಿ’ ಎಂದಿದ್ದಾರೆ.
ಕಂಗನಾ ಅವರು ರಾಖಿ ಅವರನ್ನು ಟೀಕಿಸಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ದೆಹಲಿಯಲ್ಲಿ ಸಿಜೆಪಿ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಕಂಗನಾ ಮಾತನಾಡಿದ್ದರು. ಇದನ್ನು ಟೀಕಿಸಿ ವಿಡಿಯೊ ಒಂದನ್ನು ರಾಖಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ‘ನಾಯಿಗಳು ಬೋಗಳುತ್ತವೆ’ ಎಂದಿದ್ದರು.