
Forest News: ಬಂಡೀಪುರ, ನಾಗರಹೊಳೆ ಸಫಾರಿ ಇಂದಿನಿಂದಲೇ ದುಬಾರಿ, ಹೊಸ ದರ ಹೇಗಿದೆ
ಬೆಂಗಳೂರು: ಮೂರು ವರ್ಷದ ಬಳಿಕ ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ದರವನ್ನುಏರಿಕೆ ಮಾಡಲಾಗಿದ್ದು, ಸೆಪ್ಟಂಬರ್ 1ರಿಂದಲೇ ಜಾರಿಗೆ ಬಂದಿವೆ.
ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಬಾರಿ ಸಫಾರಿಗೆ ಇದ್ದ ₹600 ದರವನ್ನು ₹1000ಕ್ಕೆ ಏರಿಕೆ ಮಾಡಲಾಗಿದೆ. ಹಿಂದೆಲ್ಲಾ ಒಂದು ಬಾರಿ ಸಫಾರಿ ಸಮಯ ಎರಡೂವರೆ ಗಂಟೆ ಇತ್ತು. ಅದನ್ನು ಮೂರು ಗಂಟೆಗೆ ಏರಿಸಲಾಗಿದೆ.
ಕರ್ನಾಟಕದಲ್ಲಿ ಸದ್ಯ ನಾಗರಹೊಳೆಯಲ್ಲಿ ಮೂರು, ಬಂಡೀಪುರದಲ್ಲಿ ಒಂದು, ಮಲೈಮಹದೇಶ್ವರ ವನ್ಯಧಾಮ, ಬಿಆರ್ ಟಿ, ಭದ್ರಾ ಹಾಗೂ ಅಣಶಿಯಲ್ಲಿ ತಲಾ ಒಂದು ಕಡೆ ಸಫಾರಿ ವ್ಯವಸ್ಥೆಯಿದೆ. ಅದೇ ರೀತಿ ಬನ್ನೇರುಘಟ್ಟ ಹಾಗೂ ಶಿವಮೊಗ್ಗ ತ್ಯಾವರೆಕೊಪ್ಪ ಸಿಂಹಧಾಮದಲ್ಲೂ ಸಫಾರಿ ಇದೆ. ಆದರೆ, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಮಾತ್ರ ಏರಿಕೆ ಮಾಡಲಾಗಿದೆ.
ಬಂಡೀಪುರದ ಮೇಲುಕಾಮನಹಳ್ಳಿ ಹಾಗೂ ನಾಗರಹೊಳೆಯ ದಮ್ಮನಕಟ್ಟೆ, ವೀರನಹೊಸಹಳ್ಳಿ ಹಾಗೂ ಕೊಡಗಿನ ನಾಣಚ್ಚಿ ಗೇಟ್ನಲ್ಲಿರುವ ಸಫಾರಿ ಕೇಂದ್ರಗಳಲ್ಲಿ ಹೊಸ ಸಫಾರಿ ದರ ಜಾರಿಗೆ ಬಂದಿದೆ.
ಈ ಬಾರಿ ತೈಲ ಬೆಲೆ ಏರಿಕೆ ಕಾರಣದಿಂದ ದರ ಪ್ರಮಾಣ ಶೇ 40ರಷ್ಟು ಏರಿಕೆ ಮಾಡಲಾಗಿದೆ. ಈಗ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಮಾತ್ರ ಜಾರಿಯಾಗಲಿದೆ. ಮುಂದೆ ಇತರೆಡೆಯಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ಮಾಡಲಾಗುವುದು ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ತಿಳಿಸಿದರು.